ಪ್ರಜಾವಾಣಿ ವಾರ್ತೆ

ಹಾಸನ: ‘ಎರಡೂ ರಾಷ್ಟ್ರೀಯ ಪಕ್ಷಗಳನ್ನು ಸೋಲಿಸಿ ಜಾತ್ಯತೀತ ಜನತಾದಳ ‘ಎ’ ಟೀಂ ಆಗಿ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

ಜಿಲ್ಲಾ  ಕ್ರೀಡಾಂಗಣದಲ್ಲಿ ಏರ್ಪಡಿ
ಸಿದ್ದ ‘ವಿಕಾಸ ಪರ್ವ’ ಸಮಾವೇಶದಲ್ಲಿ ಅವರು, ‘ಜಿಲ್ಲೆಯ ಸ್ಥಳೀಯ ಸಮಸ್ಯೆ
ಗಳಾದ ತೆಂಗು, ಅಡಿಕೆ, ಆಲೂಗೆಡ್ಡೆ, ಶುಂಠಿ ಬೆಳೆ ನಾಶಕ್ಕೆ ರಾಹುಲ್‌ ಗಾಂಧಿ ಅವರು ಪರಿಹಾರ ಹೇಳಲಿಲ್ಲ. ಸ್ಥಳೀಯ ನಾಯಕರು ಬರೆಯಿಸಿಕೊಟ್ಟ ಸಿದ್ಧ ಭಾಷಣ ಓದಿ ಜೆಡಿಎಸ್‌ ಟೀಕಿಸಿದ್ದಾರೆ’ ಎಂದು ಆಕ್ರೋಶ  ವ್ಯಕ್ತಪಡಿಸಿದರು.

‘ತಮ್ಮನ್ನು ಸಿ.ಎಂ ಸ್ಥಾನದವರೆಗೆ ಬೆಳೆಸಿದ ಮಾತೃಪಕ್ಷದ ನಿರ್ನಾಮಕ್ಕೆ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ಇದು ನೋವಿನ ಸಂಗತಿ. ನನ್ನ ಅಧಿಕಾರ ಅವಧಿಯಲ್ಲಿ ಎಲ್ಲ ವರ್ಗದ ಜನರಿಗೆ ಉದ್ಯೋಗ, ರಾಜಕೀಯ ಅಧಿಕಾರ ನೀಡಿದ್ದೇನೆ. ಜಿಲ್ಲೆಗೆ ಕಾಂಗ್ರೆಸ್‌, ಬಿಜೆಪಿ ಪಕ್ಷಗಳು ದ್ರೋಹವೆಸಗಿವೆ’ ಎಂದರು.

ಶಾಸಕ ಎಚ್‌.ಡಿ.ರೇವಣ್ಣ ಮಾತನಾಡಿ, 10 ವರ್ಷಗಳಿಂದ ಬಿಜೆಪಿ, ಕಾಂಗ್ರೆಸ್‌ ಸರ್ಕಾರ ಜಿಲ್ಲೆಯ ಅಭಿವೃದ್ಧಿಯನ್ನು ಕಡೆಗಣಿಸಿವೆ. ಹಲವು ಯೋಜನೆಗಳಿಗೆ ಅಡ್ಡಗಾಲು ಹಾಕಿವೆ. ಜೆಡಿಎಸ್‌ ಬಿಜೆಪಿಯ ‘ಬಿ’ ಟೀಂ ಎಂದು ಟೀಕಿಸುವ ಮುನ್ನ ಯುಪಿಎ ಅವಧಿಯಲ್ಲಿ ಯಾರ ಜತೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ನಡೆಸಲಾಯಿತು ಎಂದು ತನ್ನ ತಾಯಿ ಸೋನಿಯಾ ಗಾಂಧಿ ಅವರನ್ನು ರಾಹುಲ್‌ ಗಾಂಧಿ ಕೇಳಲಿ’ ಎಂದು ತಿರುಗೇಟು ನೀಡಿದರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ‘ಜೆಡಿಎಸ್‌ ಅಧಿಕಾರಕ್ಕೆ ಬಂದ 24 ತಾಸಿನಲ್ಲಿ ಕೇವಲ ರೈತರ ಸಾಲ ಮನ್ನಾ ಜೊತೆಗೆ ಹಲವು ಜನಪ್ರಿಯ ಯೋಜನೆಗಳನ್ನೂ ಘೋಷಿಸಲಿದೆ. ವಿಧವೆಯರು, ವೃದ್ಧರು, ಅಂಗವಿಕಲರ ಮಾಸಿಕ ವೇತನ ಏರಿಕೆ ಮಾಡುತ್ತೇವೆ’ ಎಂದು ಹೇಳಿದರು. ‘ಕಾಂಗ್ರೆಸ್‌ ಜಾಹೀರಾತಿನ ಸರ್ಕಾರ. ಜನರ ಸಾವಿರ ಕೋಟಿ ರೂಪಾಯಿ ತೆರಿಗೆ ಹಣವನ್ನು ಜಾಹೀರಾತಿಗೆ ಮೀಸಲಿಟ್ಟಿದೆ ಎಂದರು.

1989 –90ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಇದೇ  ಜಿಲ್ಲಾ ಕ್ರೀಡಾಂಗಣದಲ್ಲಿ ಆಗಿನ ಪ್ರಧಾನಿ ಚಂದ್ರಶೇಖರ್‌, ದೇವಿಲಾಲ್‌ರ ಭಾಷಣ ಕೇಳಲು ಸಾಮಾನ್ಯ ವ್ಯಕ್ತಿಯಾಗಿ ಬಂದಿದ್ದೆ ಎಂದು ಸ್ಮರಿಸಿದ ಅವರು, ರಾಜ್ಯದ ಜನತೆ ಮತ್ತೆ ಆಶೀರ್ವಾದ ಮಾಡಿದರೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಲಾಗುವುದು’ ಎಂದು ನುಡಿದರು.

ಮುಖಂಡರಾದ ಪಿ.ಜಿ.ಆರ್‌.ಸಿಂಧ್ಯ, ಎಚ್‌.ವಿಶ್ವನಾಥ್‌, ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ, ಬಿಸಿಪಿ ಮುಖಂಡ ಗಂಗಾಧರ್‌ ಮಾತನಾಡಿದರು.

ಭವಾನಿ ರೇವಣ್ಣ, ಚನ್ನಮ್ಮ ದೇವೇಗೌಡ, ಬಂಡೆಪ್ಪ ಕಾಂಶೆಪೂರ್‌, ಪ್ರಜ್ವಲ್‌ ರೇವಣ್ಣ, ಶಾಸಕರಾದ ಸಿ.ಎನ್‌.ಬಾಲಕೃಷ್ಣ, ಕೆ.ಎಂ.ಶಿವಲಿಂಗೇಗೌಡ, ಎಚ್‌.ಕೆ. ಕುಮಾರಸ್ವಾಮಿ, ಎಚ್‌.ಎಸ್‌.ಪ್ರಕಾಶ್‌, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌.ಲಿಂಗೇಶ್‌, ಎ.ಟಿ.ರಾಮಸ್ವಾಮಿ ಹಾಜರಿದ್ದರು.

By R

You missed