ಶಿಕಾರಿಪುರ: ರಾಜ್ಯದಲ್ಲಿ ಬಿಜೆಪಿ ಶಕ್ತಿ ಕುಂದಿಸುವ ಸಾಮರ್ಥ್ಯ ಜೆಡಿಎಸ್​ಗೆ ಇದೆಯೇ ಹೊರೆತು ಕಾಂಗ್ರೆಸ್​ಗಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದ ಸಂತೆ ಮೈದಾನದಲ್ಲಿ ಗುರುವಾರ ಕುಮಾರ ಪರ್ವ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್​ಗೆ ಕರಾವಳಿಯಲ್ಲಿ ಬಿಜೆಪಿಯನ್ನು ಮಣಿಸಲು ಆಗುತ್ತಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ನಾಣ್ಯದ ಎರಡು ಮುಖಗಳಿದ್ದಂತೆ. ಹಾಗಾಗಿ ಬಿಜೆಪಿಗೆ ಮತ್ತೊಮ್ಮೆ ಅವಕಾಶ ಕೊಡಬೇಡಿ. ಇನ್ನು ಕಾಂಗ್ರೆಸ್​ಗೆ ಅಧಿಕಾರಕ್ಕೆ ಬರುವ ಶಕ್ತಿಯೇ ಇಲ್ಲ ಕುಟುಕಿದರು.

ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಪರಸ್ಪರ ಟೀಕೆಯಲ್ಲಿ ಮುಳಗುತ್ತಿದ್ದಾರೆ. ಪರಸ್ಪರ ಟೀಕೆಗಳಿಂದ ಜನರ ಸಮಸ್ಯೆ ಪರಿಹಾರ ಆಗುವುದಿಲ್ಲ. ರಾಜ್ಯದಲ್ಲಿ 58 ಸಾವಿರ ಕೋಟಿ ರೂ. ಮೌಲ್ಯದ ಬೆಳೆ ನಷ್ಟವಾಗಿದೆ. ಆ ಬಗ್ಗೆ ರಾಷ್ಟ್ರೀಯ ಪಕ್ಷಗಳ ಯಾವೊಬ್ಬ ಮುಖಂಡರೂ ಪ್ರಸ್ತಾಪ ಮಾಡುತ್ತಿಲ್ಲ ಎಂದು ಕಿಡಿಕಾರಿದರು.

ರೈತರು ಸಹಕಾರ ಸಂಘ ಹಾಗೂ ಬ್ಯಾಂಕ್​ಗಳಲ್ಲಿ 51 ಸಾವಿರ ಕೋಟಿ ರೂ. ಸಾಲ ಮಾಡಿದ್ದಾರೆ. ರಾಜ್ಯ ಸರ್ಕಾರ ಚುನಾವಣೆ ಮುಂದಿರುವಾಗ ಜನರೆದುರು ಬರುವ ಉದ್ದೇಶದಿಂದ 8,160 ರೂ. ಸಾಲ ಮನ್ನಾ ಮಾಡಿದೆ. ಆದರೆ ಅದರಲ್ಲಿ 2,000 ಕೋಟಿ ರೂ. ಮಾತ್ರ ಹಣ ಬಿಡುಗಡೆ ಮಾಡಿದೆ ಎಂದರು.

ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ 51 ಸಾವಿರ ಕೋಟಿ ರೂ. ಹಾಗೂ ಸ್ವಸಹಾಯ ಸಂಘಗಳ 4,300 ಕೋಟಿ ರೂ. ಸಾಲ ಮನ್ನಾ ಮಾಡುತ್ತೇನೆ. ರೈತರ ಹಿತ ಕಾಯಲು ಸಮಗ್ರ ರೈತ ಯೋಜನೆ ಜಾರಿಗೆ ತರುತ್ತೇನೆ. ಅಂಗವಿಕಲರು, ವಿಧವೆಯರ ಮಾಸಿಕ ಹಣ ಹೆಚ್ಚಳ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಸಿದ್ದರಾಮಯ್ಯ ಜೆಡಿಎಸ್​ನಲ್ಲಿರುವವರೆಗೂ ನಾನು ಕೊನೆ ಬೆಂಚ್​ನಲ್ಲಿದ್ದೆ. ಅವರು ಅಧಿಕಾರದ ಆಸೆಗೆ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದರು. ಆದರೆ ಇದೀಗ ದೇವೇಗೌಡರು ತಮ್ಮ ಮಗನನ್ನು ಸಿಎಂ ಮಾಡಲು ನನ್ನನ್ನು ಜೆಡಿಎಸ್​ನಿಂದ ಹೊರಹಾಕಿದರು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ಶಾಸಕಿ ಶಾರದಾ ಪೂರ್ಯಾನಾಯ್್ಕ ಮಾತನಾಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್, ಜಿಲ್ಲಾಧ್ಯಕ್ಷ ಎಚ್.ಎನ್.ನಿರಂಜನ್, ತೀರ್ಥಹಳ್ಳಿ ಕ್ಷೇತ್ರದ ಅಭ್ಯರ್ಥಿ ಎಂ.ಆರ್.ಮಂಜುನಾಥಗೌಡ, ಶಿವಮೊಗ್ಗ ಮೇಯರ್ ನಾಗರಾಜ್ ಕಂಕಾರಿ, ಮಹಿಳಾ ಜಿಲ್ಲಾಧ್ಯಕ್ಷೆ ಸಬೀನಾ ಕೌಸರ್, ಮುಖಂಡರಾದ ಯೂಸಫ್, ಮಂಜುನಾಥ್, ನಾಗರಾಜ ಗೌಡ, ಡಾ. ಶಾಂತಾ ಸುರೇಂದ್ರ, ನೂರ್ ಅಹ್ಮದ್, ಮಕ್ಬುಲ್ ಖಾನ್, ಮೌನೇಶ್, ಗೀತಾ ಸತೀಶ್, ಪಾಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.

By R

You missed