ಚನ್ನಪಟ್ಟಣ: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ಚನ್ನಪಟ್ಟಣ ವಿಧಾನಸಭಾ ಕೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಮಧ್ಯಾಹ್ನ 2.15ಕ್ಕೆ ತಾಲ್ಲೂಕು ಕಚೇರಿಗೆ ಬಂದ ಅವರು, ನೇರವಾಗಿ ಚುನಾವಣಾಧಿಕಾರಿ ಕಚೇರಿಗೆ ತೆರಳಿ ಎರಡು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದರು. ಪತ್ನಿ ಅನಿತಾ ಕುಮರಸ್ವಾಮಿ, ಎಂ.ಸಿ.ಅಶ್ವಥ್, ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಜಯಮುತ್ತು, ಬಮೂಲ್ ನಿರ್ದೇಶಕ ಲಿಂಗೇಶ್ ಕುಮಾರ್ ಇದ್ದರು.

ಕುಮಾರಸ್ವಾಮಿ ನಾಮಪತ್ರ ಸಲ್ಲಿಸಲು ಬರುತ್ತಾರೆ ಎಂದು ನೂರಾರು ಬೆಂಬಲಿಗರು ಕಾದು ಕುಳಿತಿದ್ದರು. ಆದರೆ, ಅವರು ಬರುವಷ್ಟರಲ್ಲಿ ಎರಡು ಗಂಟೆ ದಾಟಿತ್ತು. ಇದರಿಂದ ನಾಮಪತ್ರ ಸಲ್ಲಿಸಿದ ನಂತರ ಕಾರ್ಯಕರ್ತರತ್ತ ಕೈಬೀಸಿದ ಕುಮಾರಸ್ವಾಮಿ ರಾಮನಗರದಲ್ಲಿ ನಾಮಪತ್ರ ಸಲ್ಲಿಸಬೇಕಾಗಿದೆ ಎಂದು ಹೇಳಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡದೆ ನೇರ ರಾಮನಗರದತ್ತ ತೆರಳಿದರು.

ಕುಮಾರಸ್ವಾಮಿ ಅವರ ನಾಮಪತ್ರ ಸಲ್ಲಿಕೆ ವೇಳೆ ಸುಮಾರು 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸೇರಿಸಿದ್ದರು. ತಾಲ್ಲೂಕು ಕಚೇರಿ ಎದುರು ಜನ ಸೇರಿದ್ದ ಕಾರಣ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಜನದಟ್ಟಣೆ ಏರ್ಪಟ್ಟು ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು. ಪೊಲೀಸರು ಇದನ್ನು ನಿಭಾಯಿಸಲು ಹರಸಾಹಸಪಟ್ಟರು.

ಯೋಗೇಶ್ವರ್ ಕಾರು: ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ಅವರಿದ್ದ ಕಾರು ಹೆದ್ದಾರಿಯಲ್ಲಿ ಸಾಗಿದ್ದು ವಿಶೇಷವಾಗಿತ್ತು.

ಯೋಗೇಶ್ವರ್ ಅವರ ಕಾರನ್ನು ಗಮನಿಸಿದ ಜಾತ್ಯತೀತ ಜನತಾದಳ ಹಾಗೂ ಬಿಎಸ್ಪಿ
ಕಾರ್ಯಕರ್ತರು ಶಾಸಕರ ಕಾರಿನ ಮುಂದೆಯೇ ಬಾವುಟ ಹಿಡಿದು ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರ ಜೈಕಾರ ಹಾಕಿದರು. ಯೋಗೇಶ್ವರ್ ನಗುತ್ತಲೇ ಅಲ್ಲಿಂದ ತೆರಳಿದರು. ಪೊಲೀಸರು ಕೂಡಲೇ
ಸ್ಥಳಕ್ಕೆ ಬಂದು ಕಾರು ಸಾಗಲು ಅವಕಾಶ ಮಾಡಿಕೊಟ್ಟರು.

By R

You missed