ಜಗಳೂರು: ಕಳೆದ 5 ವರ್ಷಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹ 1.42 ಲಕ್ಷ ಕೋಟಿಯಷ್ಟು ಸಾಲ ಮಾಡುವ ಮೂಲಕ ರಾಜ್ಯದ ಜನತೆಯನ್ನು ಸಾಲದಲ್ಲಿ ಮುಳುಗಿಸಿದ್ದಾರೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ಜೆಡಿಎಸ್‌ ಪಕ್ಷದ ವತಿಯಿಂದ ಪಟ್ಟಣದಲ್ಲಿ ಶನಿವಾರ 
ಹಮ್ಮಿಕೊಂಡಿದ್ದ ‘ವಿಕಾಸ ಪರ್ವ’ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘68 ವರ್ಷಗಳಲ್ಲಿ ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ₹ 1.3 ಲಕ್ಷ ಕೋಟಿ ಸಾಲ 
ಮಾಡಿದ್ದವು. ಆದರೆ, ಸಿದ್ದರಾಮಯ್ಯ ಇದನ್ನೆಲ್ಲಾ ಮೀರಿ 
ಕೇವಲ ಐದು ವರ್ಷಗಳಲ್ಲಿ ₹ 1.42 ಲಕ್ಷ ಕೋಟಿ ಸಾಲ ಮಾಡಿದ್ದಾರೆ. 
ರಾಜ್ಯದ ಜನತೆಗೆ ದೊಡ್ಡ ಹೊರೆ ಹೊರಿಸಿದ್ದಾರೆ. ನೀರಾವರಿ ಮುಂತಾದ ಇಲಾಖೆಗಳ ಪುಟಗಟ್ಟಲೆ ಜಾಹೀರಾತಿಗಾಗಿ ₹ 1 ಸಾವಿರ ಕೋಟಿ ಖರ್ಚು ಮಾಡಲಾಗಿದೆ. ಯಾವುದೇ ಸಾಧನೆ ಇಲ್ಲದಿದ್ದರೂ ಭರಪೂರ ಜಾಹಿರಾತುಗಳಲ್ಲಿ ಮುಖ್ಯಮಂತ್ರಿ ಮತ್ತು ಸಚಿವರು ಮೇಕಪ್‌ ಮಾಡಿಕೊಂಡು ಜನರ ದುಡ್ಡಿನಲ್ಲಿ ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ರಾಜ್ಯದಲ್ಲಿ 4 ವರ್ಷಗಳಿಂದ ಬರಗಾಲ ಮತ್ತು ಅತಿವೃಷ್ಟಿಯಿಂದ ₹ 58 ಸಾವಿರ ಕೋಟಿ ನಷ್ಟ ಆಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ₹ 50 ಸಾವಿರದವರೆಗಿನ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿ 9 ತಿಂಗಳಾದರೂ ಸಂಪೂರ್ಣ ಹಣ ಬಿಡುಗಡೆ ಮಾಡಿಲ್ಲ. ಕೇವಲ ₹ 2 ಸಾವಿರ ಕೋಟಿ ಕೊಟ್ಟಿದ್ದು, ಉಳಿದ ₹ 6 ಸಾವಿರ ಕೋಟಿ ಹಣ ಬಂದಿಲ್ಲ. ನಾನು ಸಿಎಂ ಆಗಿದ್ದಾಗ ರೈತರ ₹ 2,500 ಕೋಟಿ ಸಾಲ ಮನ್ನಾ ಮಾಡಿದ್ದೆ. ಆ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಮನ್ನಾ ಮಾಡಲು ದುಡ್ಡು ಎಲ್ಲಿದೆ? ಎಂದು ತಕರಾರರು ತೆಗೆದಿದ್ದರು’ ಎಂದು ಕುಮಾರಸ್ವಾಮಿ ಸ್ಮರಿಸಿದರು.

 

‘ಮತದಾರರಾದ ನೀವುಗಳು ಎಲ್ಲರಿಗೂ ಅವಕಾಶ ಕೊಟ್ಟಿದ್ದೀರಿ. ನನಗೂ ಒಮ್ಮೆ ಅವಕಾಶ ಕೊಟ್ಟು ನೋಡಿ. ಅಧಿಕಾರಕ್ಕೆ ಬಂದ 24 ಗಂಟೆಯ ಒಳಗೆ ಎಲ್ಲಾ ಬ್ಯಾಂಕ್‌ಗಳಲ್ಲಿರುವ ರೈತರ 51 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡುತ್ತೇನೆ. ನಂತರ ₹ 25 ಸಾವಿರ ಕೋಟಿ ಅನುದಾನದಲ್ಲಿ ಇಸ್ರೇಲ್‌ ಆಧಾರಿತ ಬೆಳೆ ಪದ್ಧತಿ ಬದಲಾವಣೆಗೆ ಕ್ರಮ ಕೈಗೊಳ್ಳಲಾಗುವುದು. ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು ಪರಸ್ಪರ ಟೀಕಿಸುವುದರಿಂದ ಜನರಿಗೆ ಲಾಭವಿಲ್ಲ. ಉದ್ಯೋಗ, ಕುಡಿಯುವ ನೀರು ಮತ್ತು ಅಭಿವೃದ್ಧಿಯ ಬಗ್ಗೆ ಚರ್ಚೆ ಆಗುತ್ತಿಲ್ಲ’ ಎಂದು ವಿಷಾದಿಸಿದರು.

ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಕೆ.ಬಿ. ಕಲ್ಲೇರುದ್ರೇಶ್‌, ‘ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ತಾಲ್ಲೂಕಿನ 107 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ₹ 64 ಕೋಟಿ ವೆಚ್ಚದ ಯೋಜನೆ ಮಂಜೂರು ಮಾಡಿದ್ದರು. ಆದರೆ, ನಂತರದ ಅವಧಿಯಲ್ಲಿ ಮಹತ್ವದ ಯೋಜನೆ ನನೆಗುದಿಗೆ ಬಿದ್ದಿದೆ. ಜಿಲ್ಲೆಯಲ್ಲಿ ಪಕ್ಷ ಬಿಟ್ಟು ಹೋದವರು ಮತ್ತೆ ಮರಳಬೇಕು. ನಾವುಗಳು ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಪಕ್ಷ ಸಂಘಟಿಸಬೇಕು’ ಎಂದು ಮನವಿ ಮಾಡಿದರು.

ಜೆಡಿಎಸ್ ಅಭ್ಯರ್ಥಿ ದೇವೇಂದ್ರಪ್ಪ, ‘ನಾನು ಸ್ಥಳೀಯನಾಗಿದ್ದು, ಬಡ ಕುಟುಂಬದಿಂದ ಬಂದಿದ್ದೇನೆ. ಇಲ್ಲಿನ ಸಮಸ್ಯೆಗಳ ಸ್ಪಷ್ಟ ಅರಿವು ಇದೆ. ನನ್ನನ್ನು ಆಯ್ಕೆ ಮಾಡಿದಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತೇನೆ’ ಎಂದು ಭರವಸೆ ನೀಡಿದರು.

ಜೆಡಿಎಸ್‌ ಜಿಲ್ಲಾ ಘಟಕದ 
ಅಧ್ಯಕ್ಷ ಚಿದಾನಂದಪ್ಪ, 
ಎತ್ತಿನಹಟ್ಟಿ ಗೌಡ, ತಾಲ್ಲೂಕು ಅಧ್ಯಕ್ಷ ಗುರುಸಿದ್ದಪ್ಪ, ಉಸ್ಮಾನ್ ಆಲಿ ಅವರೂ ಹಾಜರಿದ್ದರು.

By R

You missed