ದೊಡ್ಡಬಳ್ಳಾಪುರ: ನಗರದ ಬಯಲು ಬಸವಣ್ಣ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಬಂದ ಜೆಡಿಎಸ್‌ ಅಭ್ಯರ್ಥಿ ಬಿ.ಮುನೇಗೌಡ ಅವರು ಸೋಮವಾರ ಉಪವಿಭಾಗಾಧಿಕಾರಿ ಡಾ. ರಾಜೇಂದ್ರ ಪ್ರಸಾದ್‌ ಅವರಿಗೆ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ತಾಲ್ಲೂಕು ಕಚೇರಿ ವೃತ್ತದಲ್ಲಿ ಮುನೇಗೌಡ ಅವರಿಗೆ ಅಭಿಮಾನಿಗಳು ಹಾಲಿನ ಹಾಗೂ ನೀರಿನ ಅಭಿಷೇಕ ಮಾಡಿ ಜಯಘೋಷ ಕೂಗಿದರು.

ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಿ.ಮುನೇಗೌಡ, ‘ರಾಜ್ಯದಲ್ಲಿ ಬಿಜೆಪಿ ಜನರ ಕಿವಿಗೆ ಹೂ ಇಡುತ್ತಿದೆ, ಕಾಂಗ್ರೆಸ್‌ ಮತದಾರರಿಗೆ ಕೈ ನೀಡಿದೆ. ಜೆಡಿಎಸ್‌ ಮಾತ್ರ ಮತದಾರರ ಸಮಸ್ಯೆಗೆ ಸದಾ ಸ್ಪಂದಿಸುತ್ತ ಮತದಾರರಿಗಾಗಿ ಕೆಲಸ ಮಾಡುತ್ತಿರುವ ಪಕ್ಷ. ಅಧಿಕಾರದಲ್ಲಿ ಇಲ್ಲದಿದ್ದರೂ ನಾನು ಕ್ಷೇತ್ರದಲ್ಲಿನ ಜನರ ಸಮಸ್ಯೆಗೆ ಸ್ಪಂದಿಸಿ ಉಚಿತವಾಗಿ ಕುಡಿಯುವ ನೀರನ್ನು ಟ್ಯಾಂಕರ್‌ಗಳ ಮೂಲಕ ಮನೆ ಬಾಗಿಲಿಗೆ ಸರಬರಾಜು ಮಾಡಿದ್ದೇನೆ’ ಎಂದರು.

‘ತಾಲ್ಲೂಕಿನಲ್ಲಿ ಹತ್ತಾರು ಗ್ರಾಮಗಳಲ್ಲಿ ನಿರ್ಮಾಣವಾಗಿರುವ ದೇವಾಲಯಗಳಿಗೆ ಉಚಿತವಾಗಿ ಕಲ್ಲುಗಳನ್ನು ನೀಡಿದ್ದೇನೆ. ಈ ಎಲ್ಲ ಕೆಲಸಗಳನ್ನು ನೋಡಿ ಸಹಿಸದ ವಿರೋಧ ಪಕ್ಷಗಳವರು ಅಧಿಕಾರ ದುರುಪಯೋಗಮಾಡಿಕೊಂಡು ನನ್ನ ವಿರುದ್ದ ದೂರು ದಾಖಲಿಸಿದ್ದಾರೆ. ಎರಡು ಬಾರಿ ಸೋತರೂ ಕ್ಷೇತ್ರದಲ್ಲಿಯೇ ಇದ್ದು ಸಾಧ್ಯವಾದಷ್ಟು ಕೆಲಸ ಮಾಡಿದ್ದೇನೆ’ ಎಂದರು.

ಐದು ವರ್ಷಗಳಿಂದಲೂ ಕ್ಷೇತ್ರದ ಜನರಿಗೆ ಕಾಂಗ್ರೆಸ್‌ ಪಕ್ಷದ ಶಾಸಕರು ನೀರಿಗೆ ಬದಲಾಗಿ ಬೀರು ಕುಡಿಸಿದ್ದಾರೆ. ಉಚಿತವಾಗಿ ಅಕ್ಕಿ ಕೊಡುತ್ತಿದ್ದೇವೆ ಎಂದು ಹೇಳಿಕೊಳ್ಳುವ ಸರ್ಕಾರ ಪ್ರತಿ ಗ್ರಾಮದ ದಿನಸಿ ಅಂಗಡಿಗಳಲ್ಲೂ ಅಕ್ರಮವಾಗಿ ಮದ್ಯ ಮಾರಾಟ ಮಾಡಿಸಿ ಬಡ ಜನರಿಂದಲೇ ಬಂದ ಹಣದಲ್ಲಿ ಉಚಿತವಾಗಿ ಅಕ್ಕಿ ನೀಡಿದ್ದೇವೆ ಎಂದು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ’ ಎಂದರು. ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಆರ್‌.ಗೋವಿಂದರಾಜ್‌, ಕಾರ್ಯದರ್ಶಿ ಎ.ನರಸಿಂಹಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯೆ ಪದ್ಮಾವತಿ ಮುನೇಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಎಂ. ಲಕ್ಷ್ಮೀಪತಯ್ಯ, ಕಾರ್ಯಾಧ್ಯಕ್ಷ ಆರ್‌. ಕೆಂಪರಾಜ್‌, ನಗರ ಅಧ್ಯಕ್ಷ ವಡ್ಡರಹಳ್ಳಿ ರವಿ, ಕಾರ್ಯಾಧ್ಯಕ್ಷ ಪಿ.ಸಿ.ಲಕ್ಷ್ಮೀನಾರಾಯಣ್‌, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸುನಿಲ್‌ಕುಮಾರ್‌, ತಾಲ್ಲೂಕು ಮಂಜುನಾಥ್‌, ಮಹಾ ಪ್ರಧಾನ ಕಾರ್ಯದರ್ಶಿ ಅಖಿ ಲೇಶ್‌, ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಅಂಜನಗೌಡ, ಜಿಲ್ಲಾ ವೀಕ್ಷಕ ಡಾ.ಎಚ್‌.ಜಿ. ವಿಜಯ್‌ ಕುಮಾರ್‌, ಮುಖಂಡರಾದ ಹುಸ್ಕೂರು ಆನಂದ್‌, ಜಿ.ಸತ್ಯನಾರಾಯಣ್‌, ಎಲ್‌.ವೆಂಕಟೇಶ್‌, ಓಬದೇನಹಳ್ಳಿ ಮುನಿಯಪ್ಪ, ನಗರಸಭೆ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರು ಭಾಗವಹಿಸಿದ್ದರು.