ಮಂಡ್ಯ/ನಾಗಮಂಗಲ: ಕ್ಷೇತ್ರದೆಲ್ಲೆಡೆ ಜೆಡಿಎಸ್ ಕಲರವ, ಜೆಸಿಬಿಗಳನ್ನು ಬಳಸಿ ಪುಷ್ಪವೃಷ್ಟಿ, ಕ್ರೇನ್​ನಿಂದ ಸೇಬಿನ ಮಾಲಾರ್ಪಣೆ, ಕಾಂಗ್ರೆಸ್ ವಿರುದ್ಧ ದೇವೇಗೌಡ, ಕುಮಾರಸ್ವಾಮಿ ಗುಡುಗು, ಹದ್ದಿನ ಕಣ್ಣಿಟ್ಟಿದ್ದ ಚುನಾವಣಾ ಆಯೋಗದ ತಂಡ..

ಇವು ನಾಗಮಂಗಲದಲ್ಲಿ ಶುಕ್ರವಾರ ಜರುಗಿದ ಕುಮಾರಪರ್ವ ಸಮಾವೇಶದ ಹೈಲೈಟ್ಸ್. ಕ್ಷೇತ್ರದ ಶಾಸಕ ಚೆಲುವರಾಯಸ್ವಾಮಿ ಜೆಡಿಎಸ್​ಗೆ ಗುಡ್​ಬೈ ಹೇಳಿ ಕಾಂಗ್ರೆಸ್​ನಿಂದ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಇದರ ಬೆನ್ನಲ್ಲೇ ಕುಮಾರ ಪರ್ವದ ಮೂಲಕ ಜೆಡಿಎಸ್ ಶಕ್ತಿ ಪ್ರದರ್ಶನ ನಡೆಸಿತು.

ಬೆಳ್ಳೂರು ಕ್ರಾಸ್​ನ ಮಯೂರ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಶಿವರಾಮೇಗೌಡರ ಕಾರಿನಲ್ಲಿ ಮಂಡ್ಯ ವೃತ್ತಕ್ಕೆ ಆಗಮಿಸಿ ಕುಮಾರಪರ್ವ ಯಾತ್ರೆ ಬಸ್ಸನ್ನೇರಿದರು. ಮಂಡ್ಯ ವೃತ್ತದಲ್ಲಿ ಪಕ್ಷದ ಮುಖಂಡರು ಕ್ರೇನ್ ಮೂಲಕ 250 ಕೆಜಿ ತೂಕದ ಸೇಬಿನ ಹಾರವನ್ನು ಕುಮಾರಸ್ವಾಮಿಗೆ ಹಾಕಿದರು.

ಅಲ್ಲಿಂದ ಬಸ್ ಡಿಪೋ ಪಕ್ಕದಲ್ಲಿ ನಿರ್ವಿುಸಿದ್ದ ವೇದಿಕೆವರೆಗೆ ಸಹಸ್ರಾರು ಜೆಡಿಎಸ್ ಕಾರ್ಯಕರ್ತರು ಬೈಕ್ ರ‍್ಯಾಲಿ ಮೂಲಕ ಕರೆದೊಯ್ದರು. ರಸ್ತೆಯ ಇಕ್ಕೆಲಗಳಲ್ಲಿ 25ಕ್ಕೂ ಹೆಚ್ಚು ಜೆಸಿಬಿಗಳಲ್ಲಿ ಕಾರ್ಯಕರ್ತರು ಕುಳಿತು ಪುಷ್ಪವೃಷ್ಟಿ ಮಾಡಿದರು.

ರಾಜ್ಯದ ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಕುಮಾರಪರ್ವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದಿನವಿಡೀ ಪಟ್ಟಣ ಜನಸಾಗರದಿಂದ ತುಂಬಿ ತುಳುಕಿತು. ಶ್ರೀರಂಗಪಟ್ಟಣ ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಕಾಸ ವಾಹಿನಿ

ಬಸ್ ಬಂದಿದ್ದರಿಂದ ಅರ್ಧ ಗಂಟೆಗೂ ಕಾಲ ರಸ್ತೆ ಸಂಚಾರ ಬಂದ್ ಆಗಿತ್ತು. ಸಂಸದ ಪುಟ್ಟರಾಜು, ಸುರೇಶ್​ಗೌಡ, ಶಿವರಾಮೇಗೌಡ, ಲಕ್ಷ್ಮೀ ಅಶ್ವಿನ್​ಗೌಡ ಸೇರಿ ಅನೇಕ ಮುಖಂಡರು ವೇದಿಕೆಯಲ್ಲಿದ್ದರು.

ಜೆಡಿಎಸ್​ಗೆ ಸೇರ್ಪಡೆ

ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಕೃಷ್ಣಪ್ಪ (ಕೆಕೆ), ಪುರಸಭೆ ಸದಸ್ಯ ನೂರ್​ಅಹ್ಮದ್ ಸೇರಿ ಹಲವರು ತಮ್ಮ ಬೆಂಬಲಿಗರ ಜತೆ ಜೆಡಿಎಸ್​ಗೆ ಸೇರ್ಪಡೆಯಾದರು. ಪಕ್ಷದ ವರಿಷ್ಠರಾದ ದೇವೇಗೌಡ ಹಾಗೂ ಕುಮಾರಸ್ವಾಮಿ ಪಕ್ಷಕ್ಕೆ ಅವರನ್ನು ಬರಮಾಡಿಕೊಂಡರು.