ಈಗ ಮೋದಿ ಅಲೆ ಇಲ್ಲ. ಜನ ದಡ್ಡರಲ್ಲ. ಕಾಂಗ್ರೆಸ್‌ ನಿರ್ನಾಮದ ಸ್ಥಿತಿಗೆ ಬಂದಿದ್ದರಿಂದ ಮೋದಿ ಆರಿಸಿ ಬಂದರೇ ಹೊರತು, ಅವರ ಸ್ವಂತ ಶಕ್ತಿಯಿಂದಲ್ಲ. ವಿರೋಧ ಪಕ್ಷ ದುರ್ಬಲವಾಗಿದ್ದರಿಂದಾಗಿ ಈ ವ್ಯಕ್ತಿ ಪ್ರಜ್ಞಾಪ್ರಭುತ್ವ ವ್ಯವಸ್ಥೆಯ ಸರ್ವಾಧಿಕಾರಿಯಂತೆ ಮೆರೆಯುತ್ತಿದ್ದಾರೆ.

ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯುವ ಛಲದಿಂದ ಮುನ್ನುಗ್ಗುತ್ತಿರುವ ಜೆಡಿಎಸ್‌ಗೆ ಯುವ ಕಾರ್ಯಕರ್ತರ ಹುಮ್ಮಸ್ಸು ಮತ್ತಷ್ಟು ಶಕ್ತಿ ತುಂಬಿದೆ. ಯುವ ಘಟಕದ ಅಧ್ಯಕ್ಷರಾಗಿರುವ ಮಧು ಬಂಗಾರಪ್ಪ ಅವರು ಚುನಾವಣಾ ಕಣದ ಬಗ್ಗೆ ಇಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಯಾವ ಕಾರಣಕ್ಕೆ ಜೆಡಿಎಸ್‌ಗೆ ಮತ ಹಾಕಬೇಕು?

ರಾಷ್ಟ್ರೀಯ ಪಕ್ಷಗಳ ದುರಾಡಳಿತ ಮಿತಿ ಮೀರಿದೆ. ನೆಲ, ಜಲ, ಭಾಷೆ ವಿಚಾರದಲ್ಲಿ ಅವು ದಕ್ಷಿಣ ಭಾರತವನ್ನು ಕಡೆಗಣಿಸಿವೆ. ಪ್ರಾದೇಶಿಕ ಪಕ್ಷಗಳಿಗೆ ಸ್ವತಂತ್ರ ಚಿಂತನೆ ಇದೆ. ಮಹದಾಯಿ ನೀರಿನ ವಿಚಾರದಲ್ಲಿ ‘ನಾವು ಚಿವುಟಿದ ಹಾಗೆ ಮಾಡುತ್ತೇವೆ. ನೀವು ಅತ್ತ ಹಾಗೆ ಮಾಡಿ’ ಎಂಬಂತೆ ವರ್ತಿಸುತ್ತಿವೆ. ರಾಷ್ಟ್ರೀಯ ಪಕ್ಷಗಳಿಂದ ನ್ಯಾಯ ಸಿಗುವುದಿಲ್ಲ.

ಯುವ ಮತದಾರರನ್ನು ಸೆಳೆಯಲು ಕಾರ್ಯಸೂಚಿ ಏನು?

ಯುವಜನರಿಗೆ ಶೈಕ್ಷಣಿಕ ಅರ್ಹತೆಗೆ ತಕ್ಕ ಕೆಲಸ ಸಿಗುತ್ತಿಲ್ಲ. ಬಿಜೆಪಿ 10 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿತ್ತು. ಎಂಜಿನಿಯರಿಂಗ್‌ ಕಲಿತವರು ಪಕೋಡಾ ಮಾರಲಿ ಎಂದು ಅವರ ಮುಖಂಡರು ಸಂಸತ್ತಿನಲ್ಲಿ ಹೇಳುತ್ತಾರೆ.

ಐದು ವರ್ಷಗಳಲ್ಲಿ 1 ಕೋಟಿ ಉದ್ಯೋಗ ಸೃಷ್ಟಿಸುವ ಯೋಜನೆಯನ್ನು ನಾವು ರೂಪಿಸಿದ್ದೇವೆ. ಗ್ರಾಮ ಮಟ್ಟದಲ್ಲಿ ಐದು ವರ್ಷಗಳಲ್ಲಿ 6 ಲಕ್ಷ ಗಿಡ ಬೆಳೆಸುವ ಯೋಜನೆ ಇದೆ. ಪ್ರವಾಸೋದ್ಯಮದಲ್ಲೂ ದೊಡ್ಡ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸಬಹುದು. ನಾನು ಪ್ರತಿನಿಧಿಸುವ ಸೊರಬ ಕ್ಷೇತ್ರದಲ್ಲಿರುವ ಗುಡವಿ ಪಕ್ಷಿಧಾಮಕ್ಕೆ ವರ್ಷದಲ್ಲಿ 1 ಲಕ್ಷ ವಲಸೆ ಹಕ್ಕಿಗಳು ಬರುತ್ತವೆ. ಇದನ್ನು ಅಭಿವೃದ್ಧಿಪಡಿಸಲು ನೂರೆಂಟು ಅಡ್ಡಿಗಳಿವೆ. ಈ ಸಲುವಾಗಿ ಮಂಜೂರಾದ ₹ 10 ಲಕ್ಷ ಅನುದಾನ ಹಿಂದಕ್ಕೆ ಹೋಯಿತು. ಇಂತಹ ಅಡ್ಡಿಗಳನ್ನು ಮೊದಲು ನಿವಾರಿಸಬೇಕು.

ಒಂದು ಮಡಕೆಯನ್ನು ಹಳ್ಳಿಯಲ್ಲಿ ಮಾರಿದರೆ ಕೇವಲ ₹ 20 ಲಾಭ ಸಿಗುತ್ತದೆ. ಅದನ್ನೇ ಬೆಂಗಳೂರಿನ ಫುಟ್‌ಪಾತ್‌ನಲ್ಲಿ ಮಾರಿದರೆ ₹ 200 ಲಾಭ ಬರುತ್ತದೆ. ಕಾವೇರಿ ಎಂಪೋರಿಯಂನಲ್ಲಿ ಮಾರುವ ಮೂಲಕ ₹ 2 ಸಾವಿರ ಲಾಭ ಗಳಿಸಬಹುದು. ಅದಕ್ಕೆ ಅಗತ್ಯವಿರುವ ಕೌಶಲ ಅಭಿವೃದ್ಧಿ ತರಬೇತಿಯನ್ನು ಸರ್ಕಾರವೇ ನೀಡಬೇಕು.

ಜೆಡಿಎಸ್‌ಗೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆ ಎಂದು ರಾಹುಲ್‌ ಗಾಂಧಿ, ಸಿದ್ದರಾಮಯ್ಯ ಹೇಳುತ್ತಿದ್ದಾರಲ್ಲಾ?

ಕಾಂಗ್ರೆಸ್‌ ತಮ್ಮನ್ನು ಕೇವಲ ವೋಟ್‌ ಬ್ಯಾಂಕ್‌ ಆಗಿ ಬಳಸುತ್ತಿದೆ ಎಂಬುದನ್ನು ಮುಸ್ಲಿಮರು ಅರ್ಥ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ಗೆ ಈ ಬಗ್ಗೆ ಸ್ಪಷ್ಟ ಸಂದೇಶ ಹೋಗಿದೆ. ಇದನ್ನು ಅಲ್ಲಗಳೆಯಲು ಈ ರೀತಿ ಮಾಡುತ್ತಿದ್ದಾರೆ. ರಾಹುಲ್‌ ಏನು ನಮ್ಮ ಪಕ್ಷದ ವಕ್ತಾರರೇ? ಅಲ್ಪಸಂಖ್ಯಾತರ ಹಾಗೂ ದಲಿತರ ಮತ ಸೆಳೆಯಲು ಬೇರೆಯವರ ಮೇಲೆ ಗೂಬೆ ಕೂರಿಸುವ ಅಗತ್ಯವೇನಿದೆ.

ಬಿಜೆಪಿಯವರು ಹಿಂದುತ್ವ, ಕಾಂಗ್ರೆಸ್‌ ಅಹಿಂದ ಮತಗಳ ಹಿಂದೆ ಬಿದ್ದಿವೆ. ನಮ್ಮ ದೇಶವನ್ನು ಜಾತಿ ಮತದ ಆಧಾರದಲ್ಲಿ ವಿಭಜಿಸಿರುವುದು ಇದೇ ಪಕ್ಷಗಳು. ಈಗ ರಾಜ್ಯದಲ್ಲಿ ಬದಲಾವಣೆ ಪರ್ವ ಶುರುವಾಗಿದೆ.

* ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ಸೃಷ್ಟಿಯಾದರೆ ನಿಮ್ಮ ಒಲವು ಯಾರ ಪರ?

ನಾವು ಎರಡೂ ಪಕ್ಷಗಳ ಜೊತೆಗೂ ಹೋಗುವುದಿಲ್ಲ. ನಮ್ಮ ಪಕ್ಷದ ವರಿಷ್ಠರು ಇದನ್ನು ಸ್ಪಷ್ಟಪಡಿಸಿದ್ದಾರೆ. ನವದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್‌ಗೆ ಜನ ಮತ್ತೆ ಅವಕಾಶ ಕೊಟ್ಟರು. ಅದೇ ರೀತಿ ಇಲ್ಲಿ ಏಕಾಗಬಾರದು. ನಾವು ಈ ಸಲ ಕಿಂಗ್‌ ಮೇಕರ್‌ ಅಲ್ಲ; ನಾವೇ ಕಿಂಗ್‌.

ಇದಕ್ಕಾಗಿ ಸಿದ್ಧತೆ ಹೇಗೆ ನಡೆದಿದೆ?

ಅಮಿತ್‌ ಶಾ ಹಾಗೂ ರಾಹುಲ್‌ ಅವರಂತೆ ಮಠ, ದೇವಸ್ಥಾನ, ಮಸೀದಿಗಳಿಗೆ ಹೋದರೆ ಮತ ಬೀಳುವುದಿಲ್ಲ. ಅವರು ನಿರ್ದಿಷ್ಟ ಸಮುದಾಯಗಳ ಮತ ಗಳಿಸಲು ಪರೋಕ್ಷ ರಾಜಕಾರಣ ಮಾಡುತ್ತಿದ್ದಾರೆ. ನಾವು ನೇರ ರಾಜಕಾರಣ ಮಾಡುತ್ತಿದ್ದೇವೆ. ಫೆಬ್ರುವರಿ 17ರಂದು 10 ಲಕ್ಷ ಜನರನ್ನು ಸೇರಿಸಿ, ಅವರ ಸಮ್ಮುಖದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದೇವೆ. ಆ ಪಕ್ಷಗಳ ಪಟ್ಟಿ ಬಿಡುಗಡೆಯಾಗುವಷ್ಟರಲ್ಲಿ ಕುಮಾರಸ್ವಾಮಿ 82 ಕ್ಷೇತ್ರಗಳಲ್ಲಿ ಪ್ರಚಾರ ಮುಗಿಸಿದ್ದರು. ಪ್ರಚಾರದಲ್ಲಿ ಆ ಪಕ್ಷಗಳಿಗಿಂತ ಎರಡೂವರೆ ತಿಂಗಳು ಮುಂದಿದ್ದೇವೆ. ನಮಗೊಂದು ಅವಕಾಶ ಕೊಡಿ ಎನ್ನುತ್ತಿದ್ದೇವೆ.

ತೆನೆ ಹೊತ್ತ ಮಹಿಳೆಯ ಚಿಹ್ನೆಯನ್ನು ಹೊಂದಿರುವ ನಿಮ್ಮ ಪಕ್ಷದಲ್ಲಿ ಮಹಿಳೆಯರಿಗೆ ಕಡಿಮೆ ಸಂಖ್ಯೆಯಲ್ಲಿ ಟಿಕೆಟ್‌ ನೀಡಲಾಗಿದೆಯಲ್ಲ?

ಪಕ್ಷದ ಚಿಹ್ನೆ ಕೃಷಿ ಹಾಗೂ ರೈತರ ಸಂಕೇತ. ಮಹಿಳೆಯರಿಗೂ ಅವಕಾಶ ನೀಡಬೇಕಾಗುತ್ತದೆ. ಆಯ್ಕೆಯಾಗಿ ಬರುವ ಸಾಧ್ಯತೆಯನ್ನೂ ನಾವು ನೋಡಬೇಕಾಗುತ್ತದೆ. ಸಾಕಷ್ಟು ಮಹಿಳೆಯರಿಗೂ ಟಿಕೆಟ್‌ ಕೊಟ್ಟಿದ್ದೇವೆ.

ಈಡಿಗರ ಹಾಗೂ ಹಿಂದುಳಿದ ಸಮುದಾಯದ ನಾಯಕರಾಗಿ ಬಂಗಾರಪ್ಪ ಗುರುತಿಸಿಕೊಂಡವರು. ನೀವು ತಂದೆಯ ದಾರಿಯಲ್ಲಿ ಸಾಗುತ್ತೀರಾ?

ನಿರ್ದಿಷ್ಟ ಸಮುದಾಯದ ನಾಯಕನಾಗಿ ಗುರುತಿಸಿಕೊಳ್ಳುವುದು ನನಗೆ ಇಷ್ಟವಿಲ್ಲ. ತಂದೆಯವರು ಹಿಂದುಳಿದ ವರ್ಗದ ನಾಯಕರಲ್ಲ, ಅವರೊಬ್ಬ ಜನಸಮೂಹದ ನಾಯಕ. ನಾಯಕನೊಬ್ಬ ಜಾತಿ ಧರ್ಮದ ಆಧಾರದಲ್ಲಿ ಬೆಳೆಯುವುದು ಅಪಾಯಕಾರಿ.

ಕರಾವಳಿ ಭಾಗದಲ್ಲಿ ಕೋಮುವಾದಿ ವಿಚಾರ ಮುಂದಿಟ್ಟು ಯುವಕರನ್ನು ಹಾದಿ ತಪ್ಪಿಸುವ ಯತ್ನ ನಡೆದಿದೆಯಲ್ಲಾ?

ಕಠಿಣ ಕಾನೂನು ಕ್ರಮ ಕೈಗೊಳ್ಳುವುದೇ ಇದಕ್ಕೆ ಉತ್ತರ. ಕಲ್ಲಡ್ಕ ಪ್ರಭಾಕರ ಭಟ್‌ ವಿರುದ್ಧ ಬಂಧನಕ್ಕೆ ವಾರೆಂಟ್‌ ಇದ್ದಾಗಲೂ ಸರ್ಕಾರ ಏನೂ ಮಾಡಲಿಲ್ಲ. ಲೋಕಾಯುಕ್ತರ ಅಧಿಕಾರ ಕಿತ್ತು ಎಸಿಬಿ ರಚಿಸಿತು. ಬಿಜೆಪಿ ಹಾಗೂ ಕೋಮುವಾದಿ ಶಕ್ತಿಗಳು ಇಂತಹ ಪ್ರವೃತ್ತಿಯ ಲಾಭ ಪಡೆದಿವೆ.

ಜೆಡಿಎಸ್‌ ‘ಅಪ್ಪ ಮಕ್ಕಳ ಪಕ್ಷ’ ಎಂದು ವಿರೋಧ ಪಕ್ಷಗಳು ಹೇಳುತ್ತವಲ್ಲವೇ?

ಅವರಿಗೆ ಜೆಡಿಎಸ್‌ ಬಗ್ಗೆ ಭಯ ಹುಟ್ಟಿದೆ. ಹಾಗಾಗಿ ಈ ರೀತಿ ಮಾಡುತ್ತಿವೆ. ಸಿದ್ದರಾಮಯ್ಯ ಇಂತಹ ಈ ಹೇಳಿಕೆ ನೀಡುವ ಮುನ್ನ ನೆಹರೂ, ರಾಜೀವ್‌ ಗಾಂಧಿ, ರಾಹುಲ್‌ ಗಾಂಧಿ ಅವರನ್ನೂ ಗಮನದಲ್ಲಿಟ್ಟುಕೊಳ್ಳಲಿ. ಯಡಿಯೂರಪ್ಪ ಅವರು ಬಿಜೆಪಿಯಲ್ಲಿ ಎಷ್ಟು ನಾಯಕರ ಮಕ್ಕಳಿಗೆ ಟಿಕೆಟ್‌ ನೀಡಲಾಗಿದೆ ಎಂದು ನೋಡಿಕೊಳ್ಳಲಿ.

ನಿಮ್ಮ ಮುಂದಿರುವ ಸವಾಲು ಸಿದ್ದರಾಮಯ್ಯ ಅವರೋ ಅಥವಾ ಮೋದಿಯೋ?

ಈಗ ಮೋದಿ ಅಲೆ ಇಲ್ಲ. ಜನ ದಡ್ಡರಲ್ಲ. ಕಾಂಗ್ರೆಸ್‌ ನಿರ್ನಾಮದ ಸ್ಥಿತಿಗೆ ಬಂದಿದ್ದರಿಂದ ಮೋದಿ ಆರಿಸಿ ಬಂದರೇ ಹೊರತು, ಅವರ ಸ್ವಂತ ಶಕ್ತಿಯಿಂದಲ್ಲ. ವಿರೋಧ ಪಕ್ಷ ದುರ್ಬಲವಾಗಿದ್ದರಿಂದಾಗಿ ಈ ವ್ಯಕ್ತಿ ಪ್ರಜ್ಞಾಪ್ರಭುತ್ವ ವ್ಯವಸ್ಥೆಯ ಸರ್ವಾಧಿಕಾರಿಯಂತೆ ಮೆರೆಯುತ್ತಿದ್ದಾರೆ. ಅವರು ಅಧಿಕಾರಕ್ಕೆ ಬಂದ ಬಳಿಕ ಧರ್ಮದ ವಿಚಾರದಲ್ಲಿ ಸಂಘರ್ಷಗಳು ಹೆಚ್ಚುತ್ತಿವೆ. ಕರ್ನಾಟಕದಲ್ಲಿ ಹಿಂದೂಗಳು ಸತ್ತಿದ್ದು ಕಾಣಿಸುತ್ತದೆ. ಅವರಿಗೆ ಮುಸ್ಲಿಮರು ಸತ್ತಿದ್ದು ಕಾಣಿಸುವುದಿಲ್ಲವೇ? ಹಿಂದೂಗಳಿಗೆ, ಬಿಜೆಪಿಗೆ ಮಾತ್ರ ಅವರು ಪ್ರಧಾನಿಯೇ ಅಥವಾ ದೇಶದ ಪ್ರಧಾನಿಯೇ?

By R

You missed