ಸಿಂಧನೂರು: ‘ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶ ಇಟ್ಟುಕೊಂಡು ಮಾಜಿ ಪ್ರಧಾನಿ ದೇವೇಗೌಡರು ಅವಿರತವಾಗಿ ಶ್ರಮಿಸಿದ್ದರಿಂದ ಮಹಿಳಾ ಮೀಸಲಾತಿ ಜಾರಿಯಾಗಿದೆ ಎಂದು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ತಾಲ್ಲೂಕು ಜೆಡಿಎಸ್ ಮಹಿಳಾ ಘಟಕ ಗುರುವಾರ ಹಮ್ಮಿಕೊಂಡಿದ್ದ ಬೃಹತ್ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಅವಶ್ಯ. ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಮಹಿಳೆಯರು ಮುಂದೆ ಬರಬೇಕು. ಮಹಿಳೆಯರ ಸಬಲೀಕರಣದ ಕನಸನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಟ್ಟುಕೊಂಡಿದ್ದಾರೆ. ಮಹಿಳೆಯರ ಪರವಾದ ಅಂಶಗಳನ್ನು ಪ್ರಣಾಳಿಕೆಗಳಲ್ಲಿ ಸೇರಿಸಲಾಗಿದೆ’ ಎಂದರು.

‘ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ ಬಂದ 24ಗಂಟೆಗಳಲ್ಲಿ ರೈತರ ಸಾಲಮನ್ನಾ ಜತೆಗೆ ಸ್ತ್ರೀಶಕ್ತಿ ಒಕ್ಕೂಟಗಳು ಹಾಗೂ ಸ್ವಸಹಾಯ ಗುಂಪುಗಳ ಸಾಲಮನ್ನಾ ಮಾಡಲಿದೆ. 70 ವರ್ಷ ಮೇಲ್ಪಟ್ಟ ವೃದ್ಧರಿಗೆ ₹5 ಸಾವಿರ ಮಾಸಾಶನ, ಗರ್ಭಿಣಿಯರಿಗೆ ₹6 ಸಾವಿರ ನೀಡಲಾಗುವುದು’ ಎಂದು ವಿವರಿಸಿದರು.

 

ರಾಜ್ಯ ಸಂಘಟನಾ ಕಾರ್ಯದರ್ಶಿ ಶಾಹೀನಾ ಕೌಸರ್ ಮಾತನಾಡಿ, ‘ಎರಡು ರಾಷ್ಟ್ರೀಯ ಪಕ್ಷಗಳ ಆಡಳಿತವನ್ನು ರಾಜ್ಯದ ಜನತೆ ನೋಡಿ ಬೇಸತ್ತಿದ್ದಾರೆ. ಒಬ್ಬರು ಕೈಕೊಟ್ಟಿದ್ದಾರೆ. ಇನ್ನೊಬ್ಬರು ಕಿವಿಗೆ ಹೂ ಇಟ್ಟಿದ್ದಾರೆ. ಆದ್ದರಿಂದ ಮಹಿಳೆಯರನ್ನು ಪ್ರತಿನಿಧಿಸುವ ತೆನೆ ಹೊತ್ತ ಮಹಿಳೆಗೆ ತಮ್ಮ ಅಮೂಲ್ಯವಾದ ಮತಗಳನ್ನು ನೀಡಬೇಕೆಂದು ಮನವಿ ಮಾಡಿದರು.

ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿ, ‘ಶಾಸಕ ಹಂಪನಗೌಡ ಬಾದರ್ಲಿ ಎಂಎಸ್ಐಎಲ್ ಕಿಟ್ ಗಳನ್ನು ಕೊಡುವ ಮೂಲಕ ಜನತೆಯ ಮನಸ್ಸನ್ನು ಗೆಲ್ಲುವ ಹಗಲುಗನಸು ಕಾಣುತ್ತಿದ್ದಾರೆ. ಮೊದಲು ಎಡದಂಡೆ ನಾಲೆಗೆ ಸರಿಯಾಗಿ ನೀರು ಪೂರೈಸಲಿ. ಬೆಳೆಗಳು ಒಣಗುವ ಹಂತಕ್ಕೆ ಬಂದಿವೆ. ಅವರಿಗೆ ಪರಿಹಾರ ಕೊಡಿಸುವ ಕೆಲಸವನ್ನಾದರೂ ಮಾಡಲಿ’ ಎಂದರು.
ಯವ ಮೋರ್ಚಾದ ರೈತ ವಿಭಾಗದ ಅಧ್ಯಕ್ಷೆ ಚೈತ್ರಾಗೌಡ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಲಕ್ಷ್ಮೀ ಅಶ್ವಿನಿ ಗೌಡ ಮಹಿಳಾ ಘಟಕದ ಮುಖ್ಯ ಸಂಚಾಲಕಿ ಸರಸ್ವತಿ ಪಾಟೀಲ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಶಂಕ್ರಮ್ಮ ನಾಡಗೌಡ ವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಿ ಚಂದ್ರುಭೂಪಾಲ ನಾಡಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶರಣಮ್ಮ ವೆಂಕಾರೆಡ್ಡಿ, ಪಾರ್ವತೆಮ್ಮ, ಜೆಡಿಎಸ್ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಪ್ರಿಯಾಂಕ, ಜಿಲ್ಲಾ ಕಾರ್ಯದರ್ಶಿ ಪದ್ಮಾ, ತಾಲ್ಲೂಕು ಘಟಕದ ಅಧ್ಯಕ್ಷೆ ಅನ್ನಪೂರ್ಣ ರಂಗನಗೌಡ, ನಗರ ಘಟಕದ ಅಧ್ಯಕ್ಷೆ ಚಂದ್ರಕಲಾ, ಮುಖಂಡರಾದ ಕಾವ್ಯ ಹೊಸಪೇಟೆ, ಲಕ್ಷ್ಮೀ, ಅನಿತಾ, ಬಿಎಸ್ಪಿಯ ದೀಪಾ ಸಾಲಿಮಠ, ನಗರಸಭೆ ಮಾಜಿ ಅಧ್ಯಕ್ಷೆ ಪದ್ದಮ್ಮ ಕರಿಯಪ್ಪ, ತಾಜ್ ಅಂಜುಮಾ, ಶರಣಮ್ಮ ಬಂಡಿ ಇದ್ದರು.

ಸಮಾವೇಶಕ್ಕೆ ತಾಲ್ಲೂಕಿನ ವಿವಿಧೆಡೆಯಿಂದ ಮಹಿಳೆಯರು ಆಗಮಿಸಿದ್ದರು. ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಅವರು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.

source:Prajavani