ಮಂಡ್ಯ: ‘ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಆಯ್ಕೆ ಕುರಿತು ಮೈಸೂರಿನಲ್ಲಿ ಗುರುವಾರ ಅಂತಿಮ ಸುತ್ತಿನ ಮಾತುಕತೆ ನಡೆಸಲಾಗಿದೆ. ಇನ್ನೆರಡು ದಿನದಲ್ಲಿ ಅಭ್ಯರ್ಥಿಯ ಹೆಸರು ಘೋಷಣೆ ಮಾಡಲಾಗುವುದು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಗುರುವಾರ ಜೆಡಿಎಸ್‌ ಸೇರಿದ ಎಚ್‌.ಪಿ.ಮಹೇಶ್‌ ಅವರ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ಮಾತನಾಡಿದರು.

‘ಟಿಕೆಟ್‌ ಆಕಾಂಕ್ಷಿಗಳ ಜೊತೆ ಚರ್ಚೆ ಮಾಡಲಾಗಿದ್ದು ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಅಂತಿಮವಾಗಿ ದೇವೇಗೌಡರ ಜೊತೆ ಚರ್ಚೆ ಮಾಡಿ ಅವರ ಸಲಹೆಯಂತೆ ಅಭ್ಯರ್ಥಿಯ ಹೆಸರು ಘೋಷಣೆ ಮಾಡಲಾಗುವುದು. ಮಂಡ್ಯ ಕ್ಷೇತ್ರದಲ್ಲಿ ಯಾವುದೇ ವ್ಯಕ್ತಿ ಹಾಗೂ ಪಕ್ಷದ ಜೊತೆ ಹೊಂದಾಣಿಕೆ ಇಲ್ಲ. ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಜನರು ಜೆಡಿಎಸ್‌ ಪರವಾಗಿದ್ದಾರೆ. ಏಳೂ ಕ್ಷೇತ್ರಗಳಲ್ಲೂ ಜೆಡಿಎಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಲು ಜನರೇ ಪಣ ತೊಟ್ಟಿದ್ದಾರೆ. ಈ ಬಗ್ಗೆ ಗೊಂದಲ ಇಲ್ಲ. ಮಂಡ್ಯ ಕ್ಷೇತ್ರದಲ್ಲಿ ಯಾವುದೇ ಬಂಡಾಯಕ್ಕೆ ಆಸ್ಪದ ಕೊಡದ ರೀತಿಯಲ್ಲಿ ಅಭ್ಯರ್ಥಿಯ ಹೆಸರು ಘೋಷಣೆ ಮಾಡಲಾಗುವುದು’ ಎಂದು ಹೇಳಿದರು.

 

‘ನಾನು ಯಾರ ಗುಲಾಮ ಅಲ್ಲ. ರಾಜ್ಯದ ಆರೂವರೆ ಕೋಟಿ ಜನರ ಗುಲಾಮ. ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಬಂದರೂ ಜೆಡಿಎಸ್‌ ಗೆಲುವನ್ನು ತಡೆಯಲು ಸಾಧ್ಯವಿಲ್ಲ. ಅಮಿತ್‌ ಶಾ, ರಾಹುಲ್‌ ಗಾಂಧಿ ಪ್ರವಾಸದಿಂದ ನಮಗೆ ಯಾವುದೇ ಸಮಸ್ಯೆ ಇಲ್ಲ. ಯಾರು ಏನೇ ಆರೋಪ ಮಾಡಿದರೂ ನಾನು ಉತ್ತರ ಕೊಡುವ ಅಗತ್ಯ ಇಲ್ಲ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡ ಎಚ್‌.ಪಿ.ಮಹೇಶ್‌ ಜೆಡಿಎಸ್‌ ಸೇರಿದರು. ಜೆಡಿಎಸ್‌ ಶಾಲು ನೀಡಿ ಅವರನ್ನು ಕುಮಾರಸ್ವಾಮಿ ಸ್ವಾಗತ ಕೋರಿದರು. ಅಂಬರೀಷ್‌ ಬಣದಲ್ಲಿ ಗುರುತಿಸಿಕೊಂಡಿದ್ದ ಅಧಿಕೃತವಾಗಿ ಜೆಡಿಎಸ್‌ಗೆ ಸೇರಿದರು. ಈ ಸಂದರ್ಭದಲ್ಲಿ ಶಾಸಕ ಡಿ.ಸಿ.ತಮ್ಮಣ್ಣ, ಮುಖಂಡರಾದ ಎಂ.ಶ್ರೀನಿವಾಸ್‌, ಡಾ.ಎಚ್‌.ಕೃಷ್ಣ ಹಾಜರಿದ್ದರು.

By R

You missed