ಬೆಂಗಳೂರು: ‘ಜೆಡಿಎಸ್‌ ಅನ್ನು ಬಿಜೆಪಿಯ ‘ಬಿ’ ಟೀಂ ಎಂದು ಹೇಳಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರ ಅಪ್ರಬುದ್ಧತೆ ಬಗ್ಗೆ ಮರುಕವಿದೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ವಾಸ್ತವದಲ್ಲಿ ಕರ್ನಾಟಕದಲ್ಲಿರುವ ಕಾಂಗ್ರೆಸ್‌, ಜೆಡಿಎಸ್‌ನ ‘ಬಿ’ ಟೀಂ ಎಂಬುದನ್ನು ರಾಹುಲ್‌ ಮರೆತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

‘ಯೋಗ್ಯತೆಯಿಂದಲೋ ಅಥವಾ ಯೋಗದಿಂದಲೋ ಕಾಂಗ್ರೆಸ್ ಅಧ್ಯಕ್ಷರಾಗಿರುವ ರಾಹುಲ್‌ ಗಾಂಧಿ ಕರ್ನಾಟಕ ಕಾಂಗ್ರೆಸ್‌ನ ಈಗಿನ ಸ್ವರೂಪವನ್ನು ಒಮ್ಮೆ ಅವಲೋಕಿಸಿದ್ದರೆ, ಅವರಿಂದ ಇಂಥ ಬಾಲಿಶ ಹೇಳಿಕೆ ಬರುತ್ತಿರಲಿಲ್ಲ. ಈಗಿನ ಮುಖ್ಯಮಂತ್ರಿಯವರ ಮೂಲ ನಿಮಗೆ ಗೊತ್ತಿದೆಯೇ? ಅವರು ನಮ್ಮ ಪಕ್ಷದಲ್ಲಿ ರಾಜಕೀಯ ವಿದ್ಯೆ ಕಲಿತು ಹೋದವರು. ಸಂಪುಟದ ಅರ್ಧಕ್ಕೂ ಹೆಚ್ಚು ಸಚಿವರು ದೇವೇಗೌಡರ ಗರಡಿಯಲ್ಲಿ ಪಳಗಿದವರು. ನಿಮ್ಮ ಪಕ್ಷದಲ್ಲಿರುವ ಶಾಸಕರಲ್ಲಿ ಎಷ್ಟು ಮಂದಿ ಜನತಾದಳ ಮೂಲದವರು ಎಂಬುದು ನಿಮಗೆ ಗೊತ್ತೇ’ ಎಂದು ಪ್ರಶ್ನಿಸಿದರು.

‘ನಿಮ್ಮೊಂದಿಗೆ ಅಧಿಕಾರ ಹಂಚಿಕೊಂಡರೆ ನಮ್ಮ ಪಕ್ಷವನ್ನು ಒಡೆಯುತ್ತೀರಿ. ನಮ್ಮವರನ್ನು ನಿಮ್ಮ ಬುಟ್ಟಿಗೆ ಹಾಕಿಕೊಳ್ಳುತ್ತೀರಿ. ಒಡೆದಾಳುವ ನೀತಿ ಖಂಡಿಸಿದರೆ ನಮ್ಮನ್ನು ಬಿಜೆಪಿಯ ‘ಬಿ’ ಟೀಂ ಎಂದು ಹೇಳುತ್ತೀರಿ. ನಿಮ್ಮ ಡೋಂಗಿ ಜಾತ್ಯತೀತತೆಯ ಸಖ್ಯವೂ ಬೇಡ, ಮೂಲಭೂತವಾದಿಗಳ ಸಖ್ಯವೂ ಬೇಕಿಲ್ಲ. ನಮಗೆ ಬೇಕಿರುವುದು ಕನ್ನಡಿಗರ ಮನ್ನಣೆಯಷ್ಟೆ’ ಎಂದು ಹೇಳಿದ್ದಾರೆ.

‘ದೇಶದಾದ್ಯಂತ ನಿಮ್ಮ ‘ಎ’ ಟೀಂ ಬಿಜೆಪಿಯೊಂದಿಗೆ ವಿಲೀನವಾಗುತ್ತಿದೆ. ಕರ್ನಾಟಕದ ಮಟ್ಟಿಗೆ ಎಸ್.ಎಂ ಕೃಷ್ಣ, ವಿ. ಶ್ರೀನಿವಾಸ ಪ್ರಸಾದ್ ಅವರಂಥ ನಾಯಕರನ್ನೇ ಉಳಿಸಿಕೊಳ್ಳಲಾಗದ ನಿಮ್ಮ ಪಕ್ಷ ನಿಜವಾಗಿಯೂ ಕಾಂಗ್ರೆಸ್ ಆಗಿ ಉಳಿದಿದೆಯೇ ಎಂದು ಯೋಚಿಸಿ. ಆ ಬಳಿಕ ಜೆಡಿಎಸ್ ವಿಚಾರಕ್ಕೆ ಬನ್ನಿ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

source:prajavani