ಪಕ್ಷದ ಸದಸ್ಯತ್ವ ನೋಂದಣಿಗೆ ಚಾಲನೆ ನೀಡಲು ಇಲ್ಲಿನ ಅರಮನೆ ಮೈದಾನದಲ್ಲಿ ಜೆಡಿಎಸ್‌ ಶನಿವಾರ(24.01.2015) ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಪಕ್ಷದ ಪ್ರಮುಖರು, ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಪಕ್ಷದ ಕಚೇರಿ ಕಾಂಗ್ರೆಸ್‌ ಪಾಲಾಗಿದ್ದರ ಬಗ್ಗೆ ಪ್ರಸ್ತಾಪಿಸಿದರು. ಇದರ ಜೊತೆಗೇ, ಪ್ರತಿ ಬೂತ್‌ನಲ್ಲಿ ಪಕ್ಷಕ್ಕೆ 25ರಿಂದ 30 ಜನರನ್ನು ಸದಸ್ಯರನ್ನಾಗಿ ನೋಂದಾಯಿಸುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಿದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಮಾತನಾಡಿ, ‘ಪಕ್ಷದ ಕಚೇರಿಯ ಬಗ್ಗೆ ನನಗೆ ವ್ಯಾಮೋಹ ಇಲ್ಲ. ಆದರೆ ನಾನು ಕಾಲವಾದ ನಂತರವೂ ಈ ಪಕ್ಷ ಉಳಿಯಬೇಕು ಎಂಬ ಆಸೆ ನನಗಿದೆ’ ಎಂದರು.

‘ಪಕ್ಷದ ಕಚೇರಿ ಇನ್ನೂ ತೊರೆಯದ ದೇವೇಗೌಡರಿಗೆ ಮರ್ಯಾದೆ ಇಲ್ಲ ಎಂಬ ಮಾತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಯಿಂದ ಬರಬಾರದಾಗಿತ್ತು. ಸಿದ್ದರಾಮಯ್ಯ ರಾಜಕೀಯಕ್ಕೆ ಬಂದಿದ್ದು ಎಲ್ಲಿಂದ? ಕುರುಬ ಸಮುದಾಯದ ಮುಖಂಡರೊಬ್ಬರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದು ನಾನು. ಈಗ ಅವರೆಲ್ಲಿದ್ದಾರೆ? ನನ್ನ ತಾಳ್ಮೆಗೆ, ನೋವು ಸಹಿಸುವ ಗುಣಕ್ಕೆ ಒಂದು ಮಿತಿ ಇದೆ’ ಎಂದು ಗುಡುಗಿದರು.