ತಿ.ನರಸೀಪುರ: ‘ಜೆಡಿಎಸ್ ಅಧಿಕಾರಕ್ಕೆ ಬಂದರೆ ಹೊಸ ಕೃಷಿ ನೀತಿ, ಯೋಜನೆಗಳ ಮೂಲಕ ರೈತರನ್ನು ಸಮಸ್ಯೆಮುಕ್ತರನ್ನಾಗಿ ಮಾಡಲಾಗು ವುದು’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ತಲಕಾಡು ಹೋಬಳಿಯ ಮಡವಾಡಿಯಿಂದ ಕ್ಷೇತ್ರದಲ್ಲಿ ವಿಕಾಸ ಪರ್ವ ಯಾತ್ರೆ ಆರಂಭಿಸಿದ ಅವರು, ತಲಕಾಡು, ಹೆಮ್ಮಿಗೆ, ಮಾದಾಪುರ ಮಾರ್ಗವಾಗಿ ಮೂಗೂರಿಗೆ ಆಗಮಿಸಿ ಅವರು ಮಾತನಾಡಿದರು.

‘ರೈತರ ಸಮಗ್ರ ಅಭಿವೃದ್ಧಿಗಾಗಿ ಹೊಸ ಕೃಷಿ ನೀತಿ ಜಾರಿಗೆ ತರಲು ಇಸ್ರೇಲ್‌ಗೆ ಭೇಟಿ ನೀಡಿ ಅಲ್ಲಿನ ಕೃಷಿ ಚಟುವಟಿಕೆ ಹಾಗೂ ಅಭಿವೃದ್ಧಿಯ ಅಗತ್ಯ ಮಾಹಿತಿ ಪಡೆದಿದ್ದೇನೆ. ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ರೈತರ ಸಾಲಮನ್ನಾ ಮಾಡಿ ಕೃಷಿಗೆ ಹೆಚ್ಚು ಒತ್ತು ನೀಡುತ್ತೇನೆ’ ಎಂದು ಆಶ್ವಾಸನೆ ನೀಡಿದರು.

‘ಹಿರಿಯ ನಾಗರಿಕರಿಗೆ ತಿಂಗಳಿಗೆ ₹ 5 ಸಾವಿರ ಗೌರವಧನ, ಮಹಿಳಾ ಸ್ವಸಹಾಯ ಸಂಘಗಳ ಅಭಿವೃದ್ಧಿಗೆ ಯೋಜನೆ, ಯುವಕರಿಗೆ ಉದ್ಯೋಗ, ಅಂಗವಿಕಲರು ಹಾಗೂ ವಿಧವೆಯರಿಗೆ ಮಾಸಿಕ ₹ 2 ಸಾವಿರ ಗೌರವಧನ ಯೋಜನೆ ಜಾರಿಗೆ ತರಲಾಗುವುದು’ ಎಂದು ಭರವಸೆ ನೀಡಿದರು.

‘ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ದಿವಾಳಿ ಮಾಡಿದೆ. ನಾವು ಅವರಂತಲ್ಲ. ನೀವೇ ನಮ್ಮ ಸಲಹೆಗಾರರು ಎಂದರು.

‘ಅಭ್ಯರ್ಥಿ ಎಂ.ಅಶ್ವಿನ್ ಕುಮಾರ್ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಆದರೆ, ಅವರು ಪ್ರಾಮಾಣಿಕ ಕಾರ್ಯಕರ್ತ, ಅವರು ಯಾವ ಪಕ್ಷ ಅಥವಾ ವ್ಯಕ್ತಿ ಜತೆ ಶಾಮೀಲಾಗುವ ಅಗತ್ಯ ಅವರಿಗಾಗಲಿ, ನಮಗಾಗಲಿ ಇಲ್ಲ. ಅಪಪ್ರಚಾರದ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ’ ಎಂದರು.

ಕ್ಷೇತ್ರದ ಅಭ್ಯರ್ಥಿ ಎಂ.ಅಶ್ವಿನ್ ಕುಮಾರ್, ಕ್ಷೇತ್ರಾಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ, ತಾ.ಪಂ ಸದಸ್ಯ ಬಿ.ಸಾಜಿದ್ ಆಹಮದ್, ಜಿ.ಪಂ ಸದಸ್ಯ ಮಾದೇಗೌಡ, ಪಕ್ಷದ ಮುಖಂಡರಾದ ಎಂ.ಎಸ್.ಬಸವರಾಜು, ಮಂಜುನಾಥ್, ಶಿವು, ಎಂ.ಆರ್.ಶಿವಮೂರ್ತಿ, ದಿಲೀಪ್ ಕುಮಾರ್, ಎಂ.ಕೆ.ಸಿದ್ದರಾಜು, ಗುರುಸಿದ್ದಪ್ಪ, ಚಿಕ್ಕಸ್ವಾಮಿ ಇದ್ದರು.

By R

You missed