ಮದ್ದೂರು: ‘ರಾಜ್ಯದಲ್ಲಿ ಕಾಂಗ್ರೆಸ್‌ ಎಂದಿಗೂ ಇನ್ನು ಮುಂದೆ ಅಧಿಕಾರಕ್ಕೆ ಬರದು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಗುರುವಾರ ನಡೆದ ‘ಕುಮಾರ ಪರ್ವ’ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಕಾಂಗ್ರೆಸ್‌ ಪ್ರಾಯೋಜಿತ ಸಂಸ್ಥೆ ಚುನಾವಣಾಪೂರ್ವ ಸಮೀಕ್ಷೆ ನಡೆಸಿದೆ. ಇದನ್ನು ರಾಜ್ಯದ ಜನತೆ ಸುಳ್ಳಾಗಿಸಲಿದ್ದಾರೆ. ರಾಜ್ಯದಲ್ಲಿ ಜೆಡಿಎಸ್‌ ಪಕ್ಷಕ್ಕೆ 128 ಸ್ಥಾನಗಳನ್ನು ಜನರು ನೀಡುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಟಿ.ನರಸೀಪುರದಲ್ಲಿ ಲೋಕೋಪಯೋಗಿ ಸಚಿವರು ಉತ್ತಮ ರಸ್ತೆ ಮಾಡಿದ್ದಾರೆ. ರಸ್ತೆ ಜನರಿಗೆ ಉಪಯೋಗವಾದಂತೆ, ಅವರಿಗೆ ಕಮಿಷನ್‌ ಮೂಲಕ ಉಪಯೋಗವಾಗಿದೆ. ಇದು ಕಮಿಷನ್‌ ಸರ್ಕಾರ ಎನ್ನಲು ಇದಕ್ಕಿಂತ ಸಾಕ್ಷಿ ಬೇಕೆ?’ ಎಂದರು.

 

‘ನಾನು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕ್ಷಣದಿಂದ ರೈತರ ಎಲ್ಲಾ ಬಗೆಯ ಸಾಲಗಳನ್ನು ಮನ್ನಾ ಮಾಡುತ್ತೇನೆ’ ಎಂದು ಭರವಸೆ ನೀಡಿದ ಅವರು, ಇದು ಸಾಕಾರಗೊಳ್ಳಲು ಪೂರ್ಣ ಅಧಿಕಾರವನ್ನು ಜೆಡಿಎಸ್‌ಗೆ ನೀಡಿ’ ಎಂದು ಕೋರಿದರು.

‘ಈವರೆಗೆ ಅಧಿಕಾರ ನಡೆಸಿದ ಎಲ್ಲ ಮುಖ್ಯಮಂತ್ರಿಗಳು ₹ 1.12 ಲಕ್ಷ ಕೋಟಿ ಸಾಲ ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ₹ 1.5 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇಷ್ಟು ಹಣ ಎಲ್ಲಿಗೆ ವೆಚ್ಚವಾಯಿತು? ಎಂದು ತಿಳಿಯುತ್ತಿಲ್ಲ’ ಎಂದರು.

‘ಇದೊಂದು ದರಿದ್ರ ಸರ್ಕಾರ’ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೇ ದಿನದಲ್ಲಿ 7 ಕೋಟಿ ವೆಚ್ಚದ ಜಾಹೀರಾತು ನೀಡಿದ್ದಾರೆ. ಇದನ್ನು ಅವರು ಸಿದ್ದರಾಮಯ್ಯನ ಹುಂಡಿಯಿಂದ ತಂದಿದ್ದರೆ? ಇದು ಜನರ ಹಣ. ಈ ಹಣವನ್ನು ಅಪವ್ಯಯ ಮಾಡುವುದು ಎಷ್ಟು ಸರಿ ಎಂದು? ಪ್ರಶ್ನಿಸಿದರು.

‘ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಇಸ್ರೆಲ್‌ ಮಾದರಿ ಕೃಷಿ ಪದ್ಧತಿ ಮತ್ತು ರೇಷ್ಮೆ ಕೃಷಿಯಲ್ಲಿ ಆಮೂಲಾಗ್ರ ಬದಲಾವಣೆ ತರುವೆ. ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 150ಕ್ಕೂಹೆಚ್ಚು ರೈತ ಕುಟುಂಬಗಳಿಗೆ ನೆರವಾದ ತೃಪ್ತಿ ನನ್ನದು’ ಧನ ಸಹಾಯ ಮಾಡಿದ ತೃಪ್ತಿ ನನ್ನದು ಎಂದರು.

ಜೆಡಿಎಸ್‌ ಹಿರಿಯ ಮುಖಂಡ ಪಿ.ಜಿ.ಆರ್‌.ಸಿಂಧ್ಯ, ‘ಜಾತಿ ಜಾತಿಗಳ ನಡುವೆ ಸಂಘರ್ಷ ಮೂಡಿಸಲು ಮುಂದಾಗಿರುವ ಸಿದ್ದರಾಮಯ್ಯ ಅವರಿಗೆ ರಾಜ್ಯದ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದು ನಿಶ್ಚಿತ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಡಿ.ಸಿ.ತಮ್ಮಣ್ಣ ಅಧ್ಯಕ್ಷತೆ ವಹಿಸಿದ್ದು, ‘ಕಳೆದ ಐದು ವರ್ಷಗಳಲ್ಲಿ ₹1377 ಕೋಟಿ ಅನುದಾನ ತಂದು ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದ್ದೇನೆ. ನನ್ನ ಕೆಲಸ ಗುರುತಿಸಿ ಜನರು ಪುನಾರಾಯ್ಕೆಗೊಳಿಸುವ ಮೂಲಕ ಕುಮಾರಸ್ವಾಮಿ ಅವರಿಗೆ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಸಂಸದ ಸಿ.ಎಸ್‌.ಪುಟ್ಟರಾಜು, ‘ಪಕ್ಷಕ್ಕೆ ದ್ರೋಹ ಬಗೆದಿರುವವರಿಗೆ ಜನರು ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ. ಪಕ್ಷ ದ್ರೋಹಿಗಳಿಗೆ ತಕ್ಕ ಉತ್ತರ ನೀಡಲಿದ್ದಾರೆ’ ಎಂದರು.

ವಿಧಾನ ಪರಿಷತ್‌ ಉಪಸಭಾಪತಿ ಮರಿತಿಬ್ಬೇಗೌಡ, ಶಾಸಕರಾದ ನಾರಾಯಣಗೌಡ, ಕೆ.ಟಿ.ಶ್ರೀಕಂಠೇಗೌಡ, ಎನ್‌. ಅಪ್ಪಾಜಿಗೌಡ, ಮಾಜಿ ಶಾಸಕರಾದ ಎಲ್‌.ಆರ್‌.ಶಿವರಾಮೇಗೌಡ, ಎಂ.ಶ್ರೀನಿವಾಸ್‌, ಸುರೇಶಗೌಡ, ಡಾ.ಅನ್ನದಾನಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನಾ ಸ್ವಾಮಿ, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಡಿ.ರಮೇಶ್‌, ವಿಭಾಗೀಯ ವೀಕ್ಷಕ ಎಸ್‌.ಪಿ.ಸ್ವಾಮಿ, ಪುರಸಭಾ ಅಧ್ಯಕ್ಷೆ ಲತಾ, ಮುಖಂಡರಾದ ಎಚ್‌.ಕೃಷ್ಣ, ಲಕ್ಷ್ಮಿ ಅಶ್ವಿನ್‌ಗೌಡ, ಅಶೋಕ್‌ ಜಯರಾಂ, ಡಿ.ಟಿ.ಸಂತೋಷ್‌, ಮಾದನಾಯಕನಹಳ್ಳಿ ರಾಜಣ್ಣ ಭಾಗವಹಿಸಿದ್ದರು.