ಕುಮಾರಸ್ವಾಮಿ ಸಿ.ಎಂ ಮತ್ತು ಪರಮೇಶ್ವರ ಡಿಸಿಎಂ ಆಗಿ ವಿಧಾನಸೌಧದ ಎದುರು ಪ್ರಮಾಣ.

‘ಸಭಾಧ್ಯಕ್ಷರ (ಸ್ಪೀಕರ್‌) ಸ್ಥಾನ ಕಾಂಗ್ರೆಸ್‌ ಪಾಲಾಗಲಿದ್ದು, ಕೆ.ಆರ್‌. ರಮೇಶ್‌ ಕುಮಾರ್‌ ಆ ಹುದ್ದೆ ಅಲಂಕರಿಸಲಿದ್ದಾರೆ. ಉಪ ಸಭಾಧ್ಯಕ್ಷ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದೇವೆ. ಸಂಪುಟದಲ್ಲಿ 20 ಸ್ಥಾನಗಳು ಕಾಂಗ್ರೆಸ್‌ಗೆ ಮತ್ತು 12 ಸ್ಥಾನಗಳು ಜೆಡಿಎಸ್‌ಗೆ ಸಿಗಲಿದೆ’ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಬೆಂಗಳೂರು: ಕೊಡುಕೊಳ್ಳುವಿಕೆ ಜಟಾಪಟಿಯ ಮಧ್ಯೆಯೇ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಕೂಟ ಸರ್ಕಾರ ಬುಧವಾರ ಅಸ್ತಿತ್ವಕ್ಕೆ ಬರಲಿದೆ. ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮತ್ತು  ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಉಪ ಮುಖ್ಯಮಂತ್ರಿ (ಡಿಸಿಎಂ) ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ವಿಧಾನಸೌಧದ ಮುಂಭಾಗದಲ್ಲಿ ಸಂಜೆ 4.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ತಾಜ್‌ ವೆಸ್ಟೆಂಡ್‌ನಲ್ಲಿ ಮಂಗಳವಾರ ಸಂಜೆ ನಡೆದ ಎರಡು ಪಕ್ಷಗಳ ಹಿರಿಯ ನಾಯಕರ ಸಭೆಯಲ್ಲಿ ಪ್ರಮಾಣ ವಚನ ಕಾರ್ಯಕ್ರಮದ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಯಿತು.

ಸದನದಲ್ಲಿ ಇದೇ 25ರಂದು ಕುಮಾರಸ್ವಾಮಿ ವಿಶ್ವಾಸ ಮತ ಸಾಬೀತುಪಡಿಸಲಿದ್ದಾರೆ. 28ರಂದು ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಇದೆ.

‘ಸಭಾಧ್ಯಕ್ಷರ (ಸ್ಪೀಕರ್‌) ಸ್ಥಾನ ಕಾಂಗ್ರೆಸ್‌ ಪಾಲಾಗಲಿದ್ದು, ಕೆ.ಆರ್‌. ರಮೇಶ್‌ ಕುಮಾರ್‌ ಆ ಹುದ್ದೆ ಅಲಂಕರಿಸಲಿದ್ದಾರೆ. ಉಪ ಸಭಾಧ್ಯಕ್ಷ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದೇವೆ. ಸಂಪುಟದಲ್ಲಿ 20 ಸ್ಥಾನಗಳು ಕಾಂಗ್ರೆಸ್‌ಗೆ ಮತ್ತು 12 ಸ್ಥಾನಗಳು ಜೆಡಿಎಸ್‌ಗೆ ಸಿಗಲಿದೆ’ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಸದನದಲ್ಲಿ ವಿಶ್ವಾಸ ಮತ ಸಾಬೀತುಪಡಿಸಿದ ಬಳಿಕ ಸಮನ್ವಯ ಸಮಿತಿ ರಚನೆ ಆಗಲಿದೆ. ಲಿಂಗಾಯತರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

14 ವರ್ಷಗಳ ಬಳಿಕ ರಾಜ್ಯದಲ್ಲಿ ಮತ್ತೆ ‘ತೆನೆ ಹೊತ್ತ ಮಹಿಳೆ’ ಜೊತೆ ಕಾಂಗ್ರೆಸ್‌ ‘ಕೈ’ ಜೋಡಿಸುತ್ತಿದೆ. 2004ರಲ್ಲಿ ಧರ್ಮಸಿಂಗ್‌ ನೇತೃತ್ವದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚಿಸಿತ್ತು. ಆಗ ಜೆಡಿಎಸ್‌ನಲ್ಲಿದ್ದ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಗಾದಿ ಏರಿದ್ದರು.

ಕುಮಾರಸ್ವಾಮಿ ಬಹುಮತ ಸಾಬೀತು ಪಡಿಸುವವರೆಗೆ ಕಾಂಗ್ರೆಸ್‌ ಶಾಸಕರು ಹಿಲ್ಟನ್‌ ರೆಸಾರ್ಟ್‌ನಲ್ಲಿ, ಜೆಡಿಎಸ್‌ ಶಾಸಕರು ದೇವನಹಳ್ಳಿ ಬಳಿಯ ರೆಸಾರ್ಟ್‌ ಒಂದರಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಬುಧವಾರ ಕುಮಾರ ಸ್ವಾಮಿ ಮಾತ್ರ ಪ್ರಮಾಣ ಸ್ವೀಕರಿಸುತ್ತಾರೆ ಮಾಹಿತಿ ಇತ್ತು. ಆದರೆ, ಮಂಗಳವಾರ ಬೆಳಿಗ್ಗೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ, ಪಕ್ಷದಿಂದಲೂ ಒಂದಿಬ್ಬರು ಪ್ರಮಾಣ ವಚನ ಸ್ವೀಕರಿಸಲೇಬೇಕು ಎಂದು ಶಾಸಕರು ಪಟ್ಟು ಹಿಡಿದರು.

ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಸಭೆಯಲ್ಲಿದ್ದಾಗಲೇ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಕರೆ ಮಾಡಿ, ಶಾಸಕರ ಸಲಹೆಯನ್ನು ತಿಳಿಸಿದರು. ರಾಹುಲ್ ಸಹ ಈ ಅಭಿಪ್ರಾಯವನ್ನು ಒಪ್ಪಿ ಪರಮೇಶ್ವರ್ ಒಬ್ಬರು ಪ್ರಮಾಣ ವಚನ ಸ್ವೀಕರಿಸಲು ಹಸಿರು ನಿಶಾನೆ ತೋರಿದರೆಂದು ತಿಳಿದುಬಂದಿದೆ.

ಸಚಿವ ಸ್ಥಾನಕ್ಕೆ ಪೈಪೋಟಿ: ಕಾಂಗ್ರೆಸ್‌ಗೆ ಹಂಚಿಕೆಯಾದ ಸಚಿವ ಸ್ಥಾನಗಳಿಗೆ 40ಕ್ಕೂ ಹೆಚ್ಚು ಆಕಾಂಕ್ಷಿಗಳು ಪೈಪೋಟಿ ನಡೆಸಿದ್ದಾರೆ. ಜಾತಿ, ಧರ್ಮ, ಪ್ರದೇಶವಾರು ಹೆಸರಲ್ಲಿ ಮಂತ್ರಿ ಸ್ಥಾನಕ್ಕೆ ಪ್ರಯತ್ನ ನಡೆಸಿರುವುದು ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.

ಪರಮೇಶ್ವರ ಅವರಿಗೆ ಡಿಸಿಎಂ ಸ್ಥಾನ ಗಟ್ಟಿಯಾಗಿದ್ದರೂ ಆರು ಮಂದಿ ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಕೊನೆ ಹಂತದಲ್ಲಿ ಡಿ.ಕೆ. ಶಿವಕುಮಾರ್, ಎಂ.ಬಿ ಪಾಟೀಲ, ಶಾಮನೂರು ಶಿವಶಂಕರಪ್ಪ, ಎಸ್.ಆರ್. ಪಾಟೀಲ, ಸತೀಶ್ ಜಾರಕಿಹೊಳಿ, ಆರ್. ರೋಷನ್ ಬೇಗ್ ಹೆಸರು ಈ ಪಟ್ಟಿಗೆ ಸೇರ್ಪಡೆಯಾಗಿತ್ತು. ದಕ್ಷಿಣ ಭಾಗಕ್ಕೆ ಡಿಸಿಎಂ ಕೊಡುವುದಾದರೆ, ಉತ್ತರ ಕರ್ನಾಟಕ ಭಾಗಕ್ಕೂ ನೀಡಿ ಎಂಬ ಒತ್ತಾಯ ಬಲವಾಗುತ್ತಿದೆ.

ಮಹಿಳೆಯರ ಕೋಟಾದಲ್ಲೂ ಪೈಪೋಟಿ

ಮಹಿಳೆಯರ ಕೋಟಾದಲ್ಲಿ ಸಚಿವರಾಗಲು ತೆರೆಮರೆ ಕಸರತ್ತು ಆರಂಭವಾಗಿದೆ. ಈ ಪೈಕಿ ಲಕ್ಷ್ಮಿ ಹೆಬ್ಬಾಳ್ಕರ ಹೆಸರು ಮುಂಚೂಣಿಯಲ್ಲಿದೆ. ಇವರ ಹೊರತಾಗಿ ಅಂಜಲಿ ನಿಂಬಾಳ್ಕರ, ರೂಪಾ ಶಶಿಧರ್ ಹಾಗೂ ದಿವಂಗತ ಖಮರುಲ್ ಇಸ್ಲಾಂ ಪತ್ನಿ ಕತೀಜಾ ಫಾತಿಮಾ ನಡುವೆ ಪೈಪೋಟಿ ನಡೆದಿದೆ.

ಪಕ್ಷದ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮತ್ತು ಡಿ.ಕೆ.ಶಿವಕುಮಾರ್ ಮೂಲಕ ದೆಹಲಿ ಮಟ್ಟದಲ್ಲೂ ಹೆಬ್ಬಾಳ್ಕರ ಲಾಬಿ ಮಾಡುತ್ತಿದ್ದಾರೆ. ಖಾನಾಪುರದ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ತಮ್ಮ ಸಂಬಂಧಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಪ್ರಭಾವ ಬಳಸಿದ್ದಾರೆ ಎನ್ನಲಾಗಿದೆ. ಸಂಸದ ಕೆ.ಎಚ್‌. ಮುನಿಯಪ್ಪ ತಮ್ಮ ಮಗಳು ರೂಪಾಗೆ ಮಂತ್ರಿ ಸ್ಥಾನ ಕೊಡುವಂತೆ ಪಟ್ಟು ಹಿಡಿದಿದ್ದಾರೆ.

ದಲಿತ ಸಮುದಾಯಕ್ಕೆ ಡಿಸಿಎಂ ಪಟ್ಟ

ರಾಜ್ಯದಲ್ಲೇ ಮೊದಲ ಬಾರಿಗೆ ದಲಿತ ಸಮುದಾಯಕ್ಕೆ ಸೇರಿದವರೊಬ್ಬರು ಉಪ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲಿದ್ದಾರೆ.

2013ರಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅವರು ಉಪ ಮುಖ್ಯಮಂತ್ರಿ ಪಟ್ಟಕ್ಕೆ ಪಟ್ಟು ಹಿಡಿದಿದ್ದರು. ಚುನಾವಣೆಯಲ್ಲಿ ಸೋತಿದ್ದರಿಂದ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಮೈತ್ರಿ ಸರ್ಕಾರದಲ್ಲಿ ಅವರಿಗೆ ಈ ಭಾಗ್ಯ ಸಿಕ್ಕಿದೆ.

1993ರಲ್ಲಿ ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾಗಿದ್ದಾಗ ಎಸ್.ಎಂ. ಕೃಷ್ಣ ಉಪಮುಖ್ಯಮಂತ್ರಿಯಾಗಿದ್ದರು. 1996ರಲ್ಲಿ ಜೆ.ಎಚ್‌.ಪಟೇಲ್‌ ಹಾಗೂ 2004ರಲ್ಲಿ ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯಗೆ ಈ ಪಟ್ಟ ಲಭಿಸಿತ್ತು. 2006ರಲ್ಲಿ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ ಬಿ.ಎಸ್. ಯಡಿಯೂರಪ್ಪ ಹಾಗೂ 2012ರಲ್ಲಿ ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾದಾಗ ಕೆ.ಎಸ್. ಈಶ್ವರಪ್ಪ ಹಾಗೂ ಆರ್. ಅಶೋಕ್ ಉಪ ಮುಖ್ಯಮಂತ್ರಿಗಳಾಗಿದ್ದರು.

ಸಾಲಮನ್ನಾ, ಆತಂಕ ಬೇಡ: ಎಚ್‌ಡಿಕೆ ಭರವಸೆ

ಚಿಕ್ಕಮಗಳೂರು/ಬೆಂಗಳೂರು: ‘ರಾಷ್ಟ್ರೀಕೃತ ಬ್ಯಾಂಕ್ ಮಾತ್ರವಲ್ಲ, ಖಾಸಗಿಯವರ ಬಳಿಯೂ ರೈತರು ಮಾಡಿರುವ ಸಾಲ ಮನ್ನಾ ಮಾಡುವ ಚಿಂತನೆ ಇದೆ. ಈ ವಿಚಾರದಲ್ಲಿ‌, ಸಚಿವ ಸಂಪುಟ ರಚನೆಯಾದ ನಂತರ ಮಿತ್ರ ಪಕ್ಷದವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ’ ಎಂದು ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜೆಡಿಎಸ್‌ಗೆ ಬಹುಮತ ನೀಡಿದ್ದರೆ ಪ್ರಮಾಣ ವಚನ ಸ್ವೀಕರಿಸಿದ 24 ಗಂಟೆಗಳಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡುತ್ತಿದ್ದೆ. ಈಗ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ರಚನೆ ಮಾಡುತ್ತಿದ್ದೇವೆ. ಎರಡೂ ಪಕ್ಷಗಳು ಜೊತೆಯಾಗಿ ಸಾಗಬೇಕಿದೆ. ಹೀಗಾಗಿ, ಕಾಂಗ್ರೆಸ್‌ ಅನ್ನು ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನ ಕೈಗೊಳ್ಳಬೇಕಿದೆ’ ಎಂದು ಹೇಳಿದ್ದರು.

‘ಜೆಡಿಎಸ್‌ಗೆ ಪೂರ್ಣ ಬಹುಮತ ನೀಡಿದರೆ ರೈತರ ಸಂಪೂರ್ಣ ಸಾಲಮನ್ನಾ ಮಾಡುತ್ತೇನೆ ಎಂದು ಜನರನ್ನು ಪರಿಪರಿಯಾಗಿ ಬೇಡಿಕೊಂಡಿದ್ದೆ. ಆದರೆ, ಜನ ನಮ್ಮನ್ನು ತಿರಸ್ಕರಿಸಿರುವುದನ್ನು ಗಮನಿಸಿದರೆ ಅವರಿಗೆ ಸಾಲಮನ್ನಾ ಬೇಕಿಲ್ಲವೇನೋ ಎಂದೆನಿಸಿದೆ’ ಎಂದು ಉತ್ತರಿಸಿದರು.

‘ಸಾಲಮನ್ನಾ ಮಾಡಲು ಕುಮಾರಸ್ವಾಮಿ ಹಿಂದೇಟು’ ಎಂದು ಬಿಜೆಪಿ ಕಟುವಾಗಿ ಟೀಕಿಸಿತ್ತು. ಇದರ ಬೆನ್ನಲ್ಲೇ, ಬುಧವಾರ ಸಂಜೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಸಾಲಮನ್ನಾ ಮಾಡುವ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ. ರೈತರು ಆತಂಕ ಪಡುವ ಅಗತ್ಯವಿಲ್ಲ’ ಎಂದು ತಿಳಿಸಿದ್ದಾರೆ.

ಮೈತ್ರಿ ಸರ್ಕಾರ– ಹಂಚಿಕೆ ಸೂತ್ರ

ಜೆಡಿಎಸ್‌– ಮುಖ್ಯಮಂತ್ರಿ ಸೇರಿ 12 ಸಚಿವ ಸ್ಥಾನ

ಕಾಂಗ್ರೆಸ್‌– ಉಪ ಮುಖ್ಯಮಂತ್ರಿ ಸೇರಿ 22 ಸಚಿವ ಸ್ಥಾನ

ಸ್ಪೀಕರ್‌– ಕಾಂಗ್ರೆಸ್‌

ಡೆಪ್ಯುಟಿ ಸ್ಪೀಕರ್‌– ಜೆಡಿಎಸ್‌

* ಸಂಪುಟ ವಿಸ್ತರಣೆ ಸಂಬಂಧ ತೀರ್ಮಾನ ತೆಗೆದುಕೊಂಡಿದ್ದೇವೆ. ಯಾವುದೇ ಭಿನ್ನಾಭಿಪ್ರಾಯವಿಲ್ಲ.  ಇದೇ 25 ರಂದು ಸಭಾಧ್ಯಕ್ಷರು ಮತ್ತು ಉಪಸಭಾಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ

–ಎಚ್‌.ಡಿ. ಕುಮಾರಸ್ವಾಮಿ, ನಿಯೋಜಿತ ಮುಖ್ಯಮಂತ್ರಿ