ಸಚಿವ ಸಂಪುಟದಲ್ಲಿ ಯಾರು ಸ್ಥಾನ ಪಡೆಯುತ್ತಾರೆ, ಯಾರಿಗೆ ಅವಕಾಶ ಕೈತಪ್ಪಲಿದೆ ಎಂಬ ಆತಂಕ–ಗೊಂದಲಗಳ ಮಧ್ಯೆಯೇ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ವಿಧಾನಸಭೆಯಲ್ಲಿ ಶುಕ್ರವಾರ ಮಧ್ಯಾಹ್ನ ವಿಶ್ವಾಸ ಮತ ಯಾಚಿಸಲಿದ್ದಾರೆ.

ಬೆಂಗಳೂರು: ಸಚಿವ ಸಂಪುಟದಲ್ಲಿ ಯಾರು ಸ್ಥಾನ ಪಡೆಯುತ್ತಾರೆ, ಯಾರಿಗೆ ಅವಕಾಶ ಕೈತಪ್ಪಲಿದೆ ಎಂಬ ಆತಂಕ–ಗೊಂದಲಗಳ ಮಧ್ಯೆಯೇ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ವಿಧಾನಸಭೆಯಲ್ಲಿ ಶುಕ್ರವಾರ ಮಧ್ಯಾಹ್ನ ವಿಶ್ವಾಸ ಮತ ಯಾಚಿಸಲಿದ್ದಾರೆ.

ಇದಕ್ಕೂ ಮುನ್ನವೇ ಸಭಾಧ್ಯಕ್ಷರ (ಸ್ಪೀಕರ್‌) ಆಯ್ಕೆಗೆ ಚುನಾವಣೆ ನಡೆಯಲಿದೆ. ವಿರೋಧ ಪಕ್ಷ ಬಿಜೆಪಿ, ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಬಹುಮತ ಸಾಬೀತಿಗೆ ಮೊದಲೇ ಅಗ್ನಿಪರೀಕ್ಷೆಗೆ ಒಡ್ಡಿಕೊಳ್ಳಬೇಕಾದ ಸವಾಲನ್ನು ಜೆಡಿಎಸ್‌–ಕಾಂಗ್ರೆಸ್ ಮೈತ್ರಿಕೂಟ ಎದುರಿಸಬೇಕಾಗಿದೆ.

ಮಧ್ಯಾಹ್ನ 12.15ಕ್ಕೆ ಕಲಾಪ ಆರಂಭವಾಗಲಿದೆ. ಸ್ಪೀಕರ್‌ ಸ್ಥಾನಕ್ಕೆ ಶ್ರೀನಿವಾಸಪುರ ಕ್ಷೇತ್ರದ ಕೆ.ಆರ್‌. ರಮೇಶ್‍ಕುಮಾರ್ ಮತ್ತು ಬಿಜೆಪಿಯಿಂದ ರಾಜಾಜಿನಗರ ಕ್ಷೇತ್ರದ ಶಾಸಕ ಎಸ್‌. ಸುರೇಶ್‍ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ. ವೇಳೆ ಅಡ್ಡ ಮತದಾನ ನಡೆಯದೇ ಇದ್ದರೆ ರಮೇಶ್‍ಕುಮಾರ್ ಆಯ್ಕೆ ಖಚಿತ.

ದೂರವಾಗದ ಭೀತಿ: ಮೈತ್ರಿ ಸರ್ಕಾರಕ್ಕೆ ಇನ್ನೂ ‘ಆಪರೇಷನ್ ಕಮಲ’ದ ಭೀತಿ ದೂರವಾಗಿಲ್ಲ. ಈ ಕಾರಣಕ್ಕೆ, ಕಾಂಗ್ರೆಸ್‌– ಜೆಡಿಎಸ್‌ ಎರಡೂ ಪಕ್ಷಗಳ ಶಾಸಕರು ರೆಸಾರ್ಟ್‌ ಬಿಟ್ಟು ಹೊರಬಂದಿಲ್ಲ. ಸಭಾಧ್ಯಕ್ಷರ ಚುನಾವಣೆ ಮತ್ತು ವಿಶ್ವಾಸ ಮತ ಯಾಚನೆಗೆ ರೆಸಾರ್ಟ್‍ನಿಂದಲೇ ನೇರವಾಗಿ ಶಾಸಕರು ಬರಲಿದ್ದಾರೆ. ಸರ್ಕಾರ ಬಹುಮತ ಸಾಬೀತುಗೊಳಿಸುವ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಬಳಿಕವಷ್ಟೇ ಎಲ್ಲ ಶಾಸಕರು ನಿರಾಳವಾಗಲಿದ್ದಾರೆ.

ಸರಳ ಬಹುಮತ ಇಲ್ಲದೆಯೂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಬಿ.ಎಸ್‌. ಯಡಿಯೂರಪ್ಪ ಇದೇ 20ರಂದು ಬಹುಮತ ಸಾಬೀತು ಪಡಿಸಲು ಮುಂದಾಗಿದ್ದರು. ಅದು ಅಸಾಧ್ಯ ಎಂಬುದು ಗೊತ್ತಾದ ಕೂಡಲೇ ವಿಶ್ವಾಸ ಮತ ಯಾಚನೆಯ ಪ್ರಸ್ತಾವವನ್ನು ವಾಪಸ್ ಪಡೆದ ಅವರು, ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಹಾಗಿದ್ದರೂ ಬಿಜೆಪಿಯಲ್ಲಿ ಮತ್ತೆ ಅಧಿಕಾರ ಹಿಡಿಯುವ ಕನಸು ಮುರುಟಿ ಹೋಗಿಲ್ಲ. ‘ಕಾಂಗ್ರೆಸ್‌ ಶಾಸಕರು ಬರುವುದಾದರೆ ಬರಲಿ’ ಎಂದು ಯಡಿಯೂರಪ್ಪ ಬಹಿರಂಗ ಆಹ್ವಾನ ನೀಡಿದ್ದಾರೆ. ಇದರಿಂದಾಗಿ ಬಹುಮತ ಸಾಬೀತುಪಡಿಸುವವರೆಗೂ ಮೈತ್ರಿ ಸರ್ಕಾರ ಆತಂಕದಲ್ಲೇ ಕಾಲ ತಳ್ಳಬೇಕಾಗಿದೆ. ನಂತರವೂ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಪುಟ ವಿಸ್ತರಣೆ ಮಾಡಬೇಕಾದ ಸವಾಲು ಎದುರಿಸಬೇಕಾಗಿದೆ.

ಉಪ ಮುಖ್ಯಮಂತ್ರಿ ಸಿಗದ ಕಾರಣಕ್ಕೆ ಈಗಾಗಲೇ ಹಿರಿಯ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವು ಶಾಸಕರೂ ಅವರ ಬೆನ್ನಿಗೆ ನಿಂತಿದ್ದಾರೆ. ಸಚಿವ ಸಂಪುಟ ವಿಸ್ತರಣೆ ವೇಳೆ ಈ ಅಸಮಾಧಾನ ಸ್ಫೋಟಗೊಳ್ಳುವ ಆತಂಕ ಇರುವುದರಿಂದ ಸಚಿವರ ಅವಧಿಯನ್ನು ಎರಡು ವರ್ಷಕ್ಕೆ ಸೀಮಿತಗೊಳಿಸುವ ಸೂತ್ರದ ಬಗ್ಗೆಯೂ ಕಾಂಗ್ರೆಸ್‍ನಲ್ಲಿ ಚರ್ಚೆ ನಡೆಯುತ್ತಿದೆ. ಹೈಕಮಾಂಡ್ ಜತೆ ಚರ್ಚಿಸಿದ ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಹಿಲ್ಟನ್‌ ರೆಸಾರ್ಟ್‌ನಲ್ಲಿ ಗುರುವಾರ ಸಂಜೆ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಶಾಸಕಾಂಗ ಸಭೆ ನಡೆಯಿತು. ಒಗ್ಗಟ್ಟು ಪ್ರದರ್ಶನದ ಜೊತೆಗೆ ಸಂಪುಟ ವಿಸ್ತರಣೆ ಕುರಿತೂ ಚರ್ಚೆ ನಡೆಯಿತು.

ಜೆಡಿಎಸ್‌ ಶಾಸಕರು ವಾಸ್ತವ್ಯ ಹೂಡಿರುವ ರೆಸಾರ್ಟ್‌ಗೆ ಭೇಟಿ ನೀಡಿದ್ದ ಕುಮಾರಸ್ವಾಮಿ, ಸೂಕ್ತ ಸ್ಥಾನ ಮಾನ ನೀಡಿ, ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ’ ಎಂದು ಹೇಳಿದರು.

‘ಕಾಲ’ ನೋಡಿ ಸಮಯ ನಿಗದಿ!

ಇದೇ ಮೊದಲ ಬಾರಿಗೆ ‘ಕಾಲ’ ನೋಡಿ ವಿಧಾನಸಭೆ ಅಧಿವೇಶನದ ಸಮಯ ನಿಗದಿಪಡಿಸಲಾಗಿದೆ. ಶುಕ್ರವಾರ ಬೆಳಿಗ್ಗೆ 10.30ರಿಂದ 12 ಗಂಟೆವರೆಗೆ ‘ರಾಹು ಕಾಲ’ ಇದೆ. ಹೀಗಾಗಿ 12.15ಕ್ಕೆ ಸದನ ಸಮಾವೇಶಗೊಳ್ಳಲಿದೆ. ‘ವಿಶ್ವಾಸ ಮತ ಯಾಚನೆ ಕಲಾಪಕ್ಕೆ ಜೆಡಿಎಸ್ ಶಾಸಕ ಎಚ್‌.ಡಿ. ರೇವಣ್ಣ ಸಮಯ ನಿಗದಿಪಡಿಸಿದ್ದಾರೆ’ ಎಂದು ವಿಧಾನಸಭೆ ಸಚಿವಾಲಯ ತಿಳಿಸಿದೆ.

ಕಾಂಗ್ರೆಸ್‌ನಲ್ಲಿ 20 ಸಚಿವ ಸ್ಥಾನ ಭರ್ತಿ!

ಕಾಂಗ್ರೆಸ್ಸಿಗೆ ಉಪ ಮುಖ್ಯಮಂತ್ರಿ ಸೇರಿ 22 ಸಚಿವ ಸ್ಥಾನಗಳು ಹಂಚಿಕೆಯಾಗಿದ್ದರೂ 20 ಸ್ಥಾನಗಳನ್ನು ಮಾತ್ರ ಭರ್ತಿ ಮಾಡಿ, ಎರಡು ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳಲು ಪಕ್ಷದ ವರಿಷ್ಠರು ಚಿಂತನೆ ನಡೆಸಿದ್ದಾರೆ.

ವಿಶ್ವಾಸ ಮತ ಯಾಚನೆಯ ಬಳಿಕ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಆರಂಭವಾಗಲಿದ್ದು, ಸ್ಥಾನ ಆಕಾಂಕ್ಷಿ ಶಾಸಕರ ಲಾಬಿ ತೀವ್ರಗೊಂಡಿದೆ. ಸಚಿವ ಸ್ಥಾನ ಸಿಗದೇ ಇದ್ದವರು ಬಿಜೆಪಿ ಕಡೆಗೆ ವಾಲುವ ಭೀತಿ ಇರುವುದರಿಂದ ಎರಡು ಸ್ಥಾನ ಉಳಿಸಿಕೊಳ್ಳುವ ತಂತ್ರಗಾರಿಕೆಗೆ ಕಾಂಗ್ರೆಸ್ ಮುಂದಾಗಿದೆ.

ಉಪಮುಖ್ಯಮಂತ್ರಿಯಾಗಿ ಪರಮೇಶ್ವರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಉಳಿದ 19 ಆಕಾಂಕ್ಷಿಗಳ ಪಟ್ಟಿ ಸಮೇತ ದೆಹಲಿಗೆ ತೆರಳಲಿರುವ ಕಾಂಗ್ರೆಸ್ ನಾಯಕರು, ವರಿಷ್ಠರ ಜೊತೆ ಚರ್ಚೆ ನಡೆಸಲಿದ್ದಾರೆ. ಜಾತಿ ಮತ್ತು ಪ್ರಾದೇಶಿಕತೆ ಆಧರಿಸಿ ಸಚಿವರನ್ನು ಆಯ್ಕೆ ಮಾಡಬೇಕಿದ್ದು, ಈ ಕಸರತ್ತು ತಲೆನೋವಾಗಿ ಪರಿಣಮಿಸುವ ಸಾಧ್ಯತೆಯೂ ಇದೆ.

ಜೆಡಿಎಸ್‍ನಲ್ಲೂ ಸಂಪುಟ ವಿಸ್ತರಣೆ ಕಸರತ್ತು ಆರಂಭವಾಗಿದೆ. ಪಕ್ಷದ ವರಿಷ್ಠರಾದ ದೇವೇಗೌಡರು ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಹಲವು ಸುತ್ತಿನ ಸಭೆಗಳನ್ನು ನಡೆಸಿದ್ದಾರೆ.

* ರೈತರ ಸಾಲ ಮನ್ನಾ ಮಾಡುವುದೇ ನನ್ನ ಮೊದಲ ಆದ್ಯತೆ. ಕಾಂಗ್ರೆಸ್‌ ನಾಯಕರ ಜೊತೆ ಚರ್ಚಿಸಿ ಶೀಘ್ರವೇ ಘೋಷಣೆ ಮಾಡುತ್ತೇನೆ

–ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

* ಯಡಿಯೂರಪ್ಪ ನಮ್ಮ ಶಾಸಕರ ಕುದುರೆ ವ್ಯಾಪಾರಕ್ಕೆ ಮುಂದಾಗಿದ್ದಾರೆ. ಒಬ್ಬ ನಾಯಕ ಈ ಮಟ್ಟಕ್ಕೆ ಇಳಿದಿದ್ದನ್ನು ನಾನು ನೋಡಿಲ್ಲ

–ಜಿ. ಪರಮೇಶ್ವರ, ಉಪ ಮುಖ್ಯಮಂತ್ರಿ

By R

You missed