ಬೆಂಗಳೂರು: ಸಿಂಗಲ್‌ ನಂಬರ್‌ ಲಾಟರಿ ದಂಧೆ ಮುಚ್ಚಿಹಾಕಲು ರಾಜ್ಯದಲ್ಲಿ ಅಧಿಕಾರದಲ್ಲಿರುವ ಪ್ರಭಾವಿಯೊಬ್ಬರ ಪುತ್ರ 100 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೊಸ ಬಾಂಬ್‌ ಸಿಡಿಸಿದ್ದಾರೆ.

ಅಕ್ರಮ ಲಾಟರಿ ದಂಧೆಯ ರೂವಾರಿ ಮಾರ್ಟಿನ್‌ ಬಳಿ ವಿಧಾನಪರಿಷತ್‌ ಸದಸ್ಯರೊಬ್ಬರ ಜತೆಯಲ್ಲಿ ಹೋದ ಆ ಪ್ರಭಾವಿಯ ಪುತ್ರ 100 ಕೋಟಿ ರೂ. ಬೇಡಿಕೆ ಇಟ್ಟಿದ್ದರು. ಮಾರ್ಟಿನ್‌ ಅಷ್ಟು ಕೊಡಲು ಒಪ್ಪದೆ 10 ಕೋಟಿ ರೂ. ಮಾತ್ರ ಕೊಡ್ತೇನೆ ಅಂದಾಗ ಪ್ರಕರಣ ಸಿಐಡಿ ತನಿಖೆಗೆ ವಹಿಸಲಾಯಿತು ಎಂದು ಆರೋಪ ಮಾಡಿದ್ದಾರೆ. ಆದರೆ, ಆ ಪ್ರಭಾವಿಯ ಮಗ ಮತ್ತು ವಿಧಾನಪರಿಷತ್‌ ಸದಸ್ಯ ಯಾರು ಎಂಬ ಮಾಹಿತಿ ಮಾತ್ರ ಬಹಿರಂಗಪಡಿಸಲಿಲ್ಲ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಟರಿ ಹಗರಣದಲ್ಲಿ 30ರಿಂದ 40 ಪೊಲೀಸ್‌ ಅಧಿಕಾರಿಗಳು, ಸಚಿವರು, ಅಧಿಕಾರಸ್ಥರ ಮಕ್ಕಳು ಭಾಗಿಯಾಗಿದ್ದಾರೆ. ಹಗರಣದಲ್ಲಿ ಬೇರೆ ಯಾರೂ ಐಜಿಪಿ ಮಟ್ಟದ ಅಧಿಕಾರಿಗಳು ಭಾಗಿಯಾಗಿಲ್ಲ ಎಂದು ಗೃಹ ಸಚಿವರು ಕ್ಲೀನ್‌ಚಿಟ್‌ ನೀಡಿದ್ದಾರೆ. ಆದರೆ, ಲಾಟರಿ ಮತ್ತು ವಿಚಕ್ಷಣಾ ದಳದ ಐಜಿಪಿಗಳಾಗಿದ್ದ ಅರುಣ್‌ ಚಕ್ರವರ್ತಿ 40 ಲಕ್ಷ ರೂ., ಸುನಿಲ್‌ ಅಗರ್‌ವಾಲ್‌ 60 ಲಕ್ಷ ರೂ.ಗಳನ್ನು ಪಾರಿರಾಜನ್‌ ಬಳಿ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಅರುಣ್‌ ಚಕ್ರವರ್ತಿಗೆ ಎಸ್‌ಪಿ ಧರಣೇಶ್‌ ಹಾಗೂ ಸಬ್‌ ಇನ್ಸ್‌ಪೆಕ್ಟರ್‌ ರಾಮಪ್ಪ ಗುತ್ತೇದಾರ್‌ ಮತ್ತು ಮುಖ್ಯಪೇದೆ ಮಂಜುನಾಥ್‌ ಮೂಲಕ 40 ಲಕ್ಷ ರೂ. ಸಂದಿದೆ. ಸುನಿಲ್‌ ಅಗರ್‌ವಾಲ್‌ ತರಬೇತಿಗಾಗಿ ದೆಹಲಿಗೆ ಹೋಗಿದ್ದಾಗ ಆಲ್ಲಿಂದಲೇ ಉತ್ತರಪ್ರದೇಶಕ್ಕೆ ತೆರಳಿ ದಂಧೆಯ ರೂವಾರಿಯಿಂದ 60 ಲಕ್ಷ ರೂ. ತರಿಸಿಕೊಂಡಿದ್ದರು. ಯಾರ್ಯಾರಿಗೆ ಎಷ್ಟೆಷ್ಟು ಸಂದಾಯವಾಗಿದೆ ಎಂಬುದರ ಮಾಹಿತಿ ನನ್ನ ಬಳಿ ಇದೆ ಎಂದು ಹೇಳಿದರು.

ಮುಖ್ಯಮಂತ್ರಿಗಳ ಎಸ್‌ಪಿಜಿ (ಸ್ಪೆಷಲ್‌ ಪ್ರೊಟೆಕ್ಷನ್‌ ಗ್ರೂಪ್‌)ನ ವಿಧಾನಪರಿಷತ್‌ ಸದಸ್ಯರು ಸಚಿವರೊಬ್ಬರ ಬಳಿ ಹೋಗಿ ಅಕ್ರಮ ಲಾಟರಿ ಹಗರಣ ದೊಡ್ಡದಾಗುವುದು ಬೇಡ. ಪೊಲೀಸ್‌ ತನಿಖೆ ಹಂತದಲ್ಲೇ ಮುಗಿಸಿ ಎಂಬ ಮನವಿ ಮಾಡಿದ್ದು ಸುಳ್ಳೇ? ಪ್ರಭಾವಿಯೊಬ್ಬರ ಪುತ್ರ 100 ಕೋಟಿ ರೂ.ಗೆ ವ್ಯವಹಾರ ಕುದುರಿಸಿದ್ದು ಸುಳ್ಳೇ? ಈ ಬಗ್ಗೆ ಮುಖ್ಯಮಂತ್ರಿ ಸ್ಪಷ್ಟನೆ ನೀಡಲಿ. ಯಾರದು ಹೀನ ಸಂಸ್ಕೃತಿ ಎಂಬುದು ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು.

ಪ್ರಕರಣದಲ್ಲಿ ಲಾಟರಿ ವಿಚಕ್ಷಣಾ ದಳದ ಎಸ್ಪಿ$ಧರಣೇಶ್‌ ಮತ್ತು ಇನ್ಸ್‌ಪೆಕ್ಟರ್‌ ಮೊದಲಿಯಾರ್‌ನನ್ನು ಮಾತ್ರ ಅಮಾನತು ಮಾಡಲಾಯಿತು. ಆದರೆ, ಧರಣೇಶ್‌ ಸ್ಥಳಕ್ಕೆ ಬರಲು ಉತ್ತರ ವಲಯದ ಎಸ್ಪಿ ಚಂದ್ರಕಾಂತ್‌ ರಹಸ್ಯ ಕಾರ್ಯಾಚರಣೆ ಮಾಡಿಸಿ ಧರಣೇಶ್‌ನನ್ನು ಸಿಕ್ಕಿಹಾಕಿಸಿದರು. ಅಂತಹ ಕೆಲಸ ಮಾಡಿದ ಚಂದ್ರಕಾಂತ್‌ ಮೇಲೆ ಕ್ರಮ ಯಾಕಿಲ್ಲ ಎಂದು ಪ್ರಶ್ನಿಸಿದರು.

ಒಂದು ಹಂತದಲ್ಲಿ ಪತ್ರಿಕಾಗೋಷ್ಠಿಯಲ್ಲೇ ಸಿಡಿಮಿಡಿಗೊಂಡ ಕುಮಾರಸ್ವಾಮಿ, ನಾನು ಬಾಯಿ ಚಪಲಕ್ಕೆ ಮಾತನಾಡುತ್ತಿಲ್ಲ. ಯಾವ ನಾಲಿಗೆಗೂ ಎಲುಬು ಇರುವುದಿಲ್ಲ, ಜಾರ್ಜ್‌ ನಾಲಿಗೆಗೆ ಎಲುಬು ಇದೆಯೇನೋ ನನಗೆ ತಿಳಿಯದು. ದಾಖಲೆ ಇಟ್ಟುಕೊಂಡು ಮಾತನಾಡುತ್ತಿದ್ದೇನೆ ಎಂದು ದಾಖಲೆ ಎತ್ತಿ ತೋರಿಸಿದರು.

ಪ್ರಕರಣ ಜಾರಿ ನಿರ್ದೇಶನಾಲಯದಿಂದ ತನಿಖೆ ಮಾಡಿಸಲಾಗುವುದು ಎಂದು ಗೃಹ ಸಚಿವರು ದೊಡ್ಡದಾಗಿ ಹೇಳಿದ್ದಾರೆ. ಜಾರಿ ನಿರ್ದೇಶನಾಲಯದ ತನಿಖೆ ಬ್ಯಾಂಕುಗಳಲ್ಲಿ ನಡೆದಿರುವ ಹಣಕಾಸಿನ ವ್ಯವಹಾರಕ್ಕೆ ಸೀಮಿತವಷ್ಟೇ. ಕಪ್ಪುಹಣ ಸಾಗಣೆ ತನಿಖೆ ಮಾಡಲಾಗದು ಎಂದು ತಿಳಿಸಿದರು.

ಹಣ ಹಂಚಿಕೆ ಜಗಳದಿಂದ ಬಯಲಾಯ್ತು ದಂಧೆ!
ರಹಸ್ಯವಾಗಿ ನಡೆಯುತ್ತಿದ್ದ ಲಾಟರಿ ದಂಧೆ ಬಯಲಾಗಿದ್ದು ಹೇಗೆ ಎಂಬುದನ್ನು ಎಚ್‌.ಡಿ.ಕುಮಾರಸ್ವಾಮಿ ವಿವರಿಸಿದ್ದು ಹೀಗೆ.

ಅರುಣ್‌ ಚಕ್ರವರ್ತಿ ಲಾಟರಿ ಜಾಗೃತದಳದ ಮುಖ್ಯಸ್ಥರಾಗಿದ್ದಾಗ ಮಂಜುನಾಥ್‌ ಎಂಬ ಪೇದೆ ಆಗಾಗ ಪಾರಿರಾಜನ್‌ ಬಳಿ ಹೋಗಿ ಹಣ ವಸೂಲಿ ಮಾಡುತ್ತಿದ್ದ. ಪಾರಿರಾಜನ್‌ಗೆ ಹಿರಿಯ ಅಧಿಕಾರಿಗಳ ಸಂಪರ್ಕ ದೊರೆಯುತ್ತಿದ್ದಂತೆ ಆತ ಮಂಜುನಾಥ್‌ನನ್ನು ನಿರ್ಲಕ್ಷ್ಯ ಮಾಡಿದ. ಇದರಿಂದ ಕುಪಿತನಾದ ಮಂಜುನಾಥ್‌, ದಂಧೆ ಬಗ್ಗೆ ಕೋಲಾರ ಜಿಲ್ಲಾ ಲಾಟರಿ ವಿಚಕ್ಷಣಾ ದಳಕ್ಕೆ ಮಾಹಿತಿ ನೀಡಿದ.

ಈ ಮಾಹಿತಿ ಆಧಾರದ ಮೇಲೆ ಇನ್ಸ್‌ಪೆಕ್ಟರ್‌ ರಾಮಪ್ಪಗುತ್ತೇದಾರ್‌ ಪಾರಿರಾಜನ್‌ ಬಂಧನಕ್ಕೆ ಮುಂದಾದರು. ಆಗ, ಮಾರ್ಟಿನ್‌ ಮಧ್ಯಪ್ರವೇಶ ಮಾಡಿ ಗುತ್ತೇದಾರ್‌ನನ್ನು ಚೆನ್ನೈಗೆ ಕರೆಸಿಕೊಂಡು 40 ಲಕ್ಷ ರೂ. ಕೊಟ್ಟರು. ಹಣ ತಂದ ಗುತ್ತೇದಾರ್‌ ಜಾಗೃತ ದಳ ಮುಖ್ಯಸ್ಥ ಅರುಣ್‌ ಚಕ್ರವರ್ತಿಗೆ ಒಪ್ಪಿಸಿದರು. ಆ ಹಣದಲ್ಲಿ ಚೆನ್ನೈಗೆ ಹೋಗಿದ್ದ ಪೇದೆಗಳಿಗೆ ತಲಾ 2 ಲಕ್ಷ ರೂ. ಇನ್ಸ್‌ಪೆಕ್ಟರ್‌ಗೆ 5 ಲಕ್ಷ ರೂ. ನೀಡಿ ಉಳಿದ ಹಣ ಎಸ್ಪಿ ಧರಣೇಶ್‌ ಹಾಗೂ ಅರುಣ್‌ ಚಕ್ರವರ್ತಿ ಹಂಚಿಕೊಂಡರು.

ಚೆನ್ನೈಗೆ ಹೋಗಿ ಹಣ ತಂದ ನಮಗೆ ಕಡಿಮೆ ಕೊಟ್ಟರು ಎಂದು ಇಬ್ಬರು ಪೇದೆಗಳು ಲಾಟರಿ ದಂಧೆ ರೂವಾರಿಯಿಂದ ಹಣ ಪಡೆದ ವಿಚಾರವನ್ನು ಉತ್ತರ ವಲಯ ಎಸ್‌ಪಿ ಚಂದ್ರಕಾಂತ್‌ಗೆ ತಿಳಿಸಿದರು. ಆಗ ಚಂದ್ರಕಾಂತ್‌ ದಕ್ಷಿಣ ವಲಯ ಎಸ್‌ಪಿ ಹುದ್ದೆಗೆ ಬರಲು ಯತ್ನಿಸಿ ವಿಫ‌ಲರಾದರು. ಆಗ ಮಾಧ್ಯಮವೊಂದರ ಮೂಲಕ ರಹಸ್ಯ ಕಾರ್ಯಾಚರಣೆ ನಡೆಸಿ ಧರಣೇಶ್‌ನನ್ನು ಸಿಕ್ಕಿಹಾಕಿಸಿದರು ಎಂದು ಕುಮಾರಸ್ವಾಮಿ ವಿವರಿಸಿದರು.