ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪಕ್ಷದ ಅಭ್ಯರ್ಥಿಗೆ ಮತಚಲಾಯಿಸುವಂತೆ ಕಾಂಗ್ರೆಸ್‌ ಪಕ್ಷದ ಜತೆ ಗುರುತಿಸಿಕೊಂಡಿರುವ ಜಮೀರ್‌ ಅಹ್ಮದ್‌ ಸೇರಿ 7 ಜನ ಜೆಡಿಎಸ್‌ ಬಂಡಾಯ ಶಾಸಕರಿಗೆ ವಿಪ್‌ ಜಾರಿಗೊಳಿಸಲಾಗುತ್ತದೆ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೆಗೌಡ ತಿಳಿಸಿದ್ದಾರೆ. ಪ್ರಸ್‌ ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಳು ಮಂದಿ ಬಂಡಾಯ ಶಾಸಕರನ್ನು ಪಕ್ಷದಿಂದ ಈವರೆಗೆ ಉಚ್ಚಾಟನೆ ಮಾಡಿಲ್ಲ. ಜತೆಗೆ ಅವರು ಸಹ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ. ಹಾಗಾಗಿ ಪಕ್ಷ ಜಾರಿಗೊಳಿಸುವ ವಿಪ್‌ ಅವರಿಗೂ ಅನ್ವಯವಾಗಲಿದ್ದು, ಅದನ್ನು ಪಾಲಿಸಬೇಕಾಗುತ್ತದೆ ಎಂದು ಹೇಳಿದರು. ರಾಜ್ಯಸಭಾ ಚುನಾವಣೆಗೆ ನಮ್ಮ ಪಕ್ಷದಿಂದ ಬಿ.ಎಂ.ಫಾರೂಕ್‌ ನಾಮಪತ್ರ ಸಲ್ಲಿಸಿದ್ದಾರೆ. ನಮ್ಮ ಅಭ್ಯರ್ಥಿ ಗೆಲ್ಲಲು ಅಗತ್ಯವಾದ ಮತಗಳ ಕೊರತೆಯಿದ್ದು, ಪಕ್ಷೇತರ ಶಾಸಕರ ಬೆಂಬಲವನ್ನೂ ಕೋರಲಾಗುವುದು. ಉಳಿದಂತೆ ಯಾವುದೇ ರಾಷ್ಟ್ರೀಯ ಪಕ್ಷದೊಂದಿಗೆ ಮಾತುಕತೆ ನಡೆಸಿಲ್ಲ ಎಂದರು.