ಕನಕಪುರ: ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯ ಇಲ್ಲ. ಆದರೆ, ಎರಡು ರಾಷ್ಟ್ರೀಯ ಪಕ್ಷಗಳು ಷಡ್ಯಂತ್ರ ರೂಪಿಸಿವೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಆರೋಪಿಸಿದರು.

ತಾಲ್ಲೂಕಿನ ಹಾರೋಹಳ್ಳಿ ಗ್ರಾಮದಲ್ಲಿ ಕುಮಾರಸ್ವಾಮಿ ಪರವಾಗಿ ರೋಡ್‌ ಷೋ ಮೂಲಕ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.

ಇಡೀ ರಾಜ್ಯದಲ್ಲಿ ಕುಮಾರಸ್ವಾಮಿ ಪರವಾದ ಅಲೆ ಇದೆ‌. ರಾಜ್ಯದ ಜನರು ಈ ಬಾರಿ ಜೆಡಿಎಸ್‌ ಪರವಾಗಿ ಸ್ವಯಂಪ್ರೇರಣೆಯಿಂದ ಕೆಲಸ ಮಾಡುತ್ತಿದ್ದಾರೆ. ಇದರಿಂದ ವಿಚಲಿತರಾಗಿರುವ ಬಿಜೆಪಿ ಮತ್ತು ಕಾಂಗ್ರೆಸ್‌ ಜೆಡಿಎಸ್‌ಗೆ ಮತ ನೀಡಬೇಡಿ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಒಂದು ರೀತಿ ಹೇಳಿಕೆ ನೀಡಿದರೆ, ರಾಹುಲ್‌ಗಾಂಧಿ ಇನ್ನೊಂದು ರೀತಿ ಹೇಳಿಕೆ ನೀಡಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದರು.

ರಾಹುಲ್ ಗಾಂಧಿ ಅವರಿಗೆ ಅನುಭವ ಇಲ್ಲ. ಯಾರೋ ಬರೆದುಕೊಟ್ಟ ಚೀಟಿ ಓದುತ್ತಾರೆ. ನರೇಂದ್ರ ಮೋದಿ ಹೇಳಿಕೆಗೆ ಈಗ ಪ್ರತಿಕ್ರಿಯಿಸುವುದಿಲ್ಲ. ಕಾವೇರಿ, ಮಹದಾಯಿ ಬಗ್ಗೆ ಈಗ ತುಟಿ ಬಿಚ್ಚಿದ್ದಾರೆ ಎಂದು ಎಂದು ಟೀಕಿಸಿದರು.

ಕುಮಾರಸ್ವಾಮಿ ಅವರಪ್ಪನಾಣೆ ಮುಖ್ಯಮಂತ್ರಿ ಆಗುವುದಿಲ್ಲವೆಂದು ಸಿದ್ದರಾಮಯ್ಯ ಉಡಾಫೆ ಮಾತನಾಡುತ್ತಾರೆ. ಜೆಡಿಎಸ್‌ ಮುಗಿಸಲು ಪಕ್ಷದ ಶಾಸಕರನ್ನು ಬಂಡಾಯ ಏಳುವಂತೆ ಮಾಡಿ ಪಕ್ಷದ ವಿರುದ್ಧ ತಿರುಗಿ ಬೀಳುವಂತೆ ಸಂಚು ರೂಪಿಸಿದರು. ಇದಕ್ಕೆ ರಾಜ್ಯದ ಜನರೇ ಉತ್ತರ ನೀಡಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜಕೀಯವಾಗಿ ಈಗ ಕಣ್ಣು ಬಿಡುತ್ತಿರುವ ಕೆಲವರು ರಾಜ್ಯದಲ್ಲಿ ಜೆಡಿಎಸ್‌ ಸತ್ತು ಹೋಗಿದೆ ಎಂದು ಅಪಪ‍್ರಚಾರ ಮಾಡುತ್ತಿದ್ದಾರೆ. ರೈತರ ಬಡವರ ಪರವಾದ ಪಕ್ಷ ಎಂದಿಗೂ ಸಾಯುವುದಿಲ್ಲ. ಈ ರಾಜ್ಯದ ಜನರು ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಪಕ್ಷ ಬದುಕಿದೆ ಎಂಬುದನ್ನು ತೋರಿಸಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ಹಾರೋಹಳ್ಳಿ ಕುಂಬಾರಶೆಡ್ಡಿನಿಂದ ಬಸ್‌ ನಿಲ್ದಾಣದವರೆಗೆ ರೋಡ್‌ ಷೋ ನಡೆಯಿತು. ರಸ್ತೆಯುದ್ದಕ್ಕೂ ಅವರ ಮೇಲೆ ಪುಷ್ಪ ಎರಚಲಾಯಿತು. ನೂರಾರು ಯುವಕರು ಬೈಕ್‌ ರ‍್ಯಾಲಿ ನಡೆಸಿದರು.

ಮರಳವಾಡಿ ಗ್ರಾಮದಲ್ಲೂ ದೇವೇಗೌಡ ರೋಡ್‌ ಷೋ ನಡೆಸಿ ಚುನಾವಣಾ ಪ್ರಚಾರ ಕೈಗೊಂಡರು. ವಿಧಾನ ಪರಿಷತ್‌ ಮಾಜಿ ಸದಸ್ಯ ಮರಿಲಿಂಗಯ್ಯ, ಜೆಡಿಎಸ್‌ ಮುಖಂಡ ಡಿ.ಎಂ.ವಿಶ್ವನಾಥ್‌, ಡಿ.ಎಸ್‌.ಭುಂಜಂಗಯ್ಯ, ಈರೇಗೌಡ, ಮಲ್ಲಪ್ಪ, ಜಿ.ಎಸ್‌.ಮಲ್ಲಯ್ಯ, ಕೆ.ಎನ್‌.ರಾಮು, ಲಕ್ಷ್ಮಣ್‌, ಪುರುಷೋತ್ತಮ್‌, ಮುದುವಾಡಿ ನಾಗರಾಜು, ಗೊಲ್ಲಹಳ್ಳಿ ಸುರೇಶ್‌, ಸೋಮಶೇಖರ್‌, ಶಾರದ ಬಿ.ಎಂ.ರಾಜು, ಶೋಭಾ ಸಿದ್ದಪ್ಪ, ತಿಮ್ಮಪ್ಪ, ರವಿಕುಮಾರ್‌, ಪ್ರದೀಪ್‌ಕುಮಾರ್‌, ಮೂರ್ತಿ, ಉಮೇಶ್‌, ಏಜಾಸ್‌, ಲಕ್ಷ್ಮಣ್‌, ಗುಣಶೀಲ, ನೂರಾರು ಮುಖಂಡರು ಪಾಲ್ಗೊಂಡಿದ್ದರು.

By R

You missed