ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬಂದರೆ ರಾಜಸ್ಥಾನ, ಮಧ್ಯ ಪ್ರದೇಶಗಳ ವಿಧಾನಸಭೆ ಚುನಾವಣೆ ಮತ್ತು 2019ರ ಲೋಕಸಭೆ ಚುನಾವಣೆಗೆ ಹಣ ಹೊಂದಿಸಲು ರಾಜ್ಯವನ್ನು ಲೂಟಿ ಮಾಡುತ್ತದೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭಾನುವಾರ ಬಹಿರಂಗ ಪತ್ರ ಬರೆದಿರುವ ಅವರು, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಪಾಲಿಗೆ ಸಿದ್ದರಾಮಯ್ಯ ಮತ್ತು ಕೆಪಿಸಿಸಿಯು ಎಟಿಎಂ ಇದ್ದಂತೆ ಎಂದು ಹೇಳಿದ್ದಾರೆ.

ರಾಜ್ಯದ ಹಣ ಲೂಟಿ ಆಗುವುದನ್ನು ತಪ್ಪಿಸಬೇಕು. ಇಲ್ಲವಾದಲ್ಲಿ ಕಾಂಗ್ರೆಸ್‌ಗೆ ಹಾಕುವ ಪ್ರತಿಯೊಂದು ಮತವೂ ಲೂಟಿಕೋರರಿಗೆ ಪ್ರೋತ್ಸಾಹವಾಗುತ್ತದೆ. ಈ ಬಗ್ಗೆ ರಾಜ್ಯದ ಜನ ಎಚ್ಚರ ವಹಿಸಬೇಕು ಎಂದೂ ಹೇಳಿದ್ದಾರೆ.

‘ಜೆಡಿಎಸ್‌ಗೆ ಹಾಕುವ ಪ್ರತಿ ಮತವೂ ಬಿಜೆಪಿಯನ್ನು ಬೆಂಬಲಿಸಿದಂತೆ, ಇದರಿಂದ ಕೋಮುವಾದ ಬೆಂಬಲಿಸಿದಂತೆ ಆಗುತ್ತದೆ ಎಂದು ನೀವು ಹೇಳಿದ್ದೀರಿ. ಆದರೆ, ಜಾತಿ, ಧರ್ಮ, ಸಮುದಾಯಗಳನ್ನು ಒಡೆಯುವುದೇ ನಿಮ್ಮ ಜಾತ್ಯತೀತತೆ. ನಿಮ್ಮಂಥ ಡೋಂಗಿ ಜಾತ್ಯತೀತತೆಯನ್ನು ನನ್ನ ಬಳಿ ಬಿಟ್ಟುಕೊಂಡಿಲ್ಲ. ಜೆಡಿಎಸ್‌ಗೆ ಬೀಳುವ ಪ್ರತಿ ಮತವೂ ಬಿಜೆಪಿಗೆ ಸಿಗುವ ಗೆಲುವಲ್ಲ. ಕಾಂಗ್ರೆಸ್‌ನ ಸೋಲು. ಆದ ಕಾರಣ ನಮಗೆ ಮತ ನೀಡದಂತೆ ಹೇಳಿಕೆ ನೀಡುತ್ತಿದ್ದೀರಿ’ ಎಂದು ಕುಮಾರಸ್ವಾಮಿ ಪತ್ರದಲ್ಲಿ ಹೇಳಿದ್ದಾರೆ.

‘ದೇವೇಗೌಡ ಮತ್ತು ನನ್ನ ವಿರುದ್ಧ ದ್ವೇಷದಿಂದ ಮಾತನಾಡುತ್ತಿದ್ದೀರಿ. ಆದ್ದರಿಂದ ಬಹಿರಂಗ ಪತ್ರ ಬರೆದಿದ್ದೇನೆ. ಪದೇ ಪದೇ ಅವರಪ್ಪನಾಣೆ ಎಂದು ಹೇಳುತ್ತೀರಿ. ತಂದೆಯೇ ಗುರು, ಗುರುವೇ ತಂದೆ. ಇದು ಭಾರತೀಯರ ನಂಬಿಕೆ‌. ಪದೇ ಪದೇ ಅವರಪ್ಪನಾಣೆ ಎನ್ನುವ ಮೂಲಕ ನೀವು ತಂದೆ ಸ್ಥಾನದಲ್ಲಿರುವವರಿಗೆ, ಗುರುಗಳಿಗೆ, ಭಾರತೀಯರ ನಂಬಿಕೆಗೆ ಭಂಗ ತಂದಿದ್ದೀರಿ’ ಎಂದಿದ್ದಾರೆ.

‘ಕಾಕತಾಳೀಯವೆಂಬಂತೆ ನನ್ನ ತಂದೆ ದೇವೇಗೌಡರು ನಿಮ್ಮ ರಾಜಕೀಯ ಗುರು. ಗುರುವಿಗೇ ಗೌರವ ಕೊಡದ, ಗುರುವಿಗೆ ನಿಷ್ಠರಲ್ಲದ ನೀವು ಜನರಿಗೆ ಗೌರವ ಕೊಡುವಿರಾ, ಜನರಿಗೆ ನಿಷ್ಠರಾಗಿರುತ್ತೀರಾ’ ಎಂದೂ ಪ್ರಶ್ನಿಸಿದ್ದಾರೆ.

‘ಬಾಳಿ ಬದುಕಬೇಕಾದ ಯುವಕ, ನಿಮ್ಮ ಪುತ್ರ ರಾಕೇಶ್ ನಿಧನ ಹೊಂದಿದಾಗ ತಂದೆಯಾಗಿ ನೀವು ಪಟ್ಟ ಯಾತನೆ, ದುಃಖವನ್ನು ನೆನೆದು, ಒಬ್ಬನೇ ಮಗನ ತಂದೆಯಾದ ನಾನೂ ಮರುಗಿದ್ದೇನೆ. ನಾಡಿನ ತಂದೆ– ತಾಯಿಯರೂ ದುಃಖಿಸಿದ್ದಾರೆ. ಅಂಥ ತಂದೆ ಸ್ಥಾನವನ್ನು ನೀವು ಗೇಲಿ ಮಾಡುವುದಾದರೆ, ಅಗೌರವಿಸುವುದಾದರೆ ಆಗಲಿ‌ ಬಿಡಿ. ಇದರ
ಪರಾಮರ್ಶೆಯನ್ನು ನಾನು ಜನತಾ ನ್ಯಾಯಾಲಯಕ್ಕೆ ಬಿಡುತ್ತೇನೆ’
ಎಂದಿದ್ದಾರೆ. ‘ರಾಮನಗರದಲ್ಲಿ ನನ್ನನ್ನು ಸೋಲಿಸುತ್ತೇನೆ ಎಂಬ ನಿಮ್ಮ ಮಾತು ದ್ವೇಷ ರಾಜಕಾರಣದ ಪ್ರತೀಕ. ನಿಮ್ಮ ರಾಜಕೀಯ ಜೀವನದ ಏಳಿಗೆ ಕಂಡಿದ್ದೇ ಇನ್ನೊಬ್ಬರನ್ನು ಕುತಂತ್ರದಿಂದ ಸೋಲಿಸಿಯೇ ಅಲ್ಲವೇ? ಆದರೆ ಸೋಲಲು ನಾನು ಪರಮೇಶ್ವರ್ ಅಲ್ಲ’ ಎಂದು ಹೇಳಿದ್ದಾರೆ.

By R

You missed