ಮಾಗಡಿ: ‘ವೀರಶೈವ ಲಿಂಗಾಯತ ಸಮುದಾಯವನ್ನು ಇಬ್ಭಾಗ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಬೆಂಬಲ ಇಲ್ಲ. ಬದಲಾಗಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಎ.ಮಂಜುವನ್ನು ಸಮುದಾಯದವರೆಲ್ಲರೂ ಒಗ್ಗಟ್ಟಾಗಿ ಬೆಂಬಲಿಸುತ್ತಿದ್ದೇವೆ’ ಎಂದು ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಹಾಗೂ ವೀರಶೈವ ಸಮಾಜದ ಮುಖಂಡ ಎಚ್.ಎಸ್.ಯೋಗಾನಂದ ಬಿಡದಿ ತಿಳಿಸಿದರು.

ಜೆಡಿಎಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ.ಬಾಲಕೃಷ್ಣ ವೀರಶೈವ ಸಮುದಾಯದವರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲಿಲ್ಲ ಎಂದು ದೂರಿದರು.

ಕೆ.ಜಿ.ಉದ್ದೇಶ್, ಹೊನ್ನಾಪುರದ ಶಿವಪ್ರಸಾದ್ ಇಬ್ಬರನ್ನು ಹೊರತು ಪಡಿಸಿದರೆ ತಾಲ್ಲೂಕಿನಲ್ಲಿರುವ ಯಾವುದೇ ವೀರಶೈವರಿಗೆ ಅನುಕೂಲ ಮಾಡಿಕೊಟ್ಟಿಲ್ಲ ಎಂದರು.

ಬಾಲಕೃಷ್ಣ ಅವರ ನಾಲ್ಕೈದು ಜನ ಹಿಂಬಾಲಕರು ತಾಲ್ಲೂಕಿನಲ್ಲಿರುವ ವೀರಶೈವರಲ್ಲಿ ಗೊಂದಲ ಉಂಟು ಮಾಡುವುದನ್ನು ಕೈ ಬಿಡಬೇಕು. ವೈಯಕ್ತಿಕವಾಗಿ ಲಾಭ ಮಾಡಿಕೊಂಡವರು ವೀರಶೈವ ಸಮುದಾಯವನ್ನು ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದರು.

ಜಿಲ್ಲೆಯಲ್ಲಿ 21 ಜಿಲ್ಲಾ ಪಂಚಾಯಿತಿ ಸ್ಥಾನಗಳಿವೆ. ವೀರಶೈವರಿಗೆ ಕಾಂಗ್ರೆಸ್ ಪಕ್ಷ ಒಂದು ಸ್ಥಾನವನ್ನೂ ನೀಡಲಿಲ್ಲ. ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಸ್ಥಾನವನ್ನೂ ನೀಡಲಿಲ್ಲ ಎಂದರು.

ಸಿದ್ಧಗಂಗಾಶ್ರೀಗಳ ಜನ್ಮದಿನ ಆಚರಣೆ ಮಾಡಿದ್ದನ್ನು ಬಿಟ್ಟರೆ ಎಚ್.ಸಿ.ಬಾಲಕೃಷ್ಣ ವೀರಶೈವ ಸಮುದಾಯಕ್ಕೆ ಏನೂ ಸಹಾಯ ಮಾಡಲಿಲ್ಲ ಎಂದು ಆರೋಪಿಸಿದರು.

ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್ ಕುದೂರಿನಲ್ಲಿ ಸಿದ್ಧಗಂಗಾ ಶ್ರೀಗಳ ಗುರುವಂದನೆ ಮಾಡಿಸಿದರು. ಲಕ್ಕಯ್ಯನಪಾಳ್ಯ ವೀರಾಪುರದ ನಡುವೆ ಸೇತುವೆ ನಿರ್ಮಿಸುತ್ತಿದ್ದಾರೆ ಎಂದರು.

ಅಲಸಬೆಲೆ ಗಂಗರಾಜಯ್ಯ ಮಾತನಾಡಿ, ವಿ.ಸೋಮಣ್ಣ ಅನುದಾನದಲ್ಲಿ ಸಿದ್ಧಗಂಗಾ ಶ್ರೀಗಳ ಹುಟ್ಟೂರಿನ ಅಭಿವೃದ್ಧಿಗೆ ಪ್ರೋತ್ಸಾಹ ನೀಡಿದ್ದನ್ನು ಬಿಟ್ಟರೆ ಕಾಂಗ್ರೆಸ್ ಪಕ್ಷದಿಂದ ನಯಾ ಪೈಸೆ ಅನುಕೂಲವಾಗಿಲ್ಲ ಎಂದರು.

‘ವೀರಶೈವ ಧರ್ಮವನ್ನು ಇಬ್ಬಾಗ ಮಾಡಿ ನಮ್ಮಲ್ಲಿ ದ್ವೇಷ, ಅಸೂಯೆ ಬೆಳೆಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಬುದ್ಧಿ ಕಲಿಸಲು ತಾಲ್ಲೂಕಿನಲ್ಲಿರುವ ಎಲ್ಲ ಹರಗುರುಚರಮೂರ್ತಿಗಳ ಮಾರ್ಗದರ್ಶನದಲ್ಲಿ ವೀರಶೈವರು ಒಂದಾಗಿದ್ದೇವೆ’ ಎಂದರು.

ವೀರಶೈವ ಸಮಾಜದ ಮುಖಂಡರಾದ ಅನಿಲ್ ಕುಮಾರ್, ಹೇಮಂತ್ ಗಣೇಶ್, ಪುರಸಭಾ ಸದಸ್ಯ ಮಹೇಶ್, ಜ್ಞಾನಜ್ಯೋತಿ ಚಂದ್ರಣ್ಣ, ಪರಮಣ್ಣ, ಪ್ರೇಮಣ್ಣ, ಜಗಣ್ಣ, ರವಿ, ಬಾಬು ಮಾತನಾಡಿ, ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿರುವ ಎಲ್ಲಾ ವೀರಶೈವರು ಜೆ.ಡಿ.ಎಸ್ ಪಕ್ಷವನ್ನು ಬೆಂಬಲಿಸಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಸೋಲಿಸುವುದೇ ಸಮುದಾಯದ ಮುಖ್ಯ ಗುರಿಯಾಗಿದೆ ಎಂದು ವಿವರಿಸಿದರು.

By R

You missed