ಮೈಸೂರು: ಈ ಬಾರಿ ಅದ್ಧೂರಿ ಹಾಗೂ ಪ್ರವಾಸಿಸ್ನೇಹಿ ದಸರಾ ಆಚರಣೆಗೆ ಸಿದ್ಧತೆ ನಡೆದಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ಆಷಾಢ ಶುಕ್ರವಾರ ಅಂಗವಾಗಿ ಇಲ್ಲಿನ ಚಾಮುಂಡಿಬೆಟ್ಟದಲ್ಲಿ ಪತ್ನಿ ಅನಿತಾ ಅವರೊಂದಿಗೆ ಚಾಮುಂಡೇಶ್ವರಿ ದರ್ಶನ ಪಡೆದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ನಾಡಿನಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಅದ್ಧೂರಿ ದಸರಾ ನಡೆಸಲು ತೀರ್ಮಾನಿಸಲಾಗಿದೆ. ಈ ಕುರಿತು ಈಗಾಗಲೇ ಈ ಭಾಗದ ಜನಪ್ರತಿನಿಧಿಗಳ ಜತೆಗೆ ಸಭೆ ನಡೆಸಲಾಗಿದೆ’ ಎಂದು ತಿಳಿಸಿದರು.

‘ತಮಿಳುನಾಡಿಗೆ ಸೆಪ್ಟೆಂಬರ್‌ವರೆಗೂ ಬಿಡಬೇಕಿದ್ದ ನೀರನ್ನು ಈಗಾಗಲೇ ಬಿಟ್ಟಿದ್ದೇವೆ. ಹಾಗಾಗಿ, ನಮಗೆ
ನೀರಿನ ಚಿಂತೆ ಇಲ್ಲ. 12 ವರ್ಷಗಳ ಬಳಿಕ ಕೆಲವು ಜಲಾಶಯಗಳು ತುಂಬಿದ್ದು, ನನಗೆ ಬಾಗಿನ ಬಿಡುವ ಅವಕಾಶ ಸಿಕ್ಕಿರುವುದು ಅದೃಷ್ಟ’ ಎಂದರು.

‘ರಾಜ್ಯದ ಅಭಿವೃದ್ಧಿಗೆ, ರೈತರ ನೆಮ್ಮದಿಯ ಬದುಕಿಗೆ ಚಾಮುಂಡೇಶ್ವರಿ ಯಲ್ಲಿ ಪ್ರಾರ್ಥಿಸಿಕೊಂಡಿದ್ದೇನೆ. ರಾಜ್ಯದಲ್ಲಿ ಮಳೆ ಯಾಗುತ್ತಿರುವುದು ಚಾಮುಂಡಿಯ ಆಶೀರ್ವಾದದಿಂದಲೇ’ ಎಂದು ಹೇಳಿದರು.

ಭಕ್ತ ಸಾಗರ: ಮೊದಲ ಆಷಾಢ ಶುಕ್ರವಾರದಂದು ಚಾಮುಂಡಿಬೆಟ್ಟಕ್ಕೆ ಭಕ್ತಸಾಗರವೇ ಹರಿದುಬಂತು. ವಿಶೇಷ ಪುಷ್ಪಾಲಂಕಾರದಿಂದ ಚಾಮುಂಡೇಶ್ವರಿ ದೇವಿಯನ್ನು ಸಿಂಗರಿಸಲಾಗಿತ್ತು. ಬೆಳಗಿನ ಜಾವ 3ಕ್ಕೆ ವಿಶೇಷ ಪೂಜೆಗಳು ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಅವರ ನೇತೃತ್ವದಲ್ಲಿ ಆರಂಭವಾದವು.

ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಜತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಬೆಳಗಿನ ಜಾವ 5ರಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದ್ದು, ರಾಜ್ಯ ಹಾಗೂ ಬೇರೆ ರಾಜ್ಯಗಳ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ಸಾಲಿನಲ್ಲಿ ನಿಂತು ದರ್ಶನ ಪಡೆದರು

By R

You missed