ಬೆಂಗಳೂರು: ರೈತರಿಗೆ ನ್ಯಾಯಯುತ ಬೆಲೆ ಖಚಿತಪಡಿಸುವ ಯೋಜನೆಯ ಜತೆಗೆ ರಾಜ್ಯ ಮೇವು ಭದ್ರತೆಗೆ ಹೊಸ ನೀತಿ, ನದಿಗಳ ಜಲಾನಯನ ಅಚ್ಚುಕಟ್ಟು ಪ್ರದೇಶಗಳ ಶುದ್ಧೀಕರಣ, ಪೊಲೀಸ್‌ ಇಲಾಖೆಯಲ್ಲಿ ಮಹಿಳಾ ಪ್ರಾತಿನಿಧ್ಯ ಪ್ರಮಾಣದ ಹೆಚ್ಚಳ ಮತ್ತು ಬಾಲಕಾರ್ಮಿಕ ಮುಕ್ತ ರಾಜ್ಯ ನಿರ್ಮಾಣ.

ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಸೋಮವಾರ ಮಾಡಿದ ಭಾಷಣದ ಮುಖ್ಯಾಂಶಗಳು ಇವು.

ರಾಜ್ಯಪಾಲರ ಭಾಷಣದಿಂದ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ಯಾವ ದಿಕ್ಕಿನಲ್ಲಿ ಮುನ್ನಡೆಯಲಿದೆ ಎಂಬ ಕುತೂಹಲ ಏನೂ ತಣಿಯಲಿಲ್ಲ. ಅದಕ್ಕಾಗಿ ಇನ್ನೆರಡು ದಿನಗಳಲ್ಲಿ ಮಂಡನೆಯಾಗಲಿರುವ ಬಜೆಟ್‌ವರೆಗೂ ಕಾತರದಿಂದ ಕಾಯುವಂತೆ ಮಾಡಿತು. ರೈತರ ಕುರಿತು ಕಳಕಳಿ ವ್ಯಕ್ತವಾದರೂ ಕೃಷಿ ಸಾಲಮನ್ನಾ ಕುರಿತು ಯಾವುದೇ ಪ್ರಸ್ತಾಪ ಇರಲಿಲ್ಲ.

ಇಸ್ರೇಲ್ ಮಾದರಿ ಕೃಷಿ ಪದ್ಧತಿ ಅನುಷ್ಠಾನ, ಕೆರೆಗಳಿಗೆ ನೀರು ತುಂಬಿಸಲು ಕ್ರಮ ಮತ್ತು ವನ್ಯಜೀವಿಗಳ ದಾಳಿಯಿಂದ ಬೆಳೆ ನಷ್ಟವಾದ ರೈತರಿಗೆ ಪರಿಹಾರ ಹೆಚ್ಚಿಸುವ ಕುರಿತು ಅವರು ಉಲ್ಲೇಖಿಸಿದರು. ಆತಂಕದ ದಿನಗಳು ಇನ್ನಿಲ್ಲ. ಧ್ವನಿ ಇಲ್ಲದ ರೈತರಿಗೆ ಸರ್ಕಾರ ಧ್ವನಿಯಾಗಲಿದೆ ಎಂಬ ಧೈರ್ಯ ತುಂಬಿದರು.

‘ಕೆರೆಗಳಿಗೆ ನೀರು ತುಂಬಿಸಲು ಒತ್ತು ನೀಡುವ ಜೊತೆಗೆ ಪ್ರವಾಹ ನಿಯಂತ್ರಣಕ್ಕೆ ಕ್ರಮ ವಹಿಸಲಾಗುವುದು. ಮಾಹಿತಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಮೊಬೈಲ್ ಆ್ಯಪ್‌ನಲ್ಲಿ ವಿಭಾಗ ಮಟ್ಟದ ಎಲ್ಲ ಸೇವೆಗಳನ್ನೂ ಒದಗಿಸಲಾಗುವುದು’ ಎಂದು ಹೊಸ ಸರ್ಕಾರ ತಂತ್ರಜ್ಞಾನದ ಸದ್ಬಳಕೆಯ ಸಾಧ್ಯತೆಯನ್ನು ಅವರು
ಪ್ರಸ್ತಾಪಿಸಿದರು.

ಮಹಿಳೆಯರ ಸುರಕ್ಷೆಯ ಬದ್ಧತೆ ಪುನರುಚ್ಚರಿಸಿದ ಅವರು, ಪೊಲೀಸ್‌ ಕಮಿಷನರ್‌ ಕಚೇರಿಗಳಲ್ಲಿ ನಿರ್ಭಯಾ ಕೇಂದ್ರ ಆರಂಭಿಸಲಾಗುವುದು ಮತ್ತು ಪ್ರಯಾಣದ ವೇಳೆ ಮಹಿಳೆಯರ
ಸುರಕ್ಷೆ ಖಾತ್ರಿಪಡಿಸಲು ವಿಶೇಷ
ಮೊಬೈಲ್ ಆ್ಯಪ್ ರೂಪಿಸಲಾಗುವುದು ಎಂದು ಭರವಸೆ ನೀಡಿದರು. ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಅತ್ಯಂತ ಕನಿಷ್ಠ ಮಟ್ಟಕ್ಕೆ ತಗ್ಗಿಸುವ ಗುರಿ ಹೊಂದಲಾಗಿದ್ದು, ವೈದ್ಯಕೀಯ ಕಾಲೇಜುಗಳಲ್ಲಿ ಕ್ಯಾನ್ಸರ್‌ ಘಟಕ
ಗಳನ್ನು ಬಲಪಡಿಸಲಾಗುವುದು
ಎಂದು ಹೇಳಿದರು.

ಪಶು ಸಂಗೋಪನೆಗೆ ಪ್ರೋತ್ಸಾಹ ನೀಡಲು ಶೀಘ್ರದಲ್ಲೇ ‘ರಾಜ್ಯ ಮೇವು ಭದ್ರತಾ ನೀತಿ’ ರೂಪಿಸಲಾಗುವುದು. ಅಲ್ಲದೆ, ಚರ್ಮ ಸಂಸ್ಕರಣೆ ಮತ್ತು ಹದ ಮಾಡುವ ಕೇಂದ್ರ ಆರಂಭಿಸಲಾಗುವುದು. ಕಿರು ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡು ಕೆರೆ ತುಂಬುವ ಯೋಜನೆಯನ್ನು ರಾಜ್ಯದಾದ್ಯಂತ ವಿಸ್ತರಿಸಲಾಗುವುದು. ನದಿಗಳ ಜಲಾಯನ ಅಚ್ಚುಕಟ್ಟು ಪ್ರದೇಶಗಳನ್ನು ಶುದ್ಧೀಕರಿಸಿ, ದಟ್ಟವಾದ ಮರಗಳ ತೋಪು
ಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನೂ ಸರ್ಕಾರ ಹೊಂದಿದೆ ಎಂದು ಹೇಳಿದರು.

ಮೈಸೂರಿನಲ್ಲಿ ಸೈಕಲ್ ಬಾಡಿಗೆ ವ್ಯವಸ್ಥೆಯನ್ನು ಬೆಂಗಳೂರಿಗೂ ವಿಸ್ತರಿಸಲಾಗುವುದು. ಮೆಟ್ರೊ ಕಾಮಗಾರಿ ಶೀಘ್ರ ಪೂರ್ಣಗೊಳಿಸಲಾಗುವುದು. ಕರ್ನಾಟಕ ಕೈಗಾರಿಕಾ ನೀತಿಯ ಮೂಲಕ ಉದ್ಯೋಗಾವಕಾಶ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದೂ ರಾಜ್ಯಪಾಲರು ಹೇಳಿದರು.

By R

You missed