ಹೊಸದುರ್ಗ: ಭದ್ರಾ ಮೇಲ್ದಂಡೆ ಯೋಜನೆ ತ್ವರಿತ ಅನುಷ್ಠಾನಕ್ಕೆ ತಾಲ್ಲೂಕಿನ ಮತದಾರರು ಈ ಬಾರಿ ಜೆಡಿಎಸ್‌ಗೆ ಬೆಂಬಲ ನೀಡಿ ಗೆಲ್ಲಿಸಬೇಕು ಎಂದು ಪಕ್ಷದ ಅಭ್ಯರ್ಥಿ ಹಾಗೂ ಚಿತ್ರನಟ ಶಶಿಕುಮಾರ್‌ ಮನವಿ ಮಾಡಿದರು.

ತಾಲ್ಲೂಕಿನ ಮತ್ತೋಡು ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಶುಕ್ರವಾರ ಮತಯಾಚಿಸಿ ಅವರು ಮಾತನಾಡಿದರು.

‘ನಾನು ಸಂಸದನಾಗಿದ್ದಾಗ ಹೊಸದುರ್ಗದಲ್ಲಿ ಅತ್ಯುತ್ತಮ ಖಾಸಗಿ ಬಸ್‌ ನಿಲ್ದಾಣ ಸೇರಿದಂತೆ ತಾಲ್ಲೂಕಿನಲ್ಲೆಡೆ ಜನಪರವಾದ ಹಲವು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಅಂದಿನಿಂದಲೂ ಎಲ್ಲಾ ಧರ್ಮ, ಜಾತಿಯ ಜನರೊಂದಿಗೆ ವಿಶ್ವಾಸ ಇಟ್ಟುಕೊಂಡಿದ್ದೇನೆ. ಜೀವನ ಪರ್ಯಂತ ಜನಸೇವೆ ಮಾಡಬೇಕು ಎಂಬ ಹಂಬಲದಿಂದ ಈ ಬಾರಿ ಸ್ಪರ್ಧಿಸಿದ್ದೇನೆ. ಅಮೂಲ್ಯವಾದ ಮತವನ್ನು ಕೊಟ್ಟು ಗೆಲ್ಲಿಸಿದಲ್ಲಿ  ಪ್ರಾಮಾಣಿಕವಾಗಿ  ಸೇವೆ ಮಾಡುತ್ತೇನೆ’ ಎಂದು ಹೇಳಿದರು.

‘ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ 2006ರಲ್ಲಿಯೇ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಆಡಳಿತಾತ್ಮಕ ಮಂಜೂರಾತಿ ನೀಡಿದ್ದರು. ಆದರೆ, ನಂತರದಲ್ಲಿ ಅಧಿಕಾರಕ್ಕೆ ಬಂದ ರಾಷ್ಟ್ರೀಯ ಪಕ್ಷಗಳೆರಡರ ನಾಯಕರು ನಿರಾಸಕ್ತಿ ತೋರಿದ್ದರಿಂದ 12 ವರ್ಷ ಕಳೆದರೂ ಯೋಜನೆ ಪೂರ್ಣಗೊಂಡಿಲ್ಲ. ಮಳೆ ಇಲ್ಲದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಯಲು ಸೀಮೆಗೆ ಭದ್ರೆ ನೀರು ಬೇಗನೆ ಹರಿಯಬೇಕಾದರೆ ಮತ್ತೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಬೇಕು. ಒಮ್ಮೆ ನನಗೆ ಅಧಿಕಾರ ಕೊಟ್ಟರೆ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದು ಮನವಿ ಮಾಡಿದರು.

 

ಜೆಡಿಎಸ್‌ ರಾಜ್ಯ ಹಿರಿಯ ಉಪಾಧ್ಯಕ್ಷೆ ಮೀನಾಕ್ಷಿ ನಂದೀಶ್‌, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಲಲಿತಾ ಕೃಷ್ಣಮೂರ್ತಿ, ತಾಲ್ಲೂಕು ಘಟಕದ ಅಧ್ಯಕ್ಷ ನಂದೀಶ್‌, ಪ್ರಧಾನ ಕಾರ್ಯದರ್ಶಿ ಬಾ.ಮೈಲಾರಪ್ಪ, ಮುಖಂಡರಾದ ಅನಂತಯ್ಯ, ಗುರುಲಿಂಗಯ್ಯ ಹಾಜರಿದ್ದರು.