ರಾಷ್ಟ್ರೀಕೃತ ಬ್ಯಾಂಕ್‌ಗಳ ₹2 ಲಕ್ಷದವರೆಗಿನ ಸುಸ್ತಿಸಾಲದ ಜತೆಗೆ ₹25 ಸಾವಿರದವರೆಗಿನ ಚಾಲ್ತಿ ಬೆಳೆಸಾಲ ಮನ್ನಾದ ಸೌಲಭ್ಯವೂ ರೈತರಿಗೆ ಸಿಗಲಿದೆ. ಈ ರೀತಿಯ ಒಟ್ಟು ಸಾಲ ₹30,163 ಕೋಟಿಗಳಷ್ಟಿದ್ದು, ಇದರಿಂದಾಗಿ 23 ಲಕ್ಷ ರೈತರಿಗೆ  (17 ಲಕ್ಷ ಮಂದಿ ಸುಸ್ತಿಸಾಲ ಹಾಗೂ 6 ಲಕ್ಷ ಮಂದಿ ಚಾಲ್ತಿ ಸಾಲ ಹೊಂದಿರುವವರು) ಅನುಕೂಲವಾಗಲಿದೆ.

ಸಾಲಮನ್ನಾ ಯೋಜನೆ ಅನುಷ್ಠಾನಗೊಳಿಸಿ, ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ನೀಡಲು ಇಬ್ಬರು ಐಎಎಸ್ ಅಧಿಕಾರಿಗಳನ್ನು ನೋಡಲ್‌ ಅಧಿಕಾರಿಗಳನ್ನಾಗಿ ನೇಮಿಸಲಾಗುವುದು ಎಂದೂ ಕುಮಾರಸ್ವಾಮಿ ತಿಳಿಸಿದರು.

ನಾಲ್ಕು ವರ್ಷಗಳಲ್ಲಿ ಪಾವತಿ: ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಮುಂದಿನ ನಾಲ್ಕು ವರ್ಷಗಳಲ್ಲಿ ಸರ್ಕಾರ ಹಣ ಪಾವತಿಸಲಿದೆ. ಈ ವರ್ಷದಿಂದಲೇ ಶೇ 12ರ ದರದಲ್ಲಿ ಸಾಲದ ಮೇಲಿನ ಬಡ್ಡಿಯನ್ನು ಸರ್ಕಾರ ಪಾವತಿಸಲಿದೆ.

‘ಸಾಲ ಮನ್ನಾ ಮಾಡಲು ರಾಷ್ಟ್ರೀಕೃತ ಬ್ಯಾಂಕ್‌ಗಳು ಆರಂಭದಲ್ಲಿ ಒಪ್ಪಿದ್ದವು. ಕೆಲವರ ಮಾತು ಕೇಳಿಕೊಂಡು ಬಳಿಕ ಕೆಲವು ಬ್ಯಾಂಕ್‌ಗಳು ನಿಲುವು ಬದಲಾಯಿಸಿದವು. ಈ ರೀತಿ ಮಾಡಿದವರಿಗೆ ಹಾಗೂ ದಾರಿ ತಪ್ಪಿಸಿದವರಿಗೆ ಒಳ್ಳೆಯದಾಗಲಿ. ಅವರಿಗೆ ಉಡುಗೊರೆ ನೀಡುತ್ತಿದ್ದೇನೆ’ ಎಂದು ಕುಮಾರಸ್ವಾಮಿ ವ್ಯಂಗ್ಯವಾಗಿ ಹೇಳಿದರು.

‘ನಾಲ್ಕು ವರ್ಷಗಳಲ್ಲಿ ಪಾವತಿ ಮಾಡುವ ಪ್ರಸ್ತಾಪಕ್ಕೆ ಬ್ಯಾಂಕ್‌ಗಳು ಒಪ್ಪಿವೆ. ರೈತರಿಗೆ ಕೂಡಲೇ ಋಣಮುಕ್ತ ಪ್ರಮಾಣ ಪತ್ರ ನೀಡಲಾಗುತ್ತದೆ’ ಎಂದರು. ‘ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ನೀಡಲು ಈ ವರ್ಷದ ಬಜೆಟ್‌ನಲ್ಲಿ ₹6,500 ಕೋಟಿ ಇಟ್ಟಿದ್ದೇವೆ. 2019–20ರಲ್ಲಿ ₹8,656 ಕೋಟಿ, 20–21ರಲ್ಲಿ ₹7,876 ಕೋಟಿ, 21–22ರಲ್ಲಿ ₹7,131 ಕೋಟಿ ಪಾವತಿ ಮಾಡಲಿದ್ದೇವೆ’ ಎಂದರು. ಮೂರು ತಿಂಗಳಲ್ಲಿ ಆದಾಯ ಕ್ರೋಡೀಕರಣ ಅತ್ಯುತ್ತಮವಾಗಿದೆ. ಬ್ಯಾಂಕ್‌ಗಳಿಗೆ ಹಣ ಪಾವತಿ ಮಾಡಲು ನಾಲ್ಕು ವರ್ಷಗಳವರೆಗೆ ಕಾಯುವುದೂ ಇಲ್ಲ ಎಂದರು.