ಚನ್ನಪಟ್ಟಣ: ‘ಚನ್ನಪಟ್ಟಣದಲ್ಲಿ ಕೆರೆಗಳನ್ನು ತುಂಬಿಸಿದ ಮೂಲ ಪುರುಷ ಎಚ್‌.ಡಿ. ದೇವೇಗೌಡರು. ಇಗ್ಗಲೂರು ಬ್ಯಾರೇಜ್‌ ಕಾಮಗಾರಿ ಪೂರ್ಣ
ಗೊಳಿಸಿದ, ಈ ಭಾಗದ ನೀರಾವರಿ ವ್ಯವಸ್ಥೆಗೆ ಚಾಲನೆ ನೀಡಿದ ಕೀರ್ತಿಯು ಅವರಿಗೆ ಸಲ್ಲುತ್ತದೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದರು.

ಇಲ್ಲಿನ ದೊಡ್ಡಮಳೂರು ಮೈದಾನದಲ್ಲಿ ಮಂಗಳವಾರ ನಡೆದ ವಿಕಾಸ ಪರ್ವ ಸಮಾವೇಶದಲ್ಲಿ ಅವರು ಮಾತನಾಡಿದರು.

‘1972ರಲ್ಲಿ ಇಗ್ಗಲೂರು ಬ್ಯಾರೇಜ್ ಕಾಮಗಾರಿ ಆರಂಭಗೊಂಡು ಅರ್ಧಕ್ಕೆ ನಿಂತಿತ್ತು. 1982–83ರಲ್ಲಿ ರಾಜ್ಯದ ನೀರಾವರಿ ಸಚಿವರಾದ ಬಳಿಕ ದೇವೇಗೌಡರು ಬಾಳೆಕುಂದ್ರಿ ಎಂಬ ಎಂಜಿನಿಯರ್‌ ಕರೆಸಿ ಪರಿಶೀಲನೆ ನಡೆಸಿ ಜಲಾಶಯದ ಎತ್ತರ ಹೆಚ್ಚಿಸಿ ಕಾಮಗಾರಿ ಪೂರ್ಣಗೊಳಿಸಿದರು. ಮಂಚನಬೆಲೆ, ಹಾರೋಹಳ್ಳಿ ಜಲಾಶಯ ನಿರ್ಮಾಣದಲ್ಲಿಯೂ ಅವರ ಶ್ರಮವಿದೆ. ಪ್ರಧಾನಿಯಾಗಿದ್ದ ಸಂದರ್ಭ 1997ರಲ್ಲಿ ಗರಕಹಳ್ಳಿ ಏತನೀರಾವರಿ ಚಾಲನೆಗೆ ನೀಡಿದ್ದು ಅವರೇ’ ಎಂದು ವಿವರಿಸಿದರು.

‘ಇಲ್ಲಿನ ಶಾಸಕರು ಕಮಿಷನ್‌ ದಂದೆ ನಡೆಸುತ್ತಾ ಇದ್ದಾರೆ. ಹಣ ಕೊಡದೇ ಹೋದರೆ ಗುತ್ತಿಗೆದಾರರು ಕೆಲಸ ಆರಂಭ ಮಾಡುವ ಹಾಗಿಲ್ಲ. ಕೆರೆಗಳ ಹೂಳೆತ್ತುವ ನೆಪದಲ್ಲಿ ಲೂಟಿ ಮಾಡುತ್ತಿದ್ದಾರೆ’ ಎಂದು 
ದೂರಿದರು.

‘ದೇವೇಗೌಡರ ಕಾರ್ಯಕ್ರಮಕ್ಕೆ ಬೇಕಾದರೆ ಜನರನ್ನು ಕಳುಹಿಸುತ್ತೇನೆ ಎಂದು ದುರಂಹಕಾರದ ಮಾತುಗಳನ್ನು ಆಡುತ್ತಾರೆ. ನಮ್ಮ ಕುಟುಂಬಕ್ಕೂ ಚನ್ನಪಟ್ಟಣಕ್ಕೂ ಇರುವ ಅವಿನಾಭಾವ ಸಂಬಂಧದ ಬಗ್ಗೆ ಅವರಿಗೆ ಗೊತ್ತಿಲ್ಲ’ ಎಂದರು.

 

‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಇಲ್ಲಿ ರೇಷ್ಮೆ ಬೆಳೆಗಾರರ ಜೊತೆ ಸಂವಾದ ನಡೆಸುವ ನೆಪದಲ್ಲಿ ನಗರದ ಬಡ ಕುಟುಂಬಗಳ ಜನರ ಮೇಲೆ ಒತ್ತಡ ಹೇರುವ ಕೆಲಸ ಮಾಡಿದರು. ಅದೊಂದು ಕಾಟಾಚಾರದ ಸಂವಾದ ಕಾರ್ಯಕ್ರಮ’ ಎಂದು 
ಟೀಕಿಸಿದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಮಾತನಾಡಿ ‘70ರ ದಶಕದಿಂದಲೂ ಇಲ್ಲಿನ ರಾಜಕಾರಣ ಬಲ್ಲೆ. ಆದರೆ ಇಷ್ಟು ದಿನದಲ್ಲಿ ಈ ಪರಿಯ ಜನರನ್ನು ಒಂದೇ ವೇದಿಕೆಯಲ್ಲಿ ನೋಡಿರಲಿಲ್ಲ. ಇದೊಂದು ಐತಿಹಾಸಿಕ ಕಾರ್ಯಕ್ರಮ’ ಎಂದು ಬಣ್ಣಿಸಿದರು.

‘ಕುಮಾರಸ್ವಾಮಿ 224 ಕ್ಷೇತ್ರಗಳಲ್ಲಿಯೂ ಪ್ರವಾಸ ಮಾಡ
ಬೇಕಿದೆ. ಚುನಾವಣೆ ಸಮಯದಲ್ಲಿಯೂ ಜನರು ಇದೇ ಪ್ರೀತಿ, ವಿಶ್ವಾಸ ತೋರಿಸಬೇಕು. ಪ್ರತಿ ಕಾರ್ಯ
ಕರ್ತನೂ ನಾನೇ ಕುಮಾರ
ಸ್ವಾಮಿ ಎಂದು ಪ್ರಚಾರ ಮಾಡಬೇಕು’ ಎಂದು ಕೋರಿದರು.

ಅನಿತಾ ಕುಮಾರಸ್ವಾಮಿ ಮಾತನಾಡಿ ‘ದೇವೇಗೌಡರು ಮತ್ತು ಕುಮಾರ
ಸ್ವಾಮಿ ಅವರ ಜೀವನವೇ ಹೋರಾಟದ ಹಾದಿಯಾಗಿದೆ. ಅವರೆಂದು ಅಧಿಕಾರ
ಕ್ಕಾಗಿ ಆಸೆ ಪಟ್ಟವರಲ್ಲ. 1994ರಲ್ಲಿ ಅವರು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸುವ ಪ್ರಯತ್ನ ನಡೆದಾಗ ಕ್ಷೇತ್ರದ ಜನರು ವಿಧಾನಸೌಧಕ್ಕೆ ಬಂದು ಹೋರಾಟ ಮಾಡಿದ್ದರು’ ಎಂದು ಸ್ಮರಿಸಿದರು. 
‘ಇಲ್ಲಿನ ಶಾಸಕರು ಅಭಿವೃದ್ಧಿ ಹೆಸರಿನಲ್ಲಿ ಕಮಿಷನ್ ದಂಧೆ ನಡೆ
ಸುತ್ತಿದ್ದು, ಅವರಿಗೆ ತಕ್ಕ ಪಾಠ ಕಲಿಸಬೇಕು’ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಮಾತನಾಡಿ, ‘ಮೆಗಾಸಿಟಿ ಹಗರಣ ಮುಚ್ಚಿಹಾಕುವ ಸಲುವಾಗಿ ಯೋಗೇಶ್ವರ್ ಬಿಜೆಪಿ ಸೇರಿದ್ದಾರೆ’ ಎಂದು ದೂರಿದರು.

ಪಕ್ಷದ ಮುಖಂಡರಾದ ಜಫರುಲ್ಲಾ ಖಾನ್‌, ಫಾರೂಕ್, ಎಚ್‌.ಎಂ. ಕೃಷ್ಣಮೂರ್ತಿ, ಮಲ್ಲಿಗೆ ಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್‌ಕುಮಾರ್, ಪುಟ್ಟಸಿದ್ದೇಗೌಡ, ಸಿಂ.ಲಿಂ. ನಾಗರಾಜು, ಎಂ.ಸಿ. ಅಶ್ವಥ್, ಸಯ್ಯದ್ ರೋಷನ್, ಚಂದ್ರಶೇಖರಯ್ಯ, ನರಸಿಂಹಮೂರ್ತಿ, ವಡ್ಡರಹಳ್ಳಿ ರಾಜು, ಶಿವಣ್ಣ, ಕುಮಾರ್‌, ರಾಜಶೇಖರ್, ಜಯಕುಮಾರ್, ಎಚ್.ಕೆ. ಲೋಕೇಶ್, ಜಯಮುತ್ತು, ಲಿಂಗೇಶ್‌ಕುಮಾರ್, ಹಾಪ್‌ಕಾಮ್ಸ್‌ ದೇವರಾಜು, ನಿಜಲಿಂಗೇಗೌಡ, ಕಬಡ್ಡಿ ಬಾಬು ಇದ್ದರು.