‘ರೈತರಿಗೆ ನೋಟಿಸ್‌ ಕೊಟ್ಟರೆ ತಕ್ಕ ಶಾಸ್ತಿ’

ಬೆಂಗಳೂರು: ಸಾಲ ಪಡೆದ ರೈತರಿಗೆ ನೋಟಿಸ್‌ ಕೊಟ್ಟು ಹೆದರಿಸಿದರೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಬ್ಯಾಂಕ್‌ ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಖಡಕ್‌ ಎಚ್ಚರಿಕೆ ನೀಡಿದರು.

ಸಾಲ ಮನ್ನಾ ಕುರಿತು ಮಂಗಳವಾರ ವಿಧಾನಸೌಧದಲ್ಲಿ ನಡೆದ ಬ್ಯಾಂಕರ್‌ಗಳ ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲಕ್ಷ್ಮೇಶ್ವರದಲ್ಲಿ ರೈತರೊಬ್ಬರಿಗೆ ವಕೀಲರ ಮೂಲಕ ನೋಟಿಸ್‌ ನೀಡಿ ಹೆದರಿಸಿದ ಕಾರಣಕ್ಕೆ ಬ್ಯಾಂಕ್‌ ಅಧಿಕಾರಿ ವಿರುದ್ಧ ದೂರು ಬರೆಸಿಕೊಂಡು ಎಫ್‌ಐಆರ್‌ ದಾಖಲಿಸಲು ಸೂಚಿಸಿದ್ದೇನೆ’ ಎಂದು ಹೇಳಿದರು.

‘ಬ್ಯಾಂಕ್‌ ಅಧಿಕಾರಿಗಳು ರೈತರ ಜೊತೆ ಚೆಲ್ಲಾಟ ಆಡುವುದನ್ನು ನಿಲ್ಲಿಸಬೇಕು. ಸಾಲ ಮನ್ನಾ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದಕ್ಕೆ ಹಣವನ್ನೂ ನಿಗದಿ ಮಾಡಿ ಆದೇಶವನ್ನೂ ಹೊರಡಿಸಲಾಗಿದೆ. ಹೀಗಿರುವಾಗ ರೈತರಿಗೆ ಯಾವ ಕಾರಣಕ್ಕೆ ತೊಂದರೆ ಕೊಡುತ್ತೀರಿ’ ಎಂದು ಪ್ರಶ್ನಿಸಿದರು.

‘ಸಾಲ ಮನ್ನಾ ಪ್ರಕಟವಾದ ಮೇಲೂ ಮೇಲಿಂದ ಮೇಲೆ ನೋಟಿಸ್‌ ನೀಡಿ ಹೆದರಿಸುತ್ತಿರುವ ಪ್ರಕರಣಗಳು ನನ್ನ ಗಮನಕ್ಕೆ ಬರುತ್ತಿವೆ. ಇದನ್ನು ಸರ್ಕಾರ ಸಹಿಸುವುದಿಲ್ಲ. ರಾಷ್ಟ್ರೀಕೃತ ಅಥವಾ ಸಹಕಾರಿ ಬ್ಯಾಂಕ್‌ಗಳು ರೈತರಿಗೆ ನೋಟಿಸ್‌ ನೀಡಿದರೆ ಸುಮ್ಮನಿರು
ವುದಿಲ್ಲ’ ಎಂದು ಅವರು ತಿಳಿಸಿದರು.

ಮಾಹಿತಿಗೆ ಅರ್ಜಿ ನಮೂನೆ: ಬ್ಯಾಂಕುಗಳಿಂದ ಬೆಳೆ ಸಾಲ ಪಡೆದ ರೈತರು ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿ ತುಂಬಿ ನಾಡ ಕಚೇರಿ ಅಥವಾ ತಹಶೀಲ್ದಾರ್‌ ಕಚೇರಿಗಳಿಗೆ ಸಲ್ಲಿಸಬೇಕು. ಸದ್ಯವೇ ಅರ್ಜಿ ನಮೂನೆಯನ್ನು ವಿತರಿಸ
ಲಾಗುವುದು ಎಂದು ಹೇಳಿದರು.

ಇದು ಅತ್ಯಂತ ಸರಳ ಅರ್ಜಿ ನಮೂನೆಯಾಗಿದ್ದು, ಅದರಲ್ಲಿ ಸಾಲ ಪಡೆದ ರೈತನ ಹೆಸರು, ಕುಟುಂಬದ ಸದಸ್ಯರ ವಿವರ, ಆಧಾರ್‌ ಸಂಖ್ಯೆ, ಭೂಮಿಯ ಸರ್ವೇ ಸಂಖ್ಯೆ ಭರ್ತಿ ಮಾಡಬೇಕು. ಸಾಲ ಮನ್ನಾ ಅರ್ಹರಿಗೆ ಸಿಗಬೇಕು ಮತ್ತು ಅದರ ದುರ್ಬಳಕೆ ಆಗಬಾರದು ಎಂಬ ಕಾರಣಕ್ಕೆ ಈ ವ್ಯವಸ್ಥೆ ಅನುಸರಿಸಲಾಗುತ್ತಿದೆ ಎಂದರು.