ದಾವಣಗೆರೆ: ನಗರದ ಕೆ.ಎಸ್.ಆರ್.ಟಿ.ಸಿ ಬಸ್ನಿಲ್ದಾಣವನ್ನು ಆಧುನೀ
ಕರಣಗೊಳಿಸಲು ‘ಮಾಸ್ಟರ್ ಪ್ಲ್ಯಾನ್’ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶೀಘ್ರದಲ್ಲೇ ಯೋಜನೆಯನ್ನು ಅಂತಿಮಗೊಳಿಸಿ ಕೆಲಸ ಆರಂಭಿಸಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ತಿಳಿಸಿದರು.
ನಗರದ ಕೆ.ಎಸ್.ಆರ್.ಟಿ.ಸಿ. ಬಸ್ನಿಲ್ದಾಣ ಹಾಗೂ ಡಿಪೊವನ್ನು ಭಾನುವಾರ ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಇದು ಹಳೆ ಬಸ್ನಿಲ್ದಾಣ. ಮಳೆಗಾಲದಲ್ಲಿ ಒಳಗೆ ನೀರು ನಿಲ್ಲುತ್ತಿದೆ ಎಂಬ ದೂರುಗಳು ಬಂದಿದ್ದವು. ‘ಸ್ಮಾರ್ಟ್ ಸಿಟಿ’ ಯೋಜನೆಗೆ ದಾವಣಗೆರೆ ಆಯ್ಕೆಯಾಗಿರುವುದರಿಂದ ಅದಕ್ಕೆ ತಕ್ಕಂತೆ ಬಸ್ನಿಲ್ದಾಣವನ್ನೂ ಆಧುನೀಕರಣಗೊಳಿಸಬೇಕಾಗಿದೆ. ಮಳೆಗಾಲದಲ್ಲಿ ನೀರು ರಾಜಕಾಲುವೆಗೆ ಯಾವ ರೀತಿ ಹರಿದು ಹೋಗಬೇಕು ಎಂಬ ಬಗ್ಗೆ ಸರ್ವೆ ನಡೆಸುವಂತೆ ಸೂಚಿಸಿದ್ದೇನೆ. ಆದಷ್ಟು ಬೇಗ ಆರ್ಕಿಟೆಕ್ಟ್ನಿಂದ ‘ಮಾಸ್ಟರ್ ಪ್ಲ್ಯಾನ್’ ಸಿದ್ಧಪಡಿಸಿ, ಅದಕ್ಕೆ ಅನುಮೋದನೆ ನೀಡಲಾಗುವುದು’ ಎಂದು ಭರವಸೆ ನೀಡಿದರು.
‘ಸ್ಮಾರ್ಟ್ ಸಿಟಿ ಯೋಜನೆಯಿಂದ ಎಷ್ಟು ಹಣ ಸಿಗಲಿದೆ; ಉಳಿದ ಎಷ್ಟು ಹಣವನ್ನು ನಾವು ಹಾಕಬೇಕಾಗುತ್ತದೆ ಎಂಬುದನ್ನು ಲೆಕ್ಕ ಹಾಕಿದ ಬಳಿಕ ಯೋಜನೆ ಅಂತಿಮಗೊಳಿಸುತ್ತೇವೆ’ ಎಂದರು.
‘ಬಸ್ ಖರೀದಿಯಲ್ಲಿ ಅವ್ಯವಹಾರ ನಡೆದಿರುವುದು ನನ್ನ ಗಮನಕ್ಕೆ ಬಂದಿಲ್ಲ. ನಾನು ಸಚಿವನಾಗಿ ಒಂದು ತಿಂಗಳಾಯಿತು. ಈ ಬಗ್ಗೆ ಪರಿಶೀಲಿಸುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪರವಾನಗಿ ರದ್ದು: ಕೆ.ಎಸ್.ಆರ್.ಟಿ.ಸಿ ಬಸ್ನಿಲ್ದಾಣದ ಎದುರಿನಲ್ಲೇ ಖಾಸಗಿ ಬಸ್ನವರು ಪ್ರಯಾಣಿಕರನ್ನು ಹತ್ತಿಸಿ
ಕೊಂಡು ಹೋಗುತ್ತಿದ್ದರೂ ನಿಗಮದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದನ್ನು ಸಚಿವರ ಗಮನಕ್ಕೆ ತಂದಾಗ, ‘ಇದನ್ನು ತಡೆಗಟ್ಟಲು ಬಸ್ನಿಲ್ದಾಣದ ಹೊರಗಡೆ ಹಾಗೂ ಒಳಗಡೆ ಸಿಸಿಟಿವಿ ಕ್ಯಾಮೆರಾ ಹಾಕುತ್ತೇವೆ. ನಿಯಮ ಉಲ್ಲಂಘಿಸಿ ರಸ್ತೆಯ ನಡುವೆ ಅನಧಿಕೃತವಾಗಿ ಪಯಾಣಿಕರನ್ನು ಹತ್ತಿಸಿಕೊಳ್ಳುವ ಖಾಸಗಿ ವಾಹನಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
ನಾಲ್ಕು ಖಾಸಗಿ ವಾಹನಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದಾಗ, ‘ಬರೀ ಪ್ರಕರಣ ದಾಖಲಿಸಿದರೆ ಸಾಲದು. ಆರ್.ಟಿ.ಒಗೆ ಹೇಳಿ ವಾಹನಗಳ ಪರವಾನಗಿಯನ್ನೇ ರದ್ದುಗೊಳಿಸಬೇಕು’ ಎಂದು ಸೂಚಿಸಿದರು.
ಹಳೆ ಬಸ್ನಿಲ್ದಾಣ: ಖಾಸಗಿ ಬಸ್ ನಿಲ್ದಾಣದ ಜಾಗ ಮಹಾನಗರ ಪಾಲಿಕೆಗೆ ಸೇರಿದೆ. ₹ 30 ಕೋಟಿ ವೆಚ್ಚದಲ್ಲಿ ಅದನ್ನೂ ಆಧುನೀಕರಣ ಮಾಡಲಾಗುವುದು ಎಂದು ಮೇಯರ್ ಮಾಹಿತಿ ನೀಡಿದ್ದಾರೆ. ಅದರ ಕಾಮಗಾರಿಯೂ ಶೀಘ್ರವೇ ಆರಂಭಗೊಳ್ಳಲಿದೆ’ ಎಂದರು.
ಬಳಿಕ ಸಚಿವರು ಡಿಪೊದಲ್ಲಿ ಸಿಬ್ಬಂದಿಯನ್ನು ಭೇಟಿ ಮಾಡಿ ಏನಾದರೂ ಸಮಸ್ಯೆ ಆಗುತ್ತಿದೆಯೇ ಎಂದು ವಿಚಾರಿಸಿಕೊಂಡರು. ಅಂತರ ನಿಗಮ ವರ್ಗಾವಣೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಕೆಲವರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ತಮ್ಮಣ್ಣ, ‘ನಿಮಗೆಲ್ಲ ಶಾಶ್ವತವಾಗಿ ಉಳಿದುಕೊಳ್ಳಲು ಮನೆ (ಕ್ವಾಟರ್ಸ್) ನಿರ್ಮಿಸಿಕೊಡಬೇಕು ಎಂಬ ಉದ್ದೇಶವಿದೆ’ ಎಂದು ಹೇಳಿದರು.
ಮೇಯರ್ ಶೋಭಾ ಪಲ್ಲಾಗಟ್ಟೆ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಜೆಡಿಎಸ್ ಮುಖಂಡರಾದ ಗಣೇಶ ದಾಸಕರಿಯಪ್ಪ, ಅರಸಿಕೆರೆ ಎನ್. ಕೊಟ್ರೇಶ್, ಎಚ್.ಸಿ. ಗುಡ್ಡಪ್ಪ, ವಿಭಾಗೀಯ ನಿಯಂತ್ರಣಾಧಿಕಾರಿ ಅಬ್ದುಲ್ ಖುದ್ದುಸ್, ಡಿಪೊ ವ್ಯವಸ್ಥಾಪಕ ಎಂ. ರಾಮಚಂದ್ರಪ್ಪ, ವಿಭಾಗೀಯ ಸಂಚಲನಾಧಿಕಾರಿ ಮಂಜುನಾಥ ಹಾಜರಿದ್ದರು