ಹಾಸನ: ಚುನಾವಣೆಯಲ್ಲಿ ಇವಿಎಂಗಿಂತ ಬ್ಯಾಲೆಟ್ ಪೇಪರ್ ಲೇಸು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದರು.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಿಶ್ವದ ಹೆಚ್ಚು ಕಡೆ ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಸಲಾಗುತ್ತಿದೆ. ಅನೇಕ ರಾಷ್ಟ್ರಗಳಲ್ಲಿ ಇವಿಎಂ ಯಂತ್ರ ಬಳಸುತ್ತಿಲ್ಲ. ಚುನಾವಣಾ ಆಯೋಗ ಏಕೆ ಇವಿಎಂ ಬಳಸಲು ಮುಂದಾಗುತ್ತಿದೆಯೋ ಗೊತ್ತಿಲ್ಲ. ಇವಿಎಂ ಬಗ್ಗೆ ಮಾತನಾಡಿದರೆ ಪ್ರಕರಣ ದಾಖಲಿಸುವ ಭಯ ಹುಟ್ಟಿ ಸುತ್ತಿದ್ದಾರೆ ಎಂದರು.

ಮತಯಂತ್ರದಲ್ಲಿ ಅನೇಕ ಲೋಪ ದೋಷ ಇವೆ ದೂರುಗಳು ಕೇಳಿ ಬರುತ್ತಿವೆ. ಆದರೂ ಆಯೋಗ ಹಠಕ್ಕೆ ಬಿದ್ದಿರುವುದು ಸರಿಯಲ್ಲ ಎಂದು ಹೇಳಿದರು. ಅನುಮಾನಗಳ ಬಗ್ಗೆ ಹೇಳಿಕೊಳ್ಳುವ ಸ್ವಾತಂತ್ರ್ಯ ಇಲ್ಲ ಅಂದರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅರಕಲಗೂಡು ತಾ.ಹರದೂರು ಯೋಧ ಚಂದ್ರು ನಕ್ಸಲ್ ದಾಳಿಗೆ ಬಲಿಯಾಗಿದ್ದು, ಯೋಧನ ಕುಟುಂಬಕ್ಕೆ ಸುಮಾರು 90 ಲಕ್ಷ ರು. ಪರಿಹಾರ ಬರಲಿದೆ ಎಂದ ಅವರು, ಇದರಲ್ಲಿ ಏರುಪೇರಾದರೆ ಸಂಸತ್‌ನಲ್ಲಿ ಚರ್ಚೆ ಮಾಡುವೆ. ಹಣ ಬರುವುದು ವಿಳಂಬವಾದರೆ ಸಂಬಂಧ ಪಟ್ಟವರೊಂದಿಗೆ ಚರ್ಚಿಸುವುದಾಗಿ ಹೇಳಿದರು. ಕುಟುಂಬಕ್ಕೆ ಜೆಡಿಎಸ್‌ನಿಂದಲೂ ಸಹಾಯ ಮಾಡಲಾಗುವುದು ಎಂದ ಅವರು, ಶೀಘ್ರ ಯೋಧನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವುದಾಗಿ ತಿಳಿಸಿದರು.