hd KUMARASWAMY

ಚಿಕ್ಕಮಗಳೂರು:‘ಧರ್ಮದ ಹೆಸರಿನ ರಾಜಕಾರಣ, ಜಾತಿಗಳ ನಡುವೆ ಸಂಘರ್ಷ ಉಂಟುಮಾಡುವ ವಾತಾವರಣ, ರೈತರಿಗೆ ಬೇಕಿಲ್ಲ. ಬರಗಾಲದಿಂದ ರೈತರಿಗೆ ಬೆಳೆ ನಷ್ಟವಾಗಿದ್ದು, ಸಾಲಮನ್ನಾಕ್ಕೆ ಬೇಡಿಕೆ ಇಟ್ಟಿದ್ದಾರೆ. ಜೆಡಿಎಸ್‌ ಅಧಿಕಾರಕ್ಕೆ ಬಂದರೆ 24 ಗಂಟೆಗಳಲ್ಲಿ ಸಾಲಮನ್ನಾ ಮಾಡುವುದಾಗಿ ಸವಾಲು ಸ್ವೀಕರಿಸಿದ್ದೇನೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ನಗರದ ಜಿಲ್ಲಾ ಆಟದ ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಜೆಡಿಎಸ್‌ ವಿಕಾಸ ಪರ್ವ ಸಮಾವೇಶದಲ್ಲಿ ಮಾತನಾಡಿದರು.

‘ರಾಜ್ಯದಲ್ಲಿ 75 ಲಕ್ಷ ರೈತ ಕುಟುಂಬಗಳು ಬೆಳೆ ನಷ್ಟದಿಂದಾಗಿ ಸುಮಾರು ₹ 58 ಸಾವಿರ ಕೋಟಿ ಸಾಲದ ಸುಳಿಯಲ್ಲಿ ಇವೆ. ಸಾಲ ಮನ್ನಾಕ್ಕಾಗಿ ರೈತರು ಎಲ್ಲ ಪಕ್ಷಗಳಿಗೆ ಬೇಡಿಕೆ ಇಟ್ಟಿದ್ದಾರೆ. ರೈತರ ಸಾಲಮನ್ನಾ ಮಾಡಿದರೆ ರೈತರ ಆರ್ಥಿಕ ಸ್ಥಿತಿ ಅಲ್ಲೋಲ ಕಲ್ಲೋಲವಾಗುತ್ತದೆ ಎಂದು ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ತಳ್ಳಿ ಹಾಕಿದೆ. ರೈತರು ಸಹಕಾರ ಬ್ಯಾಂಕುಗಳಲ್ಲಿ ಪಡೆದಿರುವ ₹ 50ಸಾವಿರ ವರೆಗಿನ ಸಾಲಮನ್ನಾ ಮಾಡಿರುವುದಾಗಿ ರಾಜ್ಯ ಕಾಂಗ್ರೆಸ್‌ ಸರ್ಕಾರವು ಘೋಷಿಸಿತ್ತು. ಆದರೆ, ಈವರೆಗೆ ಸಾಲಮನ್ನಾ ಬಾಬ್ತಿನ ಹಣ ಬಿಡುಗಡೆ ಮಾಡಿಲ್ಲ. ಚಿಕ್ಕಮಗಳೂರು ಜಿಲ್ಲೆಯಲ್ಲಿ ₹ 167 ಕೋಟಿ ಮನ್ನಾ ಮಾಡಿರುವುದಾಗಿ ಘೋಷಿಸಿ ಈವರೆಗೆ ಕೇವಲ ₹ 1 ಕೋಟಿ ಮಾತ್ರ ಬಿಡುಗಡೆ ಮಾಡಿದ್ದಾರೆ. 37 ಸಾವಿರ ಕುಟುಂಬಗಳ ಪೈಕಿ ಈವರೆಗೆ 381 ರೈತರ ಸಾಲ ಮನ್ನಾವಾಗಿದೆ’ ಎಂದು ಹೇಳಿದರು.

‘ಈ ಜಿಲ್ಲೆಯಲ್ಲಿ ಡಿವೈಎಸ್ಪಿ ಆಗಿದ್ದ ಕುರುಬ ಸಮುದಾಯದ ಕಲ್ಲಪ್ಪ ಹಂಡಿಬಾಗ್‌ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಕಾರಣ. ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ, ಮರಳು ಮಾಫಿಯಾಕ್ಕೆ ಕಡಿವಾಣಕ್ಕೆ ಮುಂದಾಗಿದ್ದ ಕಲ್ಲಪ್ಪ ಹಂಡಿಬಾಗ್‌ ಅವರನ್ನು ಬಲಿಪಶು ಮಾಡಲಾಯಿತು. ಇಲ್ಲಿ ಬೆಟ್ಟಿಂಗ್‌ ದಂಧೆ ನಡೆಸುವವರು ಯಾರು, ಯಾವ್ಯಾವ ಪಕ್ಷಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಅವರು ಕೇಸರಿ ಬಟ್ಟೆ ಧರಿಸಿ, ಜಾಗಟೆ ಬಾರಿಸಿಕೊಂಡು ದತ್ತಪೀಠಕ್ಕೆ ಹೋಗುತ್ತಾರೆ’ ಎಂದು ದೂರಿದರು.

‘ತಾನು ತಪ್ಪು ಮಾಡಿಲ್ಲ ಎಂದು ಕಲ್ಲಪ್ಪ ಹಂಡಿಬಾಗ್‌ ಅವರು ಪತ್ನಿ ಬಳಿ ಹೇಳಿಕೊಂಡಿದ್ದರು. ಹಂಡಿಬಾಗ್‌ ಅವರ ಮನೆಗೆ ಹೋಗಿದ್ದಾಗ ಅವರ ಪತ್ನಿ ಅದನ್ನು ನನಗೆ ಹೇಳಿದರು. ಆ ವಿಷಯವನ್ನು ನಾನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದೆ. ಈಗ ಅಲ್ಪಸಂಖ್ಯಾತ ಗುಂಪಿಗೆ ಲಿಂಗಾಯತರನ್ನು ಸೇರಿಸಿ ಆ ಸಮುದಾಯ ಉಳಿಸಲು ಸಿದ್ದರಾಮಯ್ಯ ಹೊರಟಿದ್ದಾರೆ. ಸಮಾಜ ಒಡೆಯಬೇಡಿ, ಒಂದುಗೂಡಿಸುವ ಕೆಲಸ ಮಾಡಿ’ ಎಂದು ಹೇಳಿದರು.

‘ದತ್ತಪೀಠಕ್ಕೆ ಹೋಗುವವರನ್ನು ಭಿಕ್ಷಕರು ಎಂದು ನಾನು ಹೇಳಿರಲಿಲ್ಲ, ಜೋಳಿಗೆ ಹಿಡಿದುಕೊಂಡು ಜನರನ್ನು ಮರಳು ಮಾಡಬೇಡಿ ಎಂದು ಮೂಡಿಗೆರೆಯಲ್ಲಿ ನಡೆದ ವಿಕಾಸ ಪರ್ವ ಜೆಡಿಎಸ್‌ ಸಮಾವೇಶದಲ್ಲಿ ಹೇಳಿದ್ದೆ. ನಿರುದ್ಯೋಗಿ ಯುವಕರು ಏಕೆ ಜೋಳಿಗೆ ಹಿಡಿದುಕೊಂಡು ಹೋಗುತ್ತೀರಾ ಎಂದು ಕೇಳಿದ್ದೆ. ಉದ್ಯೋಗವಿಲ್ಲದೇ ಪರದಾಡುತ್ತಿರುವ ಯುವಕರನ್ನು ಕೇಸರಿ ಹೆಸರಿನಲ್ಲಿ ಮುಂದಿಟ್ಟುಕೊಂಡು, ಹಿಂದೂ… ಹಿಂದೂ… ಎಂದು ಹೋಗುವುದು ಸರಿಯಲ್ಲ ಎಂದು ಹೇಳಿದ್ದೆ’ ಎಂದು ಹೇಳಿದರು.

ಈ ಕ್ಷೇತ್ರದ ಶಾಸಕರು ಹಿಂದೆ ಸಚಿವರೂ ಆಗಿದ್ದರು. ಕರಗಡ ಯೋಜನೆಯನ್ನು 10 ವರ್ಷಗಳಿಂದ ಮುಗಿಸಲು ಏಕೆ ಅವರಿಗೆ ಸಾಧ್ಯವಾಗಿಲ್ಲ ಎಂದು ಪರೋಕ್ಷವಾಗಿ ಸಿ.ಟಿ.ರವಿ ಅವರನ್ನು ಚುಚ್ಚಿದರು.

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಕರಗಡ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ಹೆಬ್ಬೆ ಜಲಪಾತದಿಂದ ಅಯ್ಯನಕೆರೆ ಮತ್ತು ಮದಗದ ಕೆರೆಗೆ ನೀರು ಹರಿಸುವುದು, ಈ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವುದು, ಒತ್ತುವರಿ ಸಮಸ್ಯೆ ಪರಿಹರಿಸುವುದು, ಕಾಫಿ ಬೆಳೆಗಾರರು ಮತ್ತು ರೈತರ ಸಮಸ್ಯೆಗಳನ್ನು ಪರಿಹರಿಸುತ್ತೇವೆ. ವೃದ್ಧಾಪ್ಯ, ಅಂಗವಿಕಲ ಮಾಸಾಶನಗಳ ಮೊತ್ತವನ್ನು ಹೆಚ್ಚಿಸುತ್ತೇವೆ. ಗರ್ಭಿಣಿಯರಿಗೆ 6 ತಿಂಗಳು ₹ 6ಸಾವಿರ ಹೆರಿಗೆ ಭತ್ಯೆ ನೀಡುತ್ತೇವೆ. ಹೊಸ ಕೃಷಿ ನೀತಿ ಅನುಷ್ಠಾನ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರು.

ಈ ಬಾರಿ ಈ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಬಿ.ಎಚ್‌.ಹರೀಶ್‌ ಅವರನ್ನು ಎಲ್ಲ ಜಾತಿ, ಧರ್ಮದ ಮತದಾರರು ಕೈಹಿಡಿಯಬೇಕು. ಈ ಬಾರಿ 113 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದ್ದು, 50 ಸ್ಥಾನ ಪಡೆದು ಕಾಂಗ್ರೆಸ್‌ ಅಥವಾ ಬಿಜೆಪಿ ಬಾಗಿಲು ತಟ್ಟುವಂತೆ ಮಾಡಬೇಡಿ. ಜಾತಿ ವ್ಯಾಮೋಹ, ಹಣದ ಆಮಿಷಗಳಿಗೆ ಕಿವಿಗೊಡಬೇಡಿ. ಈ ಬಾರಿ ಜೆಡಿಎಸ್‌ ಬೆಂಬಲಿಸಿ ಎಂದು ಮನವಿ ಮಾಡಿದರು.

 hd KUMARASWAMY

 

 

ಎಸ್‌.ಎಲ್‌.ಭೋಜೆಗೌಡ ಮತ್ತು ಎಸ್‌.ಎಲ್‌ಧರ್ಮೇಗೌಡ ತಂದೆ ಲಕ್ಷ್ಮಯ್ಯ ಅವರು ಎಚ್‌.ಡಿ.ದೇವೇಗೌಡ ಅವರಿಗೆ ನಿಷ್ಠೆಯಿಂದ ಇದ್ದರು. ಈ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಭೋಜೆಗೌಡ, ಧರ್ಮೇಗೌಡ ಅವರಿಗೆ ಕೇಳಿದ್ದೆ. ಆದರೆ, ಅವರು ಈ ಬಾರಿ ಲಿಂಗಾಯತ ಸಮುದಾಯ ಅಭ್ಯರ್ಥಿ ಆಯ್ಕೆ ಮಾಡಲು ಸಲಹೆ ನೀಡಿದರು. ಪಕ್ಷ ಅಧಿಕಾರಕ್ಕೆ ಬಂದರೆ ಅವರಿಬ್ಬರಿಗೂ ಉತ್ತಮ ಸ್ಥಾನ ನೀಡುತ್ತೇನೆ ಎಂದರು.

ಜೆಡಿಎಸ್‌ ಕ್ಷೇತ್ರ ಸಮಿತಿ ಅಧ್ಯಕ್ಷ ಭೈರೇಗೌಡ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ವೈ.ಎಸ್‌.ವಿ ದತ್ತ, ಬಿ.ಬಿ.ನಿಂಗಯ್ಯ ಜೆಡಿಎಸ್‌ ಮುಖಂಡರಾದ ಎಸ್‌.ಎಲ್‌.ಧರ್ಮೇಗೌಡ, ಭೋಜೆಗೌಡ, ರಂಜನ್‌ ಅಜಿತ್‌ಕುಮಾರ್‌, ಟಿ.ಎಚ್‌.ಶಿವಶಂಕರಪ್ಪ, ಎಚ್‌.ಜಿ.ವೆಂಕಟೇಶ್‌, ಕುಮಾರಸ್ವಾಮಿ, ಸಯ್ಯದ್‌ ಮುಜಿದ್‌ ಅಲ್ತಾಫ್‌, ಎಚ್‌.ಎಚ್‌.ದೇವರಾಜ್‌, ಪಟೇಲ್‌ ಶಿವರಾಂ ಇದ್ದರು.

By R

You missed