ಮಂಡ್ಯ ,ಮಾ.14- ನಾಡಿನ ಜನರೇ ತಮ್ಮ ಆಸ್ತಿಯಾಗಿದ್ದು, ಮಗನಿಗೆ ಆಸ್ತಿ ಮಾಡುವ ಉದ್ದೇಶವಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ನಗರದಲ್ಲಿ ಜೆಡಿಎಸ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿರುವ ತಮ್ಮ ಪುತ್ರ ಹಾಗೂ ನಟ ನಿಖಿಲ್ ಕುಮಾರಸ್ವಾಮಿ ಪರವಾಗಿ ಮತಯಾಚನೆ ಮಾಡಿ ಮಾತನಾಡಿದ ಅವರು, ಎರಡು ಬಾರಿ ಹೃದಯ ಚಿಕಿತ್ಸೆಗೆ ಒಳಗಾಗಿದ್ದು, ಮರುಜನ್ಮ ಪಡೆದಂತಾಗಿದೆ.

ನಾಡಿನ ಬಡವರ, ಜನರ ಸೇವೆಗೆ ಜೀವನವನ್ನು ಮೀಸಲಿಟ್ಟಿದ್ದೇನೆ ಎಂದರು. ನೀವು ಬೆಳೆಸಿದ ಗಿಡವನ್ನು ನೀವೇ ಚಿವುಟುತ್ತೀರಾ ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಆ ಗಿಡವನ್ನು ಮರವಾಗಿ ಬೆಳೆಸಿ ಜನರಿಗೆ ನೆರಳು ನೀಡುವಂತೆ ಮಾಡುವೆ ಎಂದು ನಿಖಿಲ್‍ಕುಮಾರಸ್ವಾಮಿ ಕುರಿತು ಮಾತನಾಡಿದರು.

ರಾಮನಗರ ತಮಗೆ ರಾಜಕೀಯ ಜನ್ಮ ನೀಡಿದ್ದರೂ ಮಂಡ್ಯ ಹೆಮ್ಮೆರವಾಗಿ ಬೆಳೆಸಿದೆ. ಮಂಡ್ಯ ಜನರನ್ನು ಎಂದೂ ಮರೆಯುವುದಿಲ್ಲ. ಹಾಗೆಯೇ ನಿಖಿಲ್ ಕೂಡ ಬದುಕಿರುವವರೆಗೂ ಮರೆಯುವುದಿಲ್ಲ.

ಮಂಡ್ಯದಲ್ಲಿ ಜಮೀನು ಪಡೆದು ಇಲ್ಲಿನ ಜನರೊಂದಿಗೆ ನೆಲೆಸಲು ಬಂದಿದ್ದಾನೆ ಹೊರತು ಲೋಕಸಭೆ ಸದಸ್ಯನಾಗಿ ಹೋಗುವ ಉದ್ದೇಶದಿಂದಲ್ಲ ಎಂದರು. ಜನರ ಪ್ರೀತಿ ವಿಶ್ವಾಸವನ್ನು ದುರುಪಯೋಗ ಪಡಿಸಿಕೊಳ್ಳುವುದಿಲ್ಲ.

ತಮ್ಮ ಆರೋಗ್ಯ ಸರಿ ಇಲ್ಲದ ಕಾರಣ ತಮ್ಮೊಂದಿಗೆ ರಾಜಕೀಯವಾಗಿ ಕೈ ಜೋಡಿಸಿದ್ದಾರೆ. ಎಂಟತ್ತು ಮಂದಿ ಜನರ ಕೈಯಲ್ಲಿ ಗೋ ಬ್ಯಾಕ್ ಹೇಳಿಸಿಕೊಂಡು ಹೆದರಿ ಓಡಿಹೋಗುವುದಿಲ್ಲ. ನಮಗೆ ಶಕ್ತಿ ತುಂಬಿರುವ ಜನರಿಗೆ ತಲೆಬಾಗುವೆ. ಮಂಡ್ಯ ಜಿಲ್ಲೆಯ ಜನರ ಪ್ರೀತಿ ವಿಶ್ವಾಸಕ್ಕೆ ತಲೆಬಾಗುತ್ತಾರೆ ಹೊರತು ದುಡ್ಡಿಗೆ ತಲೆಬಾಗುವುದಿಲ್ಲ ಎಂಬ ಅರಿವಿದೆ.

ಮಂಡ್ಯ ಜಿಲ್ಲೆ ಅಷ್ಟೇ ಅಲ್ಲ ರಾಜ್ಯದ ಸಮಗ್ರ ಅಭಿವೃದ್ಧಿ ಮಾಡುವ ಉದ್ದೇಶ ನಮ್ಮದು ಎಂದ ಮುಖ್ಯಮಂತ್ರಿ ಯಾವುದೇ ಟೀಕೆಗಳಿಗೆ ಹೆದರದೆ ಮಂಡ್ಯ ಜಿಲ್ಲೆಯ ವಿವಿಧ ಯೋಜನೆಗಳಿಗೆ ಸುಮಾರು 8,761 ಕೋಟಿ ರೂ. ಒದಗಿಸಲು ತೀರ್ಮಾನ ಮಾಡಲಾಗಿದೆ.

ಜಿಲ್ಲೆಯ ಜನರ ಋಣ ತೀರಿಸಲು ಈ ತೀರ್ಮಾನ ಮಾಡಲಾಗಿದೆ ಹೊರತು ಮಗನನ್ನು ಸಂಸದ ಮಾಡಲು ಅಲ್ಲ. ಜಿಲ್ಲೆಯಲ್ಲಿ 50 ಭತ್ತ ಖರೀದಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಸಾಲಮನ್ನಾ ಯೋಜನೆಯಲ್ಲಿ ಮಂಡ್ಯ ಜಿಲ್ಲೆಗೆ 386 ಕೋಟಿ ರೂ. ನೀಡಲಾಗಿದ್ದು, ಜಿಲ್ಲೆಯ 9880 ರೈತರಿಗೆ ಪ್ರಯೋಜನ ದೊರಕಿದೆ ಎಂದರು.

ಜಿಲ್ಲೆಯ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮಾಜಿ ಸಚಿವ ಹಾಗೂ ನಟ ಅಂಬರೀಶ್ ಅವರು ನಿಧನರಾದಾಗ ಮುಖ್ಯಮಂತ್ರಿಯಾಗಿ ಅಲ್ಲ ಅವರ ತಮ್ಮನಂತೆ ಕಾರ್ಯ ನಿರ್ವಹಿಸಿದ್ದೇನೆ. ಅಂಬರೀಶ್ ಹಾಗೂ ನನ್ನ ನಡುವೆ ಪ್ರೀತಿ ಹೇಗಿತ್ತು ಎಂಬ ಬಗ್ಗೆ ನಿಮಗೆ ಗೊತ್ತಿಲ್ಲ ಎಂದು ಹೇಳಿದರು.

ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಮಂಡ್ಯ ಜಿಲ್ಲೆಯ ಎಲ್ಲ ಜೆಡಿಎಸ್ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ನನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ನಾನು ಸ್ವಾರ್ಥಕ್ಕಾಗಿ ರಾಜಕೀಯಕ್ಕೆ ಬಂದಿಲ್ಲ. ನಾನು ಮುಂದೆ ಬರಬೇಕು, ಹಿಂದೆ ಹೋಗಬೇಕೋ ನೀವೆ ನಿರ್ಧರಿಸಿ. ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

By R

You missed