ಮೈಸೂರು: ‘ಸಿದ್ದರಾಮಯ್ಯ… ಅಖಾಡಕ್ಕೆ ಇಳಿಯೋಣ ಬಾ. ಗೆಲುವು ಯಾರಿಗೆ ಎಂಬುದನ್ನು ನೋಡೋಣ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಇಲ್ಲಿ ಗುರುವಾರ ಪಂಥಾಹ್ವಾನ ನೀಡಿದರು.

ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ‘ನನಗೆ ಈಗ 85 ವರ್ಷ. ಸಿದ್ದರಾಮಯ್ಯನಿಗೆ 61– 62 ವರ್ಷ ಇರಬಹುದು. ಆದರೂ ನನ್ನಲ್ಲಿ ಶಕ್ತಿ ಕಡಿಮೆಯಾಗಿಲ್ಲ. ನಿನ್ನ ಅಹಂಕಾರ, ಸೊಕ್ಕು ಮುರಿಯಲು ರಾಜ್ಯದ ಜನರು ನನ್ನೊಂದಿಗಿದ್ದಾರೆ’ ಎಂದು ಕಿಡಿಕಾರಿದರು.

‘ಎಲ್ಲೋ ಇದ್ದ ಸಿದ್ದರಾಮಯ್ಯ ಅವರನ್ನು ರಾಜಕೀಯದಲ್ಲಿ ಬೆಳೆಸಿದ್ದು ಯಾರು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ಕನಿಷ್ಠಪಕ್ಷ ಉಪಕಾರ ಸ್ಮರಣೆ, ಕೃತಜ್ಞತೆ ಇರಬೇಕು. ಆದರೆ ಮುಖ್ಯಮಂತ್ರಿಗೆ ಯಾವುದೂ ಇಲ್ಲ. ದುರಹಂಕಾರ, ಅಧಿಕಾರದ ಮದ ಬಹಳಷ್ಟು ದಿನ ಉಳಿಯುವುದಿಲ್ಲ. ಇನ್ನೆರಡು ತಿಂಗಳಲ್ಲಿ ಎಲ್ಲವೂ ಕೊನೆಗೊಳ್ಳಲಿದೆ’ ಎಂದು ಎಚ್ಚರಿಸಿದರು.

‘ಹಾಸನ ಮತ್ತು ಮೈಸೂರಿನಲ್ಲಿ ಜೆಡಿಎಸ್‌ ಸೋಲಿಸುತ್ತೇವೆ ಎಂದು ಸಿದ್ದರಾಮಯ್ಯ ಬೊಬ್ಬೆ ಹಾಕುತ್ತಿದ್ದಾರೆ. ಹಾಸನದಲ್ಲಿ ಏಳರಲ್ಲಿ ಏಳೂ ಸ್ಥಾನಗಳನ್ನು ಕಾಂಗ್ರೆಸ್‌ ಗೆಲ್ಲಲಿದೆ ಎನ್ನುತ್ತಿದ್ದಾರೆ. ಅದು ಹೇಗೆ ಗೆಲ್ಲುವರೋ ನೋಡೋಣ. ದೇವೇಗೌಡ ಇನ್ನೂ ಜೀವಂತವಾಗಿದ್ದಾನೆ. ಜೆಡಿಎಸ್‌ ಸೋಲುವವರೆಗೆ ನಾವೇನು ಕಡುಬು ತಿನ್ನುತ್ತಾ ಕುಳಿತಿರುವುದಿಲ್ಲ’ ಎಂದರು.

 

‘ಕಾಂಗ್ರೆಸ್‌ನವರು ಹಾಸನದಲ್ಲಿ 18ರಿಂದ 20 ಸಾವಿರ ಜನರನ್ನು ಸೇರಿಸಿ ಸಭೆ ನಡೆಸಿ ರಾಹುಲ್‌ ಗಾಂಧಿ ಎದುರು ಶೌರ್ಯ ಮೆರೆದಿದ್ದಾರೆ. ಏಪ್ರಿಲ್‌ 2ರಂದು ಹಾಸನದಲ್ಲಿ ಒಂದು ಲಕ್ಷ ಜನರನ್ನು ಸೇರಿಸಿ ನನ್ನ ತಾಕತ್ತು ತೋರಿಸುತ್ತೇನೆ’ ಎಂದು ಗೌಡರು ಸವಾಲು ಹಾಕಿದರು.

ರೇವಣ್ಣ ಸೋಲಿಸಲು ಸಾಧ್ಯವಿಲ್ಲ: ‘ರೇವಣ್ಣ ಅವರನ್ನು ಸೋಲಿಸಲು ನಿಮ್ಮಿಂದ ಸಾಧ್ಯವಿಲ್ಲ. ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದನ್ನು ತಡೆಯಲು ನಿಮಗೆ ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಸರಿಯಾದ ಮಾಹಿತಿಯಿಲ್ಲದೆ 10 ಪರ್ಸೆಂಟ್‌ ಸರ್ಕಾರ ಎಂದು ಹೇಳಿದ್ದರು. ಸರ್ಕಾರ ಎಲ್ಲೆಲ್ಲಿ ಪರ್ಸೆಂಟೇಜ್ ಮಾಡುತ್ತಿದೆ ಎಂಬುದು ನನಗೆ ಚೆನ್ನಾಗಿ ಗೊತ್ತು. ನಾನು ಈ ರಾಜ್ಯದ ಖಜಾನೆ ಲೂಟಿ ಮಾಡಿಲ್ಲ. ಸಿದ್ದರಾಮಯ್ಯ ಆಡಳಿತದಲ್ಲಿ ರಾಜ್ಯದ ಖಜಾನೆ ಬರಿದಾಗುತ್ತಿದೆ’ ಎಂದು ಟೀಕಾಪ್ರಹಾರ ನಡೆಸಿದರು.

By R

You missed