ರಾಮನಗರ,(ಮಾ.23): ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಬಹಿರಂಗ ಹೇಳಿಕೆ ನೀಡಿದ ಬಳಿಕ ಚನ್ನಪಟ್ಟಣದಲ್ಲಿ ಜೆಡಿಎಸ್ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಇಷ್ಟು ದಿನಗಳ ಕಾಲ ಜೆಡಿಎಸ್ ಮುಖಂಡರ ನಡುವೆ ಇದ್ದ ಆಂತರಿಕ ಬಿಕ್ಕಟ್ಟು, ಭಿನ್ನಾಭಿಪ್ರಾಯ ಸಂಪೂರ್ಣ ಶಮನವಾಗಿದೆ. ಇದೇ ಉತ್ಸಾಹದಲ್ಲಿ ಇಂದು ನೂತನ ಜೆಡಿಎಸ್ ಕಚೇರಿ ಉದ್ಘಾಟನೆ ಮಾಡುವ ಮೂಲಕ ಹಾಲಿ ಶಾಸಕ, ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ವಿರುದ್ಧ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಸಮರಸಾರಿದ್ದಾರೆ.

ಹೌದು ಈ ಬಾರಿ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ರಾಜಕಾರಣ ಇಡೀ ರಾಜ್ಯದ ಗಮನಸೆಳೆಯುತ್ತಿದೆ. ಈ ಬಾರಿ ಚನ್ನಪಟ್ಟಣದಿಂದ ಜೆಡಿಎಸ್ ಪಕ್ಷದಿಂದ ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅಖಾಡಕ್ಕಿಳಿದರೆ, ಬಿಜೆಪಿ ಪಕ್ಷದಿಂದ ಹಾಲಿ ಶಾಸಕ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕಣಕ್ಕಿಳಿಯಲಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷದಿಂದ ಡಿ.ಕೆ.ಶಿವಕುಮಾರ್ ಬಾವ ಶರತ್‌ಚಂದ್ರ ಸ್ಪರ್ಧಿಸುವ ಸಾಧ್ಯತೆ ಇದೆ.  ಆದರೆ ಚನ್ನಪಟ್ಟಣದಲ್ಲಿ ಮಾತ್ರ ನೇರಹಣಾಹಣಿ ಇರೋದು ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಿ.ಪಿ.ಯೋಗೇಶ್ವರ್ ನಡುವೆ. ಇಷ್ಟುದಿನಗಳ ಕಾಲ ಇದ್ದ ಚನ್ನಪಟ್ಟಣದ ಜೆಡಿಎಸ್ ಅಭ್ಯರ್ಥಿ ಯಾರು ಎಂಬ ಗೊಂದಲಕ್ಕೆ ಸ್ವತ: ಹೆಚ್.ಡಿ.ಕುಮಾರಸ್ವಾಮಿಯವರೆ ಸ್ಪಷ್ಟನೆ ನೀಡಿದ್ದು ನಾನೇ ಅಭ್ಯರ್ಥಿ ಎಂದು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಚನ್ನಪಟ್ಟಣ ಜೆಡಿಎಸ್ ಕಾರ್ಯಕರ್ತರಿಗೆ ಸಿಹಿಸುದ್ದಿ ನೀಡಿದ್ದಾರೆ.

ಇದೇ ಉತ್ಸಾಹದಲ್ಲಿರುವ ಜೆಡಿಎಸ್ ಮುಖಂಡರು ಇಂದು ಚನ್ನಪಟ್ಟಣ ನಗರದ ಮಹಾಲಕ್ಷ್ಮೀ ಬಡಾವಣೆಯ 2 ನೇ ಅಡ್ಡರಸ್ತೆಯಲ್ಲಿ ನೂತನ ಜೆಡಿಎಸ್ ಕಚೇರಿ ಉದ್ಘಾಟನೆ ಮಾಡುವ ಮೂಲಕ ಜೆಡಿಎಸ್ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಇನ್ನು ಹೆಚ್.ಡಿ.ಕುಮಾರಸ್ವಾಮಿಯವರನ್ನ ಈ ಬಾರಿ ಅತಿಹೆಚ್ಚಿನ ಮತಗಳಿಂದ ಚನ್ನಪಟ್ಟಣದಲ್ಲಿ ಗೆಲ್ಲಿಸುತ್ತೇವೆಂದು ಮಾಜಿ ಶಾಸಕ ಎಂ.ಸಿ.ಅಶ್ವಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ತಾಲ್ಲೂಕಿನ ಜೆಡಿಎಸ್ ಮುಖಂಡರ ನಡುವೆ ಇದ್ದ ಕೆಲ ಗೊಂದಲ ಹಾಗೂ ಬಿಕ್ಕಟ್ಟುಗಳು ಹೆಚ್.ಡಿ.ಕೆ ಕ್ಷೇತ್ರದ ಅಭ್ಯರ್ಥಿ ಎಂದು ತೀರ್ಮಾನವಾದ ಬಳಿಕ ಎಲ್ಲವೂ ಶಮನವಾಗಿದೆ. ಇಂದು ನಡೆದ ಜೆಡಿಎಸ್ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಮುಖ ಜೆಡಿಎಸ್ ಮುಖಂಡರಾದ ಮಾಜಿ ಶಾಸಕ ಎಂ.ಸಿ.ಅಶ್ವಥ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಹೆಚ್.ಸಿ.ಜಯಮುತ್ತು, ಎಸ್.ಲಿಂಗೇಶ್‌ಕುಮಾರ್, ರಾಂಪುರ ರಾಜಣ್ಣ, ಜಬೀಉಲ್ಲಾಖಾನ್, ಎಂ.ಸಿ.ಕರಿಯಪ್ಪ ಸೇರಿದಂತೆ ಹಲವರು ಭಾಗವಹಿಸುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಿದರು.

ಹಾಗೇ ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಎಂದೇ ಬಿಂಬಿತವಾಗಿದ್ದ ಹೆಚ್.ಸಿ.ಜಯಮುತ್ತು ಮಾತನಾಡಿ ಕುಮಾರಣ್ಣನವರನ್ನ ನಾವೆಲ್ಲ ಒಗ್ಗಟ್ಟಾಗಿ ಸೇರಿ ಗೆಲ್ಲಿಸುತ್ತೇವೆ, ನಮ್ಮ ನಡುವೆ ಯಾವ ಭಿನ್ನಭಿಪ್ರಾಯವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಒಟ್ಟಾರೆ ಇಷ್ಟುದಿನಗಳ ಕಾಲ ಚನ್ನಪಟ್ಟಣ ತಾಲ್ಲೂಕು ಜೆಡಿಎಸ್ ಮುಖಂಡರ ನಡುವೆ ಇದ್ದ ಭಿನ್ನಭಿಪ್ರಾಯವೆಲ್ಲ ಮಾಯವಾಗಿದ್ದು, ಹೆಚ್.ಡಿ.ಕೆ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆಯಾದ ಬಳಿಕ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ನವ ಚೈತನ್ಯ ಬಂದಿದೆ. ಇನ್ನು ಹಾಲಿ ಶಾಸಕ ಸಿ.ಪಿ.ಯೋಗೇಶ್ವರ್ ವಿರುದ್ಧ ತಾಲ್ಲೂಕು ಜೆಡಿಎಸ್ ಪ್ರಮುಖ ಮುಖಂಡರು ಸಮರ ಸಾರಿದ್ದು ಚುನಾವಣಾ ಯುದ್ದಕ್ಕೆ ಸಜ್ಜಾಗಿದ್ದಾರೆ.