ಎಚ್‌.ಡಿ.ದೇವೇಗೌಡ
ಬೆಂಗಳೂರು: ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್‌ ಎಂಟರ್‌ಪ್ರೈಸಸ್‌ (ನೈಸ್‌) ನಡೆಸಿರುವ ಅಕ್ರಮಗಳ ಬಗ್ಗೆ ರಾಜ್ಯದಾದ್ಯಂತ ಹೋರಾಟ ನಡೆಸುವುದಾಗಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹೇಳಿದರು.

ಈ ಸಂಬಂಧ ರಾಜ್ಯಪಾಲರಿಗೆ ದೂರು ನೀಡಲು ಸಿದ್ಧತೆ ನಡೆಸಿರುವುದಾಗಿ ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.

‘ಸಿದ್ದರಾಮಯ್ಯ ಮತ್ತು ಖೇಣಿ ನಡುವೆ ಒಳ ಒಪ್ಪಂದ ಏನಾದರೂ ಇರಬಹುದು. ಖೇಣಿಯನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡ ಬಗ್ಗೆ ಅಸೂಯೆ ಇಲ್ಲ. ಅವರನ್ನು ಬೇಕಿದ್ದರೆ ಉಪ ಮುಖ್ಯಮಂತ್ರಿ ಮಾಡಿಕೊಳ್ಳಿ’ ಎಂದು ಅವರು ಲೇವಡಿ ಮಾಡಿದರು.

ನೈಸ್‌ ಅಕ್ರಮ ಕುರಿತು ಸಿಬಿಐ ಅಥವಾ ಜಾರಿ ನಿರ್ದೇಶನಾಲಯದ ಮೂಲಕ ತನಿಖೆ ನಡೆಸಲು ಸದನ ಸಮಿತಿ ಶಿಫಾರಸು ಮಾಡಿದೆ. ಆದರೆ, ಸರ್ಕಾರ ವರದಿಯನ್ನು ಬಹಿರಂಗ ಮಾಡಿಲ್ಲ. ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದೇವೇಗೌಡ ಕಿಡಿಕಾರಿದರು.

‘ಸಚಿವರಾದ ಕಾಗೋಡು ತಿಮ್ಮಪ್ಪ ಮತ್ತು ಕೆ.ಆರ್‌.ರಮೇಶ್‌ ಕುಮಾರ್‌ ವಿಧಾನಸಭೆಯ ಕಲಾಪದಲ್ಲಿ ನೈಸ್‌ ಮತ್ತು ಖೇಣಿ ಬಗ್ಗೆ ಏನೇನು ಮಾತನಾಡಿದ್ದರು ಎಂಬುದರ ದಾಖಲೆ ನನ್ನ ಬಳಿ ಇದೆ. ನೈಸ್‌ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಸದನ ಸಮಿತಿ ವರದಿ ಕೊಟ್ಟ ಮೇಲೆ ಯಾವ ಕ್ರಮ ತೆಗೆದುಕೊಂಡಿದ್ದಾರೆ? ಇದು ಸಿದ್ದರಾಮಯ್ಯ ಅವರ ಪಾರದರ್ಶಕ ಆಡಳಿತಕ್ಕೆ ನಿದರ್ಶನ’ ಎಂದರು.

‘ನೈಸ್‌ ಟೋಲ್‌ ಸಂಗ್ರಹ ಮಾಡಬಾರದು ಎಂದು ಸದನ ಸಮಿತಿ ಹೇಳಿತ್ತು. ಇದ್ಯಾವುದಕ್ಕೂ ಬೆಲೆ ನೀಡದ ನೈಸ್‌ ನ್ಯಾಯಾಲಯಕ್ಕೆ ಹೋಗಿ ಆದೇಶಕ್ಕೆ ತಡೆ ತರುತ್ತದೆ. ನಿಮ್ಮ ಮತ್ತು ಅವರ ನಡುವಿನ ಹೊಂದಾಣಿಕೆ ಏನು? ಅವರು ಮಾಡಿರುವ ಅಕ್ರಮಗಳನ್ನು ಮಾಫಿ ಮಾಡಿದ್ದೇನೆ ಎಂದಾದರೂ ಹೇಳಿ’ ಎಂದು ದೇವೇಗೌಡ ವಾಗ್ದಾಳಿ ನಡೆಸಿದರು.

‘ನೈಸ್‌ ಯೋಜನೆಯೇ ಒಂದು ಫ್ರಾಡ್‌. ಏನೇನು ಮೋಸ ಮಾಡಿದ್ದಾರೆ ಎಂಬುದನ್ನು ಅಧಿಕಾರಿಗಳೇ ಹೇಳಿದ್ದಾರೆ. ಅಕ್ರಮಗಳ ಬಗ್ಗೆ ಉನ್ನತಾಧಿಕಾರ ಸಮಿತಿಯಿಂದ ತನಿಖೆ ನಡೆಸಲು ಕುಮಾರಸ್ವಾಮಿಗೆ ಬಿಜೆಪಿಯವರು ಅವಕಾಶ ನೀಡಲಿಲ್ಲ. ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ತನಿಖೆ ಮಾಡಲಿಲ್ಲ. ಇದು ಬಿಜೆಪಿಯವರ ನಿಲುವು’ ಎಂದು ಅವರು ಟೀಕಿಸಿದರು.

‘ನಾನು ನೈಸ್‌ ಅಕ್ರಮಗಳ ಬಗ್ಗೆ ಮಾತನಾಡುತ್ತೇನೆ ಎಂಬ ಕಾರಣಕ್ಕೆ ಖೇಣಿ ನನ್ನ ಮೇಲೆ ₹ 10 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಈ ಅಕ್ರಮದ ಬಗ್ಗೆ ಬಿಜೆಪಿ ಮೌನ ವಹಿಸಿರುವುದು ಏಕೆ’ ಎಂದೂ ಅವರು ಪ್ರಶ್ನಿಸಿದರು.

ಬಿಜೆಪಿ ಅಧಿಕಾರಾವಧಿಯಲ್ಲಿ ಬಿಬಿಎಂಪಿಯಲ್ಲಿ ₹ 2500 ಕೋಟಿ ಹಗರಣ ನಡೆದಿದೆ. ಅದರ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಯಾವ ಕ್ರಮ
ತೆಗೆದುಕೊಂಡಿದ್ದಾರೆ ಎಂಬುದನ್ನು ಅವರು ವಿವರಿಸಲಿ ಎಂದು ಆಗ್ರಹಿಸಿದರು.

ಬಿಬಿಎಂಪಿ: ಬೆಂಬಲ ವಾಪಸ್‌ ಇಲ್ಲ ‘ಬಿಬಿಎಂಪಿಯಲ್ಲಿ ಕಾಂಗ್ರೆಸ್‌ಗೆ ನೀಡಿರುವ ಬೆಂಬಲ ಹಿಂದಕ್ಕೆ ಪಡೆಯುವುದಿಲ್ಲ. ಆದರೆ, ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸುತ್ತೇವೆ’ ಎಂದು ದೇವೇಗೌಡ ಹೇಳಿದರು.

ರಾಷ್ಟ್ರಪತಿ ಆಳ್ವಿಕೆ ಹೇರುವ ಸನ್ನಿವೇಶ
ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಸನ್ನಿವೇಶ ಸೃಷ್ಟಿಯಾಗಿದೆ ಎಂದು ದೇವೇಗೌಡ ಹೇಳಿದರು.

ಆಡಳಿತ ಸಂಪೂರ್ಣ ಕುಸಿದಿದ್ದು, ಹಗಲು ದರೋಡೆ ನಡೆಯುತ್ತಿದೆ. ಐ.ಟಿ– ಬಿ.ಟಿಯಲ್ಲಿ ಕೆಲಸ ಮಾಡುವವರ ತಂದೆ ತಾಯಂದಿರ ಮನೆಗಳ ದರೋಡೆ ಆಗುತ್ತಿದೆ ಎಂದು ಟೀಕಿಸಿದರು.

ಗೃಹ ಖಾತೆಯನ್ನು ಒಬ್ಬ ನಿವೃತ್ತ ಅಧಿಕಾರಿ ಕೈಗೆ ಒಪ್ಪಿಸಿದ್ದಾರೆ. ಅಧಿಕಾರ ಆ ವ್ಯಕ್ತಿಯ ಬಳಿ ಕೇಂದ್ರೀಕೃತವಾಗಿದೆ. ಆಡಳಿತಕ್ಕೆ ಲಂಗುಲಗಾಮು ಇಲ್ಲವಾಗಿದೆ ಎಂದು ಪರೋಕ್ಷವಾಗಿ ಕೆಂಪಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯಸಭೆಗೆ ಫಾರೂಕ್‌ ಕಣಕ್ಕೆ
ರಾಜ್ಯಸಭಾ ಚುನಾವಣೆಗೆ ಬಿ.ಎಂ.ಫಾರೂಕ್‌ ಅವರನ್ನು ಕಣಕ್ಕೆ ಇಳಿಸಲಾಗುವುದು ಎಂದು ದೇವೇಗೌಡ ತಿಳಿಸಿದರು.

‘ಅಲ್ಪಸಂಖ್ಯಾತರ ರಕ್ಷಕರು ಎನ್ನುವ ಕಾಂಗ್ರೆಸ್‌ನವರು ಅಲ್ಪಸಂಖ್ಯಾತ ಅಭ್ಯರ್ಥಿಗೆ ಯಾವ ಕಾರಣಕ್ಕೆ ಬೆಂಬಲ ನೀಡುವುದಿಲ್ಲ ಎಂಬುದನ್ನು ಹೇಳಬೇಕು. ನಮಗೆ ಕೆಲವು ಮತಗಳ ಕೊರತೆ ಇದೆ. ಕುಪೇಂದ್ರ ರೆಡ್ಡಿಗೆ ಬೆಂಬಲ ನೀಡುತ್ತೀರಿ, ಫಾರೂಕ್‌ಗೆ ಏಕೆ ಬೆಂಬಲ ನೀಡುವುದಿಲ್ಲ’ ಎಂದು ಪ್ರಶ್ನಿಸಿದರು.

By R

You missed