ಮುದ್ದೇಬಿಹಾಳ: ‘ಭೂಮಿಯನ್ನು ನಂಬಿ ಬದುಕುತ್ತಿರುವ ರೈತ ಮುಂದೆಂದೂ ಸಾಲವನ್ನೇ ಮಾಡದಂತೆ ಹೊಸ ಕೃಷಿ ನೀತಿಯನ್ನು ಜಾರಿಗೆ ತರುತ್ತೇನೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಪಟ್ಟಣದ ವಿಬಿಸಿ ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ಜೆಡಿಎಸ್ ಅಭ್ಯರ್ಥಿ ಮಂಗಳಾದೇವಿ ಬಿರಾದಾರ ಪರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

‘ಚುನಾವಣೆಗೆ ಸ್ಪರ್ಧಿಸುತ್ತಿರು ಕಾಂಗ್ರೆಸ್ ಅಭ್ಯರ್ಥಿ 25 ವರ್ಷಗಳಿಂದ ಏನೂ ಅಭಿವೃದ್ಧಿ ಮಾಡಿಲ್ಲ. ಇನ್ನೊಬ್ಬರು ಏನು ಮಾಡಿದ್ದಾರೆ ಎಂದು ಕ್ಷೇತ್ರದ ಜನರಿಗೆ ಕೇಳಿದರೆ ಹೇಳುತ್ತಾರೆ. ಕ್ಷೇತ್ರದ ಜನರ ಮುಗ್ಧತನ, ಬಡತನವನ್ನು ಸೇರಿಯಾಗಿ ದುರ್ಬಳಕೆ ಮಾಡಿಕೊಂಡು ಚೆಲ್ಲಾಟ ಆಡುತ್ತಿರುವವರೆಗೆ ಸರಿಯಾದ ಪಾಠ ಕಲಿಸಿ’ ಎಂದು ನಾಡಗೌಡ ಹಾಗೂ ನಡಹಳ್ಳಿ ಅವರ ವಿರುದ್ಧ ಟೀಕಿಸಿದರು.

‘2007ರಲ್ಲಿ ನನಗೆ ನಡಹಳ್ಳಿ ಟೋಪಿ ಹಾಕಿದ್ದರು. ನಾನು ನನ್ನ ಅನಾರೋಗ್ಯದ ನಡುವೆಯೂ ಅವರಿಗೆ ಉತ್ತರ ಕರ್ನಾಟಕದ ಬಗ್ಗೆ ಕಾಳಜಿ, ಕಳಕಳಿ ಇದೆ ಎಂದು ಕರೆದಾಗಲೆಲ್ಲ ಬಂದೆ. 2018ರಲ್ಲಿಯೂ ನನಗೆ ಟೋಪಿ ಹಾಕಿ, ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರಿಗೆ ಕೈಕೊಟ್ಟು ಬಿಜೆಪಿಗೆ ಸೇರಿಕೊಂಡಿದ್ದಾರೆ. ಅವರು ಯಾವುದೇ ಪಕ್ಷದಿಂದ ಸ್ಪರ್ಧಿಸಿದರು ಸೋಲುವುದು ಖಚಿತ’ ಎಂದರು.

 

ರೈತರ ಸಾಲ ಮನ್ನಾ, 65 ತುಂಬಿದ ಹಿರಿಯರಿಗೆ ಜಾತಿ ಬೇಧ ಎಣಿಸದೇ ₹5 ಸಾವಿರ ಮಾಸಾಶನ, ಗರ್ಭೀಣಿಯರಿಗೆ ಹಾಗೂ ಅಂಗವಿಕಲರ ಕಲ್ಯಾಣಕ್ಕೆ ಜೆಡಿಎಸ್‌ ಬದ್ಧವಾಗಿದೆ’ ಎಂದು ಭರವಸೆ ನೀಡಿದರು.

ಜೆಡಿಎಸ್ ಅಭ್ಯರ್ಥಿ ಮಂಗಳಾದೇವಿ ಬಿರಾದಾರ ಮಾತನಾಡಿ, ’ನಾನು ಹಣ ಮಾಡಲು ರಾಜಕೀಯಕ್ಕೆ ಬಂದಿಲ್ಲ. ಬಿಜೆಪಿಯಿಂದ ತಮಗಾಗಿರುವ ಅನ್ಯಾಯ ನೆನೆದು ಗದ್ಗದಿತರಾಗಿ ಕಣ್ಣೀರು ಸುರಿಸಿದರು.

’ಕಾಂಗ್ರೆಸ್ಸಿನವರು ಮತದಾರರಿಗೆ ಹಣ, ಹೆಂಡದ ಆಮೀಷ ತೋರಿಸಿ ವಂಚನೆ ಮಾಡುತ್ತಲೇ ಬಂದಿದ್ದಾರೆ. ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ ಜೆಡಿಎಸ್ ಪಕ್ಷಕ್ಕೆ ಮತಚಲಾ ಯಿಸಬೇಕು’ ಎಂದರು.

ಮುಖಂಡ ಅರವಿಂದ ಕೊಪ್ಪ, ವಿಜಯಕುಮಾರ ಹಿರೇಮಠ, ಬಿ.ಎಂ.ತಾಳಿಕೋಟೆ ವಕೀಲರು, ಎಂ.ಕೆ.ಕೆಂಭಾವಿ ಮಾತನಾಡಿದರು.

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಈರಸಂಗಪ್ಪಗೌಡ ಪಾಟೀಲ, ಸುರೇಶಗೌಡ, ಬಿ.ಜಿ.ಪಾಟೀಲ ಹಲಸಂಗಿ, ಎಸ್.ಆರ್.ಪಾಟೀಲ, ಎಂ.ಎಚ್.ಹಾಲಣ್ಣವರ್, ಬಸವರಾಜ ಸುಕಾಲಿ, ಶರಣಗೌಡ ಪಾಟೀಲ, ಬಸನಗೌಡ ಮಾಡಗಿ, ವಿ.ಎಸ್.ಸಾಲಿಮಠ, ರಸೂಲ್ ದೇಸಾಯಿ, ಜೆ.ಎಸ್.ಕಿತ್ತೂರ, ಸಿ.ಆರ್.ಜೋಷಿ, ಎ.ಐ.ಮನಗೂಳಿ, ಬಸವರಾಜ ಭಜಂತ್ರಿ, ಶರಣಪ್ಪ ಹೊಳಿ ಇದ್ದರು.

By R

You missed