ಮಂಡ್ಯ: ನಾಗಮಂಗಲ ಪಟ್ಟಣದಲ್ಲಿ ‘ ಕುಮಾರಪರ್ವ’ ಸಮಾವೇಶದಲ್ಲಿ 50 ಸಾವಿರಕ್ಕೂ ಹೆಚ್ಚು ಜೆಡಿಎಸ್​ ಕಾರ್ಯಕರ್ತರ ಪಾಲ್ಗೊಂಡು ಶಕ್ತಿ ಪ್ರದರ್ಶನ ನೀಡಿದರು.

ಬಂಡಾಯ ಶಾಸಕ ಎನ್​.ಚೆಲುವರಾಯಸ್ವಾಮಿ ಪ್ರತಿನಿಧಿಸುವ ಕ್ಷೇತ್ರವಾಗಿರುವ ನಾಗಮಂಗಲದಲ್ಲಿ ಮಾಜಿ ಶಾಸಕ ಸುರೇಶ್​ಗೌಡರ ಪರ ಎಚ್​.ಡಿ. ಕುಮಾರಸ್ವಾಮಿ ರೋಡ್​ ಶೋ ನಡೆಸಿದರು. ಮಂಡ್ಯ ವೃತ್ತದಿಂದ ಸಮಾವೇಶದ ವೇದಿಕೆವರೆಗೆ 2 ಸಾವಿರಕ್ಕೂ ಹೆಚ್ಚು ಬೈಕ್​, ನೂರಾರು ಕಾರುಗಳು, 80 ಜೆಸಿಬಿಗಳು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದವು.

ರ‍್ಯಾಲಿ ಬಳಿಕ ಮಾತನಾಡಿದ ಜೆಎಡಿಎಸ್​ ಅಭ್ಯರ್ಥಿ ಸುರೇಶ್​ ಗೌಡ, ನಾನು ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಉಳಿಸಿಕೊಂಡಿದ್ದೇನೆ. ನೀತಿ ಸಂಹಿತೆಯಿಂದಾಗಿ ಊಟದ ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ. ಈ ಬಾರಿ ನನ್ನ ಉಳಿಸಿ, ಗೆಲ್ಲಿಸಿ. ನಾನೆಂದೂ ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ ಎಂದು ಹೇಳಿದರು.

ಜಮೀರ್​ನನ್ನು ಮೀರ್​ ಸಾಧಿಕ್​ಗೆ, ಚಲುವರಾಯಸ್ವಾಮಿಯನ್ನು ಮಲ್ಲಪ್ಪ ಶೆಟ್ಟಿಗೆ ಪರೋಕ್ಷವಾಗಿ ಹೋಲಿಸಿದ ಸುರೇಶ್​ ಗೌಡ, ಬೆಂಗಳೂರಿನಲ್ಲಿ ಮೀರ್​ ಸಾಧಿಕ್​, ನಾಗಮಂಗಲದಲ್ಲಿ ಮಲ್ಲಪ್ಪ ಶೆಟ್ಟಿ ಪಾಂಡವ, ಕೌರವರ ಯುದ್ಧ ಶುರುವಾಗಿದೆ. ನಾವು ಪಾಂಡವರು. ನಮ್ಮಲ್ಲಿ ಹಣವಿಲ್ಲ. ಆದರೆ ಶ್ರೀಕೃಷ್ಣನಂತೆ ದೇವೇಗೌಡರು ಇದ್ದಾರೆ. ಗೆಲುವು ನಮ್ಮದೇ ಎಂದರು.

ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಹೋಗಬೇಡಿ ಎಂದು ರಾತ್ರಿ 2 ಗಂಟೆವರೆಗೆ ಹಣ ಹಂಚಿದ್ದಾರೆ. ಆದರೆ ನೀವು ಅವರಿಗೆ ತಕ್ಕ ಉತ್ತರ ನೀಡಿದ್ದೀರಿ ಎಂದು ಹೇಳಿದರು.