ಕೋಲಾರ: ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಕಾರ್ಯಕರ್ತರು ಒಪ್ಪುವ ಅಭ್ಯರ್ಥಿಯನ್ನು ಪಕ್ಷದ ವರಿಷ್ಠರು ಅತಿ ಶೀಘ್ರ ಪ್ರಕಟಿಸಲಿದ್ದು, ಪಕ್ಷವನ್ನು ಅಧಿಕಾರಕ್ಕೆ ತರಲು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಜಿಲ್ಲಾ ವೀಕ್ಷಕ ಬೆಳ್ಳಿ ಲೋಕೇಶ್ ತಿಳಿಸಿದರು.

ನಗರದ ಕಾಬಾ ಸಭಾಂಗಣದಲ್ಲಿ ಬುಧವಾರ ಜೆಡಿಎಸ್​ನಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಪರ ಅಲೆ ಜೋರಾಗಿದೆ. ಆಡಳಿತಾರೂಢ ಕಾಂಗ್ರೆಸ್ ಮೇಲೆ ಜನ ನಂಬಿಕೆ ಕಳೆದುಕೊಂಡಿದ್ದಾರೆ. ಕೆಲವರು ವೈಯುಕ್ತಿಕವಾದ ಕಾರಣಗಳಿಂದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಇದಕ್ಕೆ ಪಕ್ಷದ ನಿಷ್ಠಾವಂತರು ಕಿವಿಗೊಡಬಾರದು ಎಂದರು.

ಕುಮಾರಸ್ವಾಮಿ ಸಿಎಂ ಆದರೆ ರೈತರು, ಯುವಕರು, ಹಿರಿಯ ನಾಗರಿಕರಿಗೆ ಅನುಕೂಲವಾಗುವ ಯೋಜನೆ ಜಾರಿಗೆ ಬರಲಿದೆ. ನಿಮ್ಮ ಅಭಿಪ್ರಾಯಗಳನ್ನು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುವುದು. ಅಭ್ಯರ್ಥಿ ವಿಚಾರವಾಗಿ ವರಿಷ್ಠರಾದ ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಸೂಕ್ತ ನಿರ್ಧಾರ ಕೈಗೊಳ್ಳುವರು. ಯಾರೇ ಅಭ್ಯರ್ಥಿಯಾದರೂ ಗೆಲುವಿಗೆ ನಾವೆಲ್ಲಾ ಶ್ರಮಿಸೋಣ ಎಂದರು.

ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಮಾತನಾಡಿ, ಹಣದ ರಾಜಕಾರಣದಿಂದ ಕಳೆದ ಎರಡು ಚುನಾವಣೆಯಲ್ಲಿ ನಾನು ಸೋಲನುಭವಿಸಬೇಕಾಯಿತು. ಈ ಬಾರಿ ನನಗೆ ಟಿಕೆಟ್ ಸಿಗಬಹುದೆಂಬ ನಂಬಿಕೆ ಇದೆ. ಮೊದಲ ಪಟ್ಟಿಯಲ್ಲಿ ನನ್ನ ಹೆಸರಿಲ್ಲದಿರುವುದಕ್ಕೆ ಬೇಸರವಾಗಿದೆ. ಬೆಂಬಲಿಗರು ಜೆಡಿಎಸ್ ತೊರೆಯುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ನಾನು ಆತುರದ ನಿರ್ಧಾರ ತೆಗೆದುಕೊಳ್ಳಲ್ಲ ಎಂದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಗೋಪಾಲ ಕೃಷ್ಣ, ಪ್ರಧಾನಕಾರ್ಯದರ್ಶಿ ದಯಾನಂದ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಕಡಗಟ್ಟೂರು ದಯಾನಂದ್, ಕೆಯುಡಿಎ ಮಾಜಿ ಅಧ್ಯಕ್ಷ ರವೀಂದ್ರ ಕುಮಾರ್, ಜೆಡಿಎಸ್ ಮಹಿಳಾ ಘಟಕ ಅಧ್ಯಕ್ಷೆ ಕುರ್ಕಿ ರಾಜಾರಾಜೇಶ್ವರಿ, ಮುಖಂಡರಾದ ಕೃಷ್ಣರೆಡ್ಡಿ, ಅನ್ವರ್ ಪಾಷಾ, ತಾಲೂಕು ಅಧ್ಯಕ್ಷ ಬಾಬು ಮೌನಿ, ಚಂದ್ರಮೌಳಿ, ಸಿಎಂಆರ್ ರಮೇಶ್ ಉಪಸ್ಥಿತರಿದ್ದರು.