ಬೆಂಗಳೂರು: ‘ಕೊರೊನಾ ಪರಿಹಾರವಾಗಿ ರಾಜ್ಯ ಸರ್ಕಾರ ₹ 1,610 ಕೋಟಿ ಪ್ಯಾಕೇಜ್ ಘೋಷಣೆ ಮಾಡಿರುವುದು ಕೇವಲ ಪ್ರಚಾರಕಷ್ಟೇ. ಅದರಿಂದ ಬಡವರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. ಮಾಧ್ಯಮ ಪ್ರತಿನಿಧಿಗಳ ಜೊತೆ ಭಾನುವಾರ ಮಾತನಾಡಿದ ಅವರು, ‘ಕೊರೊನಾ ವಿಚಾರದಲ್ಲಿ ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಆದರೆ, ಇದು ಕೇವಲ ಮೋಸದ ಪರಿಹಾರ’ ಎಂದು ಟೀಕಿಸಿದರು. ‘ನೆರೆ ಹಾವಳಿ ಸಂದರ್ಭದಲ್ಲಿ ರಾಜ್ಯ ಸರ್ಕಾರ ಘೋಷಿಸಿದ್ದ ಪರಿಹಾರ ಫಲಾನುಭವಿಗಳಿಗೆ ತಲುಪಿಲ್ಲ. ಈ ಹಿಂದೆ ಮೋಸ ಮಾಡಿದ ರೀತಿಯಲ್ಲಿಯೇ ಈ ಪರಿಹಾರ ಕೂಡಾ ಮುಂದುವರಿದಿದೆ’ ಎಂದು ಆರೋಪಿಸಿದರು. ‘ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡುವಾಗ ಮಾರ್ಗಸೂಚಿಯನ್ನು ಮೊದಲೇ ಮಾಡಿದ್ದೆವು. ಅದರಿಂದ ರೈತರಿಗೆ ಅನುಕೂಲವಾಯಿತು. ಆದರೆ, ಯಡಿಯೂರಪ್ಪ ಘೋಷಿಸಿರುವ ಪರಿಹಾರ ಯಾರಿಗೆ ಹೇಗೆ ತಲುಪಲಿದೆ ಎಂಬ ಮಾಹಿತಿಯೇ ಇಲ್ಲ’ ಎಂದು ಹೇಳಿದರು.

By R

You missed