ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಅವರನ್ನು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಶುಕ್ರವಾರ ಭೇಟಿ ಮಾಡಿದರು.
ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸ ‘ಅಮೋಘ’ಕ್ಕೆ ಆಗಮಿಸಿದ ಕೆ.ಚಂದ್ರಶೇಖರ್ ರಾವ್ ಅವರನ್ನು ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ನಂತರ ಇಬ್ಬರೂ ಉಭಯ ಕುಶಲೋಪರಿ ನಡೆಸಿದರು. ಕೆಸಿಆರ್ ಜತೆಯಲ್ಲಿ ಬಹುಭಾಷಾ ನಟ ಪ್ರಕಾಶ್ ರೈ ಅವರೂ ಇದ್ದದ್ದು ಕುತೂಹಲ ಮೂಡಿಸಿದೆ.
ದೇವೇಗೌಡರು ಮತ್ತು ಕೆಎಸ್ಆರ್ ನಡುವಿನ ಈ ಭೇಟಿ ರಾಷ್ಟ್ರ ರಾಜಕಾರಣ ಮತ್ತು ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲಕ್ಕೆ ಈಡುಮಾಡಿದೆ. ಮುಂಬರುವ ಲೋಕಸಭೆ ಚುನಾವಣೆಗೆ ತೃತಿಯ ರಂಗವನ್ನು ಬಲಪಡಿಸುವುದು ಮತ್ತು ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ತೆಲುಗು ಭಾಷಿಕರು ಜೆಡಿಎಸ್ ಬೆಂಬಲಿಸುವ ಕುರಿತಾದ ವಿಚಾರಗಳು ಚರ್ಚೆಯಾಗುವ ಸಾಧ್ಯತೆಗಳಿವೆ. ತೃತೀಯ ರಂಗಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರಗಳು ಈ ಭೇಟಿ ವೇಳೆ ಆಗಲಿವೆ ಎಂದು ಮೂಲಗಳು ತಿಳಿಸಿವೆ.
ತೆಲಂಗಾಣ ರಾಷ್ಟ್ರ ಸಮಿತಿಯ ವರಿಷ್ಠರೂ ಆಗಿರುವ ಕೆಸಿಆರ್ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ತೃತೀಯ ರಂಗವನ್ನು ಬಲಪಡಿಸಲು ಅಸ್ತೆ ವಹಿಸಿದ್ದಾರೆ.