ರಾಮನಗರ: ಏಳು ಜನ ಕಾಂಗ್ರೆಸ್ ಸರ್ಕಾರ ಕಟ್ಟುತ್ತೇವೆಂದು ಹೋಗಿದ್ದಾರೆ. ನಮ್ಮ‌ ಪಕ್ಷದಲ್ಲಿದ್ದಾಗ ಅವ್ರು ಏನೇನ್​ ಕಟ್ಟಿದ್ರು ಅಂತ ಗೊತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಜೆಡಿಎಸ್‌ ತೊರೆದ ರೆಬೆಲ್‌ ಶಾಸಕರಿಗೆ ತಿರುಗೇಟು ನೀಡಿದ್ದಾರೆ.

ಮಾಗಡಿಯಲ್ಲಿ ನಡೆಯುತ್ತಿರುವ JDS​ ವಿಕಾಸ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿ, ಎಲ್ಲೆಲ್ಲಿ ಜೂಜಾಡಿ, ಏನೇನು ಕಟ್ಟಿದ್ರಿ ಎಂದು ಗೊತ್ತಿದೆ. ಇನ್ನು ಕಾಂಗ್ರೆಸ್‌ನಲ್ಲಿ ಇನ್ನೇನನ್ನು ಕಟ್ಟಲು ಸಾಧ್ಯ. ಕಾಂಗ್ರೆಸ್ ಸರ್ಕಾರದಿಂದ ಪೊಲೀಸ್‌ ಅಧಿಕಾರಿಗಳಿಗೆ ತೊಂದರೆ ಆಗುತ್ತಿದೆ. ನಾನು ಸಿಎಂ ಆಗುತ್ತೇನೆ ಆಗ ಈಗಿರುವ ಹಿಂಸೆ ತಪ್ಪುತ್ತದೆ. ಆಗ ನೀವೇ ಮುಖ್ಯಮಂತ್ರಿಯಂತೆ ಇರಿ ಎಂದು ಹೇಳಿದರು.

‘ಅನ್ನಭಾಗ್ಯ’ ಜೆಡಿಎಸ್ ಸರ್ಕಾರ ಇದ್ದಾಗ ಆಗಿದ್ದು. ಸಿದ್ದರಾಮಯ್ಯ ಹುಂಡಿಯಿಂದ ತಂದು ಅಕ್ಕಿ ಕೊಡುತ್ತಿಲ್ಲ. ಬಡವರಿಗೆ ಉಚಿತ ಅಕ್ಕಿ ಕೊಡುತ್ತೇನೆ ಎಂದು ಹೇಳಿ ಅದೇ ಹಣ ತೆಗೆದುಕೊಂಡು ಮದ್ಯ ಸೇವನೆ‌ ಮಾಡುತ್ತಾರೆ. ಉಚಿತ ಅಕ್ಕಿ ಕೊಟ್ಟು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ತಿಳಿಸಿದರು.

ಮತದಾರರು ಯಾವುದೇ ಆಮಿಷಕ್ಕೆ ಒಳಗಾಗಬೇಡಿ. ನಮಗೆ ಮತ ಕೊಟ್ಟು ಆರ್ಶೀರ್ವದಿಸಿ. ಬಾಲಕೃಷ್ಣ ಹಣ ಕೊಟ್ಟು ಜನರನ್ನು ಸಂಪಾದಿಸಿದ್ದಾರೆ. ಎ.ಮಂಜುಗೆ ಜನಶಕ್ತಿ ಇದೆ, ಚುನಾವಣೆಗೆ ಹಣ ಮುಖ್ಯವಲ್ಲ. ಆರೋಗ್ಯವನ್ನೂ ಲೆಕ್ಕಿಸದೆ ರಾಜ್ಯಕ್ಕಾಗಿ ಹೋರಾಡುತ್ತಿದ್ದೇನೆ. ನಾನು‌ ಸಿಎಂ ಆದ್ರೆ ಮೊದಲು ರೈತರಿಗೆ ಆದ್ಯತೆ ಕೊಡುತ್ತೇನೆ. ರೈತರ ಸಾಲ ಸಂಪೂರ್ಣ ಮನ್ನಾ ಮಾಡುತ್ತೇನೆ ಎಂದರು.

ಬಿಜೆಪಿಯವರು ಮೋದಿ ಮುಖ ನೋಡಿ ಮತ ಕೊಡಿ ಎಂದು ಕೇಂದ್ರ ಬಿಜೆಪಿಯವರು ಕೇಳುತ್ತಾರೆ. ಆದರೆ ಯಡಿಯೂರಪ್ಪ ಮುಖ ನೋಡಿ ಎಂದು ಎಲ್ಲೂ ಪ್ರಸ್ತಾಪ ಮಾಡಿಲ್ಲ. ಮುಂದಿನ‌ ಚುನಾವಣೆಯಲ್ಲಿ JDS ಅಧಿಕಾರಕ್ಕೆ ಬಂದೇ ಬರುತ್ತೆ. ಸಿದ್ದರಾಮಯ್ಯ, ರಾಹುಲ್ ಜೆಡಿಎಸ್ ಭದ್ರಕೋಟೆ ಕೆಣಕಿದ್ದೀರಿ. ಮಾಗಡಿಯಲ್ಲಿ ಎಷ್ಟು ಜನ ಸೇರಿದ್ದಾರೆ ಬಂದು ನೋಡಿ. ಸಿಎಂ ಸಿದ್ದರಾಮಯ್ಯನವರು ಪಂಜರದ ಗಿಳಿಯಾಗಿದ್ದಾರೆ ಎಂದು ಕಿಡಿಕಾರಿದರು. (ದಿಗ್ವಿಜಯ ನ್ಯೂಸ್)