ತುಮಕೂರು: ಅನಿರೀಕ್ಷಿತ ಬೆಳವಣಿಗೆಯಲ್ಲಿ ಮಾಜಿ ಶಾಸಕ ಹಾಗೂ ತುಮಕೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಎಚ್.ನಿಂಗಪ್ಪ ಜೆಡಿಎಸ್ ಸೇರಿದರು.

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಧ್ಯಾಹ್ನ 2 ಗಂಟೆಗೆ ನಿಂಗಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದರು. 2.30ರಿಂದ 3.45ರ ವರೆಗೆ ನಿಂಗಪ್ಪ ಅವರ ಜತೆ ಕೊಠಡಿಯಲ್ಲಿ ಸುದೀರ್ಘವಾಗಿ ರಹಸ್ಯ ಮಾತುಕತೆ ನಡೆಸಿದರು. ಈ ವೇಳೆ ಶಾಸಕರಾದ ಸಿ.ಬಿ.ಸುರೇಶ್ ಬಾಬು, ಡಿ.ನಾಗರಾಜಯ್ಯ, ಎಂ.ಟಿ.ಕೃಷ್ಣ‍ಪ್ಪ, ಎಸ್.ಆರ್.ಶ್ರೀನಿವಾಸ್ ಹಾಗೂ ವಿಧಾನಪರಿಷತ್ ಸದಸ್ಯ ಬೆಮಲ್ ಕಾಂತರಾಜು ಹಾಜರಿದ್ದರು.

ಬೆಳಿಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ್ದ ನಿಂಗಪ್ಪ, ‘ಕುಮಾರ
ಸ್ವಾಮಿ ನನಗೆ ಬಹುಕಾಲದಿಂದ ಆತ್ಮೀ
ಯರು. ಮನೆಗೆ ಬರುತ್ತಿದ್ದಾರೆ ಅಷ್ಟೇ. ನಾನು ಜೆಡಿಎಸ್ ಸೇರುವ ತೀರ್ಮಾನ ಮಾಡಿಲ್ಲ’ ಎಂದಿದ್ದರು.

ಮಾತುಕತೆಯ ನಂತರ ಸುದ್ದಿಗಾ
ರರ ಜತೆ ಮಾತನಾಡಿದ ಕುಮಾರ
ಸ್ವಾಮಿ, ‘ನಿಂಗಪ್ಪ ಅವರು ಜೆಡಿಎಸ್ ಮೂಲದ
ವರು. ಅವರು ನನಗೆ, ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಗೌರಿಶಂಕರ್ ಅವರಿಗೆ ಅಣ್ಣನ ಸ್ಥಾನದಲ್ಲಿ ನಿಂತು ಕೆಲಸ ಮಾಡುವರು’ ಎಂದು ಹೇಳಿದರು.

‘ಸ್ವಂತ ಮನೆಗೆ ಮರಳಿ ಬರುವ ತೀರ್ಮಾನವನ್ನು ಕೈಗೊಂಡಿದ್ದಾರೆ. ನಾನು ಮುಖ್ಯಮಂತ್ರಿ ಆಗಬೇಕು ಎನ್ನುವ ಒಂದೇ ಭಾವನೆ ಇಟ್ಟುಕೊಂಡಿದ್ದಾರೆ. ನನಗೋಸ್ಕರ ಪಕ್ಷಕ್ಕೆ ಬರುವ ತೀರ್ಮಾನ ಮಾಡಿದ್ದಾರೆ. ಅವರು ಪಕ್ಷ ಬಿಟ್ಟ ನಂತರ ಕೆಲವು ಕಡೆಗಳಲ್ಲಿ ಹಾನಿಯಾಗಿತ್ತು. ಸೇರ್ಪಡೆಯಿಂದ ಅಂತಹ ಕಡೆಗಳಲ್ಲಿ ಬಲ ಬರುತ್ತದೆ’ ಎಂದು ತಿಳಿಸಿದರು.

‘ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಕೈಯಲ್ಲಾದ ಮಟ್ಟಿಗೆ ಜವಾಬ್ದಾರಿ ನಿರ್ವಹಿಸುವರು. ಈಗ ಸಾಂಕೇತಿಕವಾಗಿ ಪಕ್ಷ ಸೇರಿ
ದ್ದಾರೆ. ನಾಲ್ಕೈದು ದಿನಗಳಲ್ಲಿ ಗ್ರಾಮಾಂ
ತರ ಕ್ಷೇತ್ರದಲ್ಲಿ 50 ಸಾವಿರ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿ
ಗಳನ್ನು ಸೇರಿಸಿ, ದೇವೇಗೌಡ ಅವರ ಸಮ್ಮು
ಖದಲ್ಲಿ ಅಧಿಕೃತವಾಗಿ ಪಕ್ಷಕ್ಕೆ ಸೇರುವರು’ ಎಂದು ಮಾಹಿತಿ ನೀಡಿದರು.

‘ನಿಂಗಪ್ಪ ಅವರು ಯಾವುದೇ ಸ್ಥಾನ
ಮಾನ ಕೇಳಿಲ್ಲ. ಪಕ್ಷದ ಹಿಂದಿನ ನಿರ್ಣಯ
ಗಳಿಂದ ಅವರಿಗೆ ನೋವಾಗಿರಬಹುದು. ಅವರು ಪ್ರಾಮಾಣಿಕ, ನಿಷ್ಠಾವಂತ ಕಾರ್ಯಕರ್ತ. ನಮ್ಮ ಸರ್ಕಾರ ಬಂದರೆ ಅವರ ಸೇವೆ ಉಪಯೋಗ ಮಾಡಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ನೀಡಲಾಗುವುದು’ ಎಂದರು.

‘ಜಿಲ್ಲೆಯಲ್ಲಿ ಬಹಳ ಜನರು ಪಕ್ಷಕ್ಕೆ ಬರುವವರು ಇದ್ದಾರೆ. ಇಡೀ ರಾಜ್ಯ
ದಲ್ಲಿ ಪಕ್ಷದ ಪರ ವಾತಾವರಣ ಇದೆ. ಜೆಡಿಎಸ್ ಪಕ್ಷಕ್ಕೆ ನೆಲೆ ಇಲ್ಲ ಎಂದು ಮುಖ್ಯ
ಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ 25 ಸೀಟು ಬರು
ತ್ತದೆ ಎಂದು ರಾತ್ರಿ ಅವರಿಗೆ ಕನಸು ಬೀಳು
ತ್ತಿದೆ. ಅದನ್ನೇ ಅವರು ಬೆಳಿಗ್ಗೆ ಕನವರಿಸು
ತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ದೇವೇಗೌಡ ಅವರ ಬಗ್ಗೆ ಮೆಚ್ಚಿ ಮಾತನಾಡುವವರಲ್ಲಿ ಅಂಬರೀಷ್ ಸಹ ಒಬ್ಬರು. ಅಜಾತ ಶ್ರುತವಾದ ಅಂಬರೀಷ್ ಅವರು ನನಗೆ ಹಿರಿಯ ಸಹೋದರ ಇದ್ದಂತೆ. ಜೆಡಿಎಸ್ ಬೆಂಬಲಿಸಿದರೆ ನಾಡಿನ ಜನರಿಗೆ ಒಳಿತಾಗುತ್ತದೆ ಎನ್ನುವ ಭಾವನೆ ಅವರಿಗೆ ಬಂದು ನಮ್ಮನ್ನು ಬೆಂಬಲಿಸುವ ನಿರ್ಧಾರ ಮಾಡಿದರೆ ಒಳ್ಳೆಯದು’ ಎಂದು ಹೇಳಿದರು.

ಸಂಬಂಧಕ್ಕಾಗಿ ಜೆಡಿಎಸ್‌ಗೆ: ‘ನಾನು ಜನತಾದಳ ಮೂಲದವನು. ಆ ಪಕ್ಷದಿಂದಲೇ ಶಾಸಕನಾಗಿ ಆಯ್ಕೆಯಾಗಿದ್ದೆ. ಅನಿವಾರ್ಯ ಕಾರಣಗಳಿಂದ ಬೇರೆ ಪಕ್ಷಕ್ಕೆ ಹೋಗಿದ್ದೆ. ಹಾಗಿದ್ದರೂ ಜನತಾದಳದ ಮುಖಂಡರ ಜತೆ ಸ್ನೇಹದಿಂದಲೇ ಇದ್ದೆ. ಜಿಲ್ಲೆಯ ಎಲ್ಲಿಗೆ ಹೋದರೂ ನನ್ನ ದಳದ ಮುಖಂಡ ಎಂದೇ ಗುರುತಿಸುತ್ತಿದ್ದರು’ ಎಂದು ನಿಂಗಪ್ಪ ತಿಳಿಸಿದರು.

‘ಪ್ರೀತಿ, ವಿಶ್ವಾಸ, ಸಂಬಂಧದ ಕಾರಣಕ್ಕೆ ಜೆಡಿಎಸ್ ಸೇರಿದ್ದೇನೆ. ಅಧಿಕಾರ ಮುಖ್ಯವಾಗಲಿಲ್ಲ. ಕುಮಾರಸ್ವಾಮಿ ಮತ್ತು ದೇವೇಗೌಡ ಅವರು ರೈತರ ಪರವಾಗಿ ಹೋರಾಟ ನಡೆಸುತ್ತಿದ್ದಾರೆ’ ಎಂದು ಹೇಳಿದರು.

‘ಪಕ್ಷ ಅಧಿಕಾರಕ್ಕೆ ಬಂದರೆ ನಾವು ಯಾವ ರೀತಿ ಕೆಲಸ ಮಾಡಿ ಶಾಸಕರನ್ನು ಗೆಲ್ಲಿಸಿದ್ದೇವೆ ಎನ್ನುವ ಆಧಾರದಲ್ಲಿ ಸ್ಥಾನಮಾನ ಪಡೆಯುವ ನಿರೀಕ್ಷೆ ಇಟ್ಟುಕೊಳ್ಳಬಹುದು’ ಎಂದರು.

ಜೆಡಿಎಸ್ ಕಾರ್ಯಕರ್ತರು ಹಾಗೂ ನಿಂಗಪ್ಪ ಬೆಂಬಲಿಗರು ಈ ವೇಳೆ ಹಾಜರಿದ್ದು ಜೈಕಾರ ಕೂಗಿದರು.