ಬೆಂಗಳೂರು: ವ್ಯಾಪಾರ ಮತ್ತು ಇತರ ಕಾರಣಗಳಿಗಾಗಿ ಮೀಟರ್​ ಬಡ್ಡಿಗೆ ಹಣ ಪಡೆದು ಸಂಕಷ್ಟಕ್ಕೆ ಸಿಲುಕಿರುವ ವ್ಯಾಪಾರಿಗಳಿಗೆ ಸರ್ಕಾರದಿಂದ “ಬಂಡವರ ಬಂಧು” ಎಂಬ ಆರ್ಥಿಕ ನೆರವು ನೀಡುವ ಯೋಜನೆ ಜಾರಿಗೆ ತರಲಾಗುತ್ತಿದ್ದು, ಈ ಬಗ್ಗೆ ಜಾಗೃತಿ ಮೂಡಿಸಲು ಸ್ವತಃ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಇಂದು ಯಶವಂತಪುರ ಮಾರುಕಟ್ಟೆಗೆ ಭೇಟಿ ನೀಡಿದ್ದರು. ಇನ್ನೊಂದೆಡೆ ವ್ಯಾಪಾರಿಗಳೊಂದಿಗೆ ಸಿಎಂ ವಿಡಿಯೋ ಕಾನ್ಫರೆನ್ಸ್​ ನಡೆಸಿ ಸಮಸ್ಯೆ ಆಲಿಸಿದರು.

ವ್ಯಾಪಾರ ವ್ಯವಹಾರಗಳಿಗಾಗಿ ಬೀದಿ ಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು ಹೆಚ್ಚಿನ ಬಡ್ಡಿಗೆ ಕೈಸಾಲ ಮಾಡುವ ಪರಿಪಾಠವಿದೆ. ಇದನ್ನು ಹೋಗಲಾಡಿಸಲು “ಬಂಡವರು ಬಂಧು” ಎಂಬ ಆರ್ಥಿಕ ನೆರವು ಕಲ್ಪಿಸುವ ಕಾರ್ಯಕ್ರಮವನ್ನು ಸರ್ಕಾರ ಬಜೆಟ್​ನಲ್ಲಿ ಘೋಷಿಸಿದೆ. ವ್ಯಾಪಾರಿಗಳಿಗೆ ಸೀಮಿತ ಪ್ರಮಾಣದಲ್ಲಿ ಸಾಲ ನೀಡುವ ಸರ್ಕಾರ ಅದನ್ನು ದಿನದ ಅಂತ್ಯದಲ್ಲಿ ಸೇವಾ ಶುಲ್ಕದೊಂದಿಗೆ ಹಿಂಪಡೆಯುತ್ತದೆ. ಇದರ ಬಗ್ಗೆ ಜಾಗೃತಿ ಮೂಡಿಸಲು ಒಂದೆಡೆ ಸಚಿವ ಬಂಡೆಪ್ಪ ಕಾಶೆಂಪುರ್​ ಅವರು ನೇರವಾಗಿ ವ್ಯಾಪಾರಿಗಳ ಬಳಿಗೆ ತೆರಳಿದರೆ, ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ವಿಡಿಯೋ ಕಾನ್ಫರೆನ್ಸ್​ ನಡೆಸಿದರು.

ಈ ವೇಳೆ ಹಲವು ವ್ಯಾಪಾರಿಗಳು ಸಚಿವರು ಮತ್ತು ಮುಖ್ಯಮಂತ್ರಿಗಳೊಂದಿಗೆ ಸಮಸ್ಯೆ ಹೇಳಿಕೊಂಡಿದ್ದಾರೆ. ಲಲಿತಮ್ಮ ಎಂಬವರು ಸಿಎಂ ಎಚ್ಡಿಕೆ ಜತೆ ಮಾತನಾಡಿ, 10 ಸಾವಿರ ರೂಪಾಯಿಗಳ ಸಹಾಯ ಅಗತ್ಯವಿದೆ ಎಂದು ಕೋರಿದರು. ಬಡ್ಡಿ ರಹಿತ ಸಾಲ ನೀಡುವುದಾಗಿ ಸಿಎಂ ತಿಳಿಸಿದರು. ನಂತರ ಪಟಾಲಮ್ಮ ಎಂಬವರೂ ತಮ್ಮ ಕಷ್ಟ ನೆನೆದು ಕಣ್ಣೀರಿಟ್ಟರು. ಲಕ್ಷ್ಮಮ್ಮ ಎಂಬವರು ಸಮಸ್ಯೆ ತೋಡಿಕೊಂಡರು.
ಎಲ್ಲರಿಗೂ ಆರ್ಥಿಕ ನೆರವಿನ ಭರವಸೆ ನೀಡಿದ ಮುಖ್ಯಮಂತ್ರಿ, “ಬಡ ವ್ಯಾಪಾರಿಗಳಿಗೆ ಸರ್ಕಾರ ಬಡ್ಡಿ ರಹಿತ ಸಾಲ ನೀಡುತ್ತದೆ. ಕೊಟ್ಟ ಸಾಲವನ್ನು ಸರಿಯಾಗಿ ಪಾವತಿ ಮಾಡಿ. ಪ್ರಾಮಾಣಿಕತೆಯಿಂದ ನಡೆದುಕೊಳ್ಳಿ. ಎಲ್ಲರೂ ಪ್ರಾಮಾಣಿಕವಾಗಿದ್ದರೆ ರಾಜ್ಯಾದ್ಯಂತ ಎಲ್ಲ ವ್ಯಾಪಾರಿಗಳ ಕಷ್ಟ ನೀಗುತ್ತದೆ. ವ್ಯಾಪಾರಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು,” ಎಂದು ತಿಳಿಸಿದರು.

ರೈತರು, ಕೃಷಿ ಕಾರ್ಮಿಕರು ಮತ್ತು ಆರ್ಥಿಕವಾಗಿ ದರ್ಬಲರಾಗಿರುವವರ ಖಾಸಗಿ ಸಾಲಮನ್ನಾ ಮಾಡುವ ಕರ್ನಾಟಕ ಋಣ ಮುಕ್ತ ಕಾಯ್ದೆಗೆ ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ ಸಂಪುಟ ಅನುಮೋದನೆ ನೀಡಿದೆ. ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲಾಗುತ್ತಿದ್ದು, ಸಿಎಂ ಎಚ್ಡಿಕೆ ರಾಷ್ಟ್ರಪತಿಯವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

By R

You missed