ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಶನಿವಾರ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿಕೆ ಕುಮಾರಸ್ವಾಮಿ ಅವರು, ರಾಜ್ಯ ಸರ್ಕಾರ ಆರ್ಥಿಕ ದಿವಾಳಿಯಾಗಿದೆ ಎಂದು ಆರೋಪಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಕಿಕ್ ಬ್ಯಾಕ್ ವ್ಯವಹಾರದಲ್ಲಿ ಹೇಗೆ ಹಣ ಹೊಡೆಯಬೇಕು ಎಂಬುದು ಸಿದ್ದರಾಮಯ್ಯ ಅವರಿಗೆ ಚೆನ್ನಾಗಿ ಗೊತ್ತು. ಧಿಕಾರಿಗಳ ಜತೆಗೆ ಡೀಲ್ ಮಾಡಿ ಹೇಗೆ ವ್ಯವಹಾರ ಕುದುರಿಸಬೇಕು, ಕಿಕ್ ಬ್ಯಾಕ್ ವ್ಯವಹಾರದಲ್ಲಿ ಹೇಗೆ ಹಣ ಹೊಡೆಯಬೇಕು ಎಂಬುದರಲ್ಲಿ ಅವರು ಪರಿಣಿತರು. ಅವರಿರುವುದೇ ಜನರ ದುಡ್ಡನ್ನು ಲೂಟಿ ಮಾಡಲು ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರ ಎಷ್ಟು ಅರ್ಥಿಕ ದಿವಾಳಿಯಾಗಿದೆ ಎಂಬುದಕ್ಕೆ ಅಂಕಿ ಅಂಶಗಳಿವೆ. ಬಿಸಿನೆಸ್ ಲೈನ್ ಇಂಗ್ಲಿಷ್ ಪತ್ರಿಕೆ ಈ ಕುರಿತು ವರದಿ ಮಾಡಿದೆ. ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲ್ಲ. ಹೀಗಾಗಿ ಹೋಗುವಾಗ ಆರ್ಥಿಕ ದಿವಾಳಿ ಮಾಡಿ ಹೋಗುತ್ತಿದ್ದಾರೆ ಎಂದು ಅರೋಪಿಸಿದರು.
ಸರ್ಕಾರದ ಆರ್ಥಿಕ ದಿವಾಳಿತನದಿಂದ ವೃದ್ಧಾಪ್ಯ, ವಿಧವಾ ವೇತನ ನಿಲ್ಲಿಸಿದ್ದಾರೆ. ಬಜೆಟ್​ನಲ್ಲಿ ಘೋಷಣೆ ಮಾಡಿರುವ ಯಾವ ಯೋಜನೆಗಳೂ ಜಾರಿಗೆ ಬರುವುದಿಲ್ಲ. ಏಕೆಂದರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಶೇ. 100ಕ್ಕೆ 100ರಷ್ಟು ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಅಧಿಕಾರ ಮತ್ತು ದುಡ್ಡಿನ ಮದ ಸಿದ್ದರಾಮಯ್ಯ ಈ ರೀತಿ ಅಹಂಕಾರದ ಮಾತುಗಳನ್ನಾಡಲು ಕಾರಣವಾಗಿದೆ. ಇದು ಬಹಳ ದಿನ ನಡೆಯುವುದಿಲ್ಲ ಎಂದರು.

By R

You missed