ರಾಮನಗರ: ವಿಧಾನ‌ ಪರಿಷತ್ ಸದಸ್ಯ ಸಯ್ಯದ್ ಮುದೀರ್ ಆಗಾ (67) ಹೃದಯಾಘಾತದಿಂದ ಶನಿವಾರ ಮುಂಜಾನೆ 1.30ರ ಸುಮಾರಿಗೆ ಬೆಂಗಳೂರಿನಲ್ಲಿ‌ ನಿಧನರಾದರು.

ಬೆಂಗಳೂರಿನ ನಿವಾಸದಲ್ಲಿ ಶುಕ್ರವಾರ ‌ರಾತ್ರಿ ಅವರಿಗೆ ಹೃದಯಾಘಾತವಾಗಿದ್ದು, ಚಿಕಿತ್ಸೆಗಾಗಿ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ರಾಮನಗರದವರಾದ ಆಗಾ 2012ರ‌ ಜೂನ್ ನಲ್ಲಿ ಜೆಡಿಎಸ್‌ನಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಈ ತಿಂಗಳ 17ಕ್ಕೆ ಅವರ ಅಧಿಕಾರಾವಧಿ ಮುಗಿಯುವುದಿತ್ತು.

ಆಗಾ ಕುಟುಂಬದವರು ರಾಮನಗರದ ಪ್ರಮುಖ ವರ್ತಕರಲ್ಲಿ ಒಬ್ಬರಾಗಿದ್ದು, ರೇಷ್ಮೆಗೂಡು ಮಾರಾಟ, ಮಾವು ಮಾರಾಟದ ಜತೆಗೆ ರಿಯಲ್ ಎಸ್ಟೇಟ್ ಉದ್ದಿಮೆಯಲ್ಲಿ ತೊಡಗಿಸಿಕೊಂಡಿದ್ದರು.‌

ಅವರಿಗೆ ಪತ್ನಿ, ಪುತ್ರ, ಮೂವರು ಪುತ್ರಿಯರು ಇದ್ದಾರೆ.‌ ಅಂತ್ಯಕ್ರಿಯೆಯು ರಾಮನಗರದಲ್ಲಿ ಸಂಜೆ ನಡೆಯಲಿದೆ.

ದೇವರು ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ.