ಎಚ್‌.ಡಿ.ರೇವಣ್ಣ (60), ಜೆಡಿಎಸ್‌

ರಾಜಕೀಯ ಜೀವನ ಶುರುವಾಗಿದ್ದು 1985ರಲ್ಲಿ. ಮೊದಲು ಜಿಲ್ಲಾ ಪರಿಷತ್‌ಗೆ ಆಯ್ಕೆ. 1994ರಲ್ಲಿ ಹಾಸನ ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಹಾಮೂಲ್‌) ಅಧ್ಯಕ್ಷ. 1994ರಲ್ಲಿ ಹೊಳೆನರಸೀಪುರ ಕ್ಷೇತ್ರದಿಂದ ಗೆದ್ದು ವಿಧಾನಸಭೆ ಪ್ರವೇಶ. ಜೆ.ಎಚ್‌.ಪಟೇಲ್‌ ಸಂಪುಟದಲ್ಲಿ ವಸತಿ ಸಚಿವ. 1999ರಲ್ಲಿ ಸೋಲು ಕಂಡ ಅವರು 2004, 2008, 2013, 2018ರಲ್ಲಿ ಶಾಸಕರಾದರು. 2006–07ರ ಸಮ್ಮಿಶ್ರ ಸರ್ಕಾರದಲ್ಲಿ ಇಂಧನ, ಲೋಕೋಪಯೋಗಿ ಸಚಿವ.

 

ಬಂಡೆಪ್ಪ ಕಾಶೆಂಪುರ (54), ಜೆಡಿಎಸ್

ಮೂರು ಬಾರಿ ಶಾಸಕರಾದ ಅನುಭವ ಹೊಂದಿರುವ ಬೀದರ್ ದಕ್ಷಿಣ ಕ್ಷೇತ್ರದ ಕಾಶೆಂಪುರ, ಈಗ 2ನೇ ಸಲ ಸಚಿವರಾಗಿ ಆಯ್ಕೆಯಾಗಿದ್ದಾರೆ. 1999ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಪಡೆಯುವ ಮೂಲಕ ರಾಜಕೀಯಕ್ಕೆ ಪದಾರ್ಪಣೆ ಮಾಡಿದರು. ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಹೊಸದಾಗಿ ಉದಯಿಸಿದ ಬೀದರ್ ದಕ್ಷಿಣ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಇವರು, ಜೆಡಿಎಸ್‌ ಅಭ್ಯರ್ಥಿಯಾಗಿ 2004, 2008 ಹಾಗೂ 2018ರಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ–ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಕೆಲಸ ನಿರ್ವಹಿಸಿದ್ದರು.

 

ಜಿ.ಟಿ.ದೇವೇಗೌಡ (68), ಜೆಡಿಎಸ್‌

ಒಕ್ಕಲಿಗರ ಪ್ರಾಬಲ್ಯವುಳ್ಳ ಚಾಮುಂಡೇಶ್ವರಿ ಕ್ಷೇತ್ರದ ಜಿ.ಟಿ.ದೇವೇಗೌಡ, ಎಪಿಎಂಸಿ ಹಾಗೂ ಸಹಕಾರ ಕ್ಷೇತ್ರಗಳ ಚುನಾವಣೆಗಳಲ್ಲಿ ಸ್ಪರ್ಧಿಸಿ ರಾಜಕೀಯ ಪ್ರವೇಶ ಮಾಡಿದರು. ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಸಹಕಾರ ಸಚಿವರಾಗಿದ್ದರು. ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರನ್ನೇ ಸೋಲಿಸುವ ಮೂಲಕ ಈ ಸಲದ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆದರು

 

ಡಿ.ಸಿ.ತಮ್ಮಣ್ಣ (75), ಜೆಡಿಎಸ್‌

ರಾಜಕೀಯ ಪ್ರವೇಶಕ್ಕೆ ಮೊದಲು ಕರ್ನಾಟಕ ರಾಜ್ಯ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಮುಖ್ಯ ಅಭಿವೃದ್ಧಿ ಅಧಿಕಾರಿ. ಎಚ್‌.ಡಿ.ದೇವೇಗೌಡರ ಬೀಗರೂ ಆಗಿರುವ ಅವರು ಕಿರುಗಾವಲು ಕ್ಷೇತ್ರದಲ್ಲಿ ಒಮ್ಮೆ, ಮದ್ದೂರು ಕ್ಷೇತ್ರದಲ್ಲಿ ಮೂರು ಬಾರಿ ಶಾಸಕ. ಕಾಂಗ್ರೆಸ್‌, ಜೆಡಿಎಸ್‌ನಿಂದ ತಲಾ ಎರಡು ಬಾರಿ ಆಯ್ಕೆ.

1999ರಲ್ಲಿ ಕಿರುಗಾವಲು ಕ್ಷೇತ್ರದ ಕಾಂಗ್ರೆಸ್‌ ಶಾಸಕರಾಗಿ ಆಯ್ಕೆ. 2004ರಲ್ಲಿ ಮದ್ದೂರು ಕ್ಷೇತ್ರಕ್ಕೆ ವಲಸೆ ಬಂದು ಗೆಲುವು. ನಂತರ ಜೆಡಿಎಸ್‌ ಸೇರಿ 2013, 2018ರಲ್ಲಿ ಗೆಲುವು.

 

ಎಂ.ಸಿ.ಮನಗೂಳಿ (82), ಜೆಡಿಎಸ್

1975ರಲ್ಲಿ ವಿಜಯಪುರದ ಸಿಂದಗಿ ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷರಾಗಿ ಆಯ್ಕೆಯಾದ ಮನಗೂಳಿ, ನಂತರ ಪುರಸಭೆ ಸದಸ್ಯರಾಗಿಯೂ ಕೆಲಸ ಮಾಡಿದರು. 1989ರಲ್ಲಿ ಸಮಾಜವಾದಿ ಜನತಾ ಪಕ್ಷದಿಂದ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲುಂಡರು. 1994ರಲ್ಲಿ ಜನತಾದಳದ ಶಾಸಕರಾಗಿ ಆಯ್ಕೆಯಾದ ಇವರು,  ಇದೇ ಅವಧಿಯಲ್ಲಿ ಜೆ.ಎಚ್‌.ಪಟೇಲ್‌ ಸಂಪುಟದಲ್ಲಿ ಸಚಿವ ಸ್ಥಾನ ಪಡೆದರು. 1999, 2004, 2008, 2013ರ ಚುನಾವಣೆಗಳಲ್ಲಿ ಸೋಲು ಅನುಭವಿಸಿ, 2018ರಲ್ಲಿ ಜೆಡಿಎಸ್ ಶಾಸಕರಾಗಿ ಆಯ್ಕೆಯಾದರು.

 

 

ಎಸ್.ಆರ್.ಶ್ರೀನಿವಾಸ್ (56), ಜೆಡಿಎಸ್‌

ಗುಬ್ಬಿ ತಾಲ್ಲೂಕು ಸಿ.ಎಸ್.ಪುರ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸಚಿವರಾಗಿದ್ದರು. 2004ರಲ್ಲಿ ಗುಬ್ಬಿ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಪ್ರಥಮ ಪ್ರಯತ್ನದಲ್ಲೇ ಗೆಲುವು ಸಾಧಿಸಿದರು. ಬಳಿಕ 2008, 2013, 2018ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸತತವಾಗಿ ಗೆಲುವು ಸಾಧಿಸಿದ್ದಾರೆ. ಬಿ.ಎ ಪದವಿ ಪಡೆದಿದ್ದಾರೆ.

 

 

ವೆಂಕಟರಾವ್ ನಾಡಗೌಡ (61), ಜೆಡಿಎಸ್

ಸಿಂಧನೂರು ಕ್ಷೇತ್ರದ ನಾಡಗೌಡ, ಎರಡು ಬಾರಿ ಶಾಸಕರಾದ (2008, 2018) ಅನುಭವ ಹೊಂದಿದ್ದಾರೆ. 2013ರ ಚುನಾವಣೆಯಲ್ಲಿ ಪರಾಜಿತರಾಗಿದ್ದರು.

 

 

ಸಿ.ಎಸ್‌.ಪುಟ್ಟರಾಜು (54), ಜೆಡಿಎಸ್‌

ಮೇಲುಕೋಟೆ ಕ್ಷೇತ್ರದಲ್ಲಿ 2004, 2008 ಹಾಗೂ 2018ರ ಚುನಾವಣೆಗಳಲ್ಲಿ ಗೆಲುವು. 1999 ಹಾಗೂ 2013ರಲ್ಲಿ ಸೋಲು. 2013ರ ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ನಟಿ ರಮ್ಯಾ ಎದುರು ಪರಾಭವ. 2014ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ರಮ್ಯಾ ವಿರುದ್ಧ ಗೆಲುವು. ಲೋಕಸಭಾ ಸದಸ್ಯತ್ವ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು

 

 

ಸಾ.ರಾ.ಮಹೇಶ್‌ (52), ಜೆಡಿಎಸ್‌

2004ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವ ಹೊಂದಿದ್ದ ಮಹೇಶ್‌, ನಂತರ ಜೆಡಿಎಸ್ ಸೇರಿ ಹ್ಯಾಟ್ರಿಕ್ ಗೆಲುವು ಸಾಧಿಸಿದರು. ವಿಧಾನಸಭೆಯ ಲೆಕ್ಕಪತ್ರಗಳ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿರುವ ಅನುಭವ ಇವರಿಗಿದೆ.

 

 

ಎನ್‌.ಮಹೇಶ್‌ (62), ಬಿಎಸ್‌ಪಿ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಜಿಲ್ಲಾ ಅಧಿಕಾರಿಯಾಗಿ ಕೆಲಸ ಮಾಡಿರುವ ಎನ್‌.ಮಹೇಶ್, ಕಾನ್ಶೀರಾಂ ಪ್ರಭಾವಕ್ಕೆ ಒಳಗಾಗಿ ಸರ್ಕಾರಿ ಹುದ್ದೆ ತೊರೆದು ಬಿಎಸ್‌ಪಿ (ಬಹುಜನ ಸಮಾಜ ಪಕ್ಷ) ಸೇರಿದರು. 2004, 2008 ಹಾಗೂ 2013ರ ಚುನಾವಣೆಗಳಲ್ಲಿ ಕೊಳ್ಳೇಗಾಲ ಕ್ಷೇತ್ರದಿಂದ ಬಿಎಸ್‌ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ಅವರು, ಈ ಬಾರಿ ಚೊಚ್ಚಲ ಗೆಲುವು ದಾಖಲಿಸಿದ್ದಾರೆ.

source: Prajavani

 

By R

You missed