ಬೆಂಗಳೂರು: ಬಜೆಟ್‌ನಲ್ಲಿ ಘೋಷಿಸಿದ್ದ ‘ಬಡವರ ಬಂಧು’ ಯೋಜನೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಯಶವಂತಪುರದ ಎಪಿಎಂಸಿಯಲ್ಲಿ ಗುರುವಾರ ಚಾಲನೆ ನೀಡಿದರು.

ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕುಗಳು, ಮಹಿಳಾ ಸಹಕಾರಿ ಬ್ಯಾಂಕುಗಳು, ಪಟ್ಟಣ ಸಹಕಾರ ಬ್ಯಾಂಕುಗಳ ಮೂಲಕ ಅರ್ಹ ಫಲಾನುಭವಿಗಳಿಗೆ ₹ 2 ಸಾವಿರದಿಂದ ₹ 10 ಸಾವಿರವನ್ನು ಮೂರು ತಿಂಗಳ ಅವಧಿಗೆ ಶೂನ್ಯ ಬಡ್ಡಿ ದರದಲ್ಲಿ ಈ ಯೋಜನೆಯಡಿ ಸಾಲ ವಿತರಿಸಲಾಗುತ್ತದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಯೋಜನೆಯಡಿ 53 ಸಾವಿರ ಬೀದಿಬದಿ ವ್ಯಾಪಾರಿಗಳಿಗೆ ಕಿರುಸಾಲ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ), 10 ಮಹಾನಗರ ಪಾಲಿಕೆ ಮತ್ತು ಉಳಿದೆಲ್ಲಾ ಜಿಲ್ಲಾ ಕೇಂದ್ರಗಳಲ್ಲಿನ ಸಣ್ಣ ವ್ಯಾಪಾರಿಗಳು ಈ ಯೋಜನೆಯ ಫಲಾನುಭವಿಗಳಾಗಲು ಅರ್ಹರು.

ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷರ ಅಧ್ಯಕ್ಷತೆಯ, ಸಹಕಾರ ಸಂಘಗಳ ಉಪ ನಿಬಂಧಕರನ್ನೂ ಒಳಗೊಂಡ ಜಿಲ್ಲಾಮಟ್ಟ ಸಮಿತಿ, ಸಾಲ ನೀಡಬೇಕಾದ ಬ್ಯಾಂಕು ಮತ್ತು ಫಲಾನುಭವಿಗಳನ್ನು ಗುರುತಿಸಲಿದೆ.

ನಿಗದಿಪಡಿಸಿದ ಬ್ಯಾಂಕುಗಳು ಫಲಾನುಭವಿಗಳ ಶೂನ್ಯ ಬಾಲೆನ್ಸ್‌ ಉಳಿತಾಯ ಖಾತೆ ತೆರೆದು, ಸಾಲ ಅರ್ಜಿಗಳನ್ನು ಸ್ವೀಕರಿಸಿ, ನಿಗದಿಪಡಿಸಿದ ಗುರಿಗೆ ಅನುಗುಣವಾಗಿ ಸಾಲ ವಿತರಿಸಲಿವೆ.

ಸಮರ್ಪಕವಾಗಿ ಸಾಲ ಮರುಪಾವತಿಸಿದರೆ ಸಾಲ ನವೀಕರಿಸಲು ಮತ್ತು ಶೇ 10ರಷ್ಟು ಮಿತಿ ಹೆಚ್ಚಿಸಲು (₹ 15ಸಾವಿರದವರೆಗೆ) ಅವಕಾಶ ನೀಡಲಾಗಿದೆ.

ವ್ಯವಹಾರ ಪ್ರತಿನಿಧಿಗಳನ್ನು ನೇಮಿಸುವ ಮೂಲಕ ಪಿಗ್ಮಿ ಮತ್ತು ಸಾಲದ ಮೊತ್ತ ಸಂಗ್ರಹಿಸಲು ಬ್ಯಾಂಕ್ ವ್ಯವಸ್ಥೆ ಮಾಡಿಕೊಳ್ಳಬಹುದು. ಪ್ರತಿ ತ್ರೈಮಾಸಿಕ ಹೊರಬಾಕಿ ಆಧರಿಸಿ, ಬಡ್ಡಿ ಸಹಾಯಧನವನ್ನು ಕ್ಲೇಮ್‌ ಮಾಡಿದರೆ, ಆ ಮೊತ್ತವನ್ನು ಬ್ಯಾಂಕುಗಳಿಗೆ ಸರ್ಕಾರ ಭರಿಸಲಿದೆ.
*
ಮೈಮೇಲೆ ಕೆ.ಜಿ.ಗಟ್ಟಲೇ ಬಂಗಾರ ಹೇರಿಕೊಂಡು ಲೇವಾದೇವಿ ಮಾಡುತ್ತ ಬಡವರ ಬೆವರಿನ ಆದಾಯ ಹೀರುವ ಗೂಂಡಾ-ಪುಡಾರಿಗಳ ಅಕ್ರಮಕ್ಕೆ ಈ ಯೋಜನೆಯಿಂದ ಕಡಿವಾಣ ಬೀಳಲಿದೆ.
– ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

**
ಈ ಯೋಜನೆ ಯಾರಿಗೆ ಅನ್ವಯ?

* ತಳ್ಳುಬಂಡಿ, ಮೋಟಾರು ವಾಹನಗಳಲ್ಲಿ ಪಾನೀಯ, ತಿಂಡಿ, ಊಟ ವಿತರಿಸುವವರು

* ಮನೆಮನೆಗಳಿಗೆ ತರಕಾರಿ, ಹೂ, ಹಣ್ಣು, ಕಾಯಿ ಮಾರುವವರು. ಬುಟ್ಟಿ ವ್ಯಾಪಾರಿಗಳು

* ಪಾದರಕ್ಷೆ, ಚರ್ಮ ಉತ್ಪನ್ನಗಳ ರಿಪೇರಿ, ಮಾರಾಟ ಮಾಡುವವರು

* ಆಟದ ಸಾಮಾನು ಗೃಹೋಪಯೋಗಿ ವಸ್ತು ಮಾರುವವರು

ಯಾರಿಗೆ ಅನ್ವಯಿಸುವುದಿಲ್ಲ?

* ರಸ್ತೆ ಬದಿ ಸ್ವಚ್ಛತೆ ಹಾಳು ಮಾಡುವವರಿಗೆ, ಪರಿಸರ ಹಾನಿ ವಸ್ತುಗಳ ಮಾರಾಟಗಾರರಿಗೆ.

By R

You missed