ತಲಕಾಡು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಬುಧವಾರ ಮಡವಾಡಿ ಗ್ರಾಮದಿಂದ ಪ್ರಾರಂಭವಾದ ಕುಮಾರ ಪರ್ವ ಯಾತ್ರೆಗೆ ತಲಕಾಡು ಹೋಬಳಿಯಾದ್ಯಂತ ಅಭೂತಪೂರ್ವ ಸ್ವಾಗತ ಸಿಕ್ಕಿತು.

ಮಧ್ಯಾಹ್ನದ ಉರಿ ಬಿಸಿಲನ್ನೂ ಲೆಕ್ಕಿಸದೆ ಹಳ್ಳಿಗಳಲ್ಲಿ ಕಾದು ನಿಂತಿದ್ದ ಅಪಾರ ಅಭಿಮಾನಿಗಳು, ಕಾರ್ಯಕರ್ತರು ಕುಮಾರಸ್ವಾಮಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಮಡವಾಡಿ, ಕಾವೇರಿಪುರ, ಪರಿಣಾಮಿಪುರ, ಕಾಳಿಹುಂಡಿ, ವಿಜಯಪುರ, ಕುಕ್ಕೂರು ಮಾರ್ಗದ ಮೂಲಕ ತಲಕಾಡು ಮುಖ್ಯಸರ್ಕಲ್​ಗೆ ಯಾತ್ರೆ ಆಗಮಿಸುತ್ತಿದ್ದಂತೆ ಅಭಿಮಾನಿಗಳ ಹಷೋದ್ಗಾರ ಮುಗಿಲು ಮುಟ್ಟಿತು.

ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ನಾನು ಎಂದಿಗೂ ಒಂದು ಸಮಾಜಕ್ಕೆ ಸೀಮಿತವಾಗಿ ರಾಜಕಾರಣ ಮಾಡಿದವನಲ್ಲ, ಎಲ್ಲ ಸಮಾಜದ ಬಡವರನ್ನು ಗುರುತಿಸಿ ಕೆಲಸ ಮಾಡಿದ್ದೇನೆ ಎಂದು ತಮ್ಮ 20 ತಿಂಗಳ ಆಡಳಿತವನ್ನು ಸಮರ್ಥಿಸಿಕೊಂಡರು.

ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಮತದಾರರು ಅಧಿಕಾರಕ್ಕೆ ತಂದರೆ, ರೈತರು ಹಾಗೂ ಯುವಕರ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ. ಐಎಎಸ್ ಹಾಗೂ ಪೊಲೀಸ್ ಅಧಿಕಾರಿಗಳ ಕೈಗೆ ಆಡಳಿತ ನಡೆಸಲು ಕೊಡುವುದಿಲ್ಲ ಎಂದರು.

ತಿ.ನರಸೀಪುರ ತಾಲೂಕಿನಲ್ಲಿ ಸಾವಿರಾರು ಮರಳು ಕೂಲಿಕಾರ್ವಿುಕರು ಉದ್ಯೋಗವಿಲ್ಲದೆ ಬೀದಿಪಾಲಾಗಿದ್ದಾರೆ. ಮರಳು ಸಾಗಣೆ ನಡೆಸುತ್ತಿದ್ದ ರೈತರ ನೂರಾರು ಎತ್ತಿನಗಾಡಿ, ಟ್ರಾ್ಯಕ್ಟರ್​ಗಳನ್ನು ವಶಪಡಿಸಿಕೊಂಡು ಠಾಣೆಗಳಲ್ಲಿ ಮೊಕದ್ದಮೆ ದಾಖಲು ಮಾಡಲಾಗಿದೆ. ಸಾಲಸೋಲ ಮಾಡಿ ಖರೀದಿಸಿದ್ದ 2500 ಮರಳು ಸಾಗಣೆ ಲಾರಿ ಮಾಲೀಕರು ಅಪಾರ ನಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಲು ಆಡಳಿತ ನಡೆಸುತ್ತಿರುವ ಜಿಲ್ಲೆಯ ಶಾಸಕ, ಮಂತ್ರಿಗಳೇ ಕಾರಣ ಎಂದು ಆರೋಪಿಸಿದರು.

ಕಳೆದ ಬಾರಿಯ ಚುನಾವಣೆಯಲ್ಲಿ ತಲಕಾಡು ಹೋಬಳಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಅಲ್ಪ ಹಿನ್ನಡೆಯಿಂದ ಸೋಲುಂಟಾಗಿದೆ. ಹಾಗಾಗಿ ಈ ಬಾರಿ ಹೋಬಳಿ ಮತದಾರರು ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಬೆಂಬಲ ನೀಡುವಂತೆ ಎಚ್​ಡಿಕೆ ಮನವಿ ಮಾಡಿದರು.

ಯಾತ್ರೆಯಲ್ಲಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಅಶ್ವಿನ್​ಕುಮಾರ್ ಇತರರು ಪಾಲ್ಗೊಂಡಿದ್ದರು.

By R

You missed