ರಾಮನಗರ: ರೇಷ್ಮೆಗೂಡಿಗೆ ಬೆಂಬಲ ಬೆಲೆ ಅಥವಾ ಪ್ರೋತ್ಸಾಹ ಧನ ನೀಡುವ ಕುರಿತು ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮಂಗಳವಾರ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಸೋಮವಾರ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ‘ ಮಿಶ್ರತಳಿ ಗೂಡಿಗೆ ಪ್ರತಿ ಕೆ.ಜಿ.ಗೆ ₹280 ಹಾಗೂ ದ್ವಿತಳಿಗೆ ₹325 ಬೆಂಬಲ ಬೆಲೆ ನೀಡುವಂತೆ ಬಸವರಾಜು ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈ ಪ್ರಕಾರ ನೀಡುವುದಾದರೆ ಸರ್ಕಾರಕ್ಕೆ ದಿನವೊಂದಕ್ಕೆ ಅಂದಾಜು ₹50 ಲಕ್ಷ ವೆಚ್ಚ ತಗುಲುತ್ತದೆ. ಕನಿಷ್ಠ ಮೂರು ತಿಂಗಳು ಬೆಂಬಲ ಬೆಲೆ ನೀಡುತ್ತೇವೆ ಎಂದರೂ ₹70–80 ಕೋಟಿ ಬೇಕಾಗುತ್ತದೆ. ಆದರೆ ಇಷ್ಟು ವೆಚ್ಚವನ್ನು ಭರಿಸುವ ಸ್ಥಿತಿಯಲ್ಲಿ ಆರ್ಥಿಕ ಇಲಾಖೆ ಇಲ್ಲ. ಹೀಗಾಗಿ ಪ್ರತಿ ಕೆ.ಜಿ. ಗೂಡಿಗೆ ಮಿಶ್ರ ತಳಿಗೆ ₨30 ಹಾಗೂ ದ್ವಿತಳಿ ಗೂಡಿಗೆ ₹50 ಪ್ರೋತ್ಸಾಹ ಧನ ನೀಡಲು ಚಿಂತಿಸಲಾಗಿದೆ. ಇದಕ್ಕಾಗಿ ₹25–30 ಕೋಟಿ ಹೊಂದಿಸಲು ಪ್ರಯತ್ನಿಸಲಾಗುವುದು. ರೇಷ್ಮೆ ಸಚಿವ ಸಾ.ರಾ. ಮಹೇಶ್ ಈ ಬಗ್ಗೆ ಮಂಗಳವಾರ ರೈತರೊಂದಿಗೆ ಚರ್ಚಿಸಿ ತೀರ್ಮಾನಿಸಲಿದ್ದಾರೆ’ ಎಂದು ಭರವಸೆ ನೀಡಿದರು.

ಆರ್ಥಿಕ ಶಿಸ್ತು ಮುಖ್ಯ: ‘ಒಂದು ಬೆಳೆಗೆ ಬೆಂಬಲ ಬೆಲೆ ನೀಡಿ ಖರೀದಿ ಮಾಡಲು ಮುಂದಾದರೆ ಎಲ್ಲಾ ಬೆಳೆಗಾರರು ಇದನ್ನೇ ಅನುಸರಿಸುತ್ತಾರೆ. ಪ್ರಸ್ತುತ ಸನ್ನಿವೇಶದಲ್ಲಿ ನಾನು ಆರ್ಥಿಕ ಶಿಸ್ತು ಪಾಲಿಸಬೇಕಿದೆ. ಅಲ್ಲದೆ, ₹40 ಸಾವಿರ ಕೋಟಿ ಸಾಲ ಮನ್ನಾ, ಸರ್ಕಾರಿ ನೌಕರರಿಗೆ 6ನೇ ವೇತನ ಆಯೋಗ ಶಿಫಾರಸ್ಸಿನಂತೆ ಸಂಬಳ ಹೆಚ್ಚಳವಾಗಿ ₹12 ಸಾವಿರ ಕೋಟಿ, ಕಳೆದ ಸರ್ಕಾರದ ₹4 ಸಾವಿರ ಕೋಟಿ ಸಾಲ ಮನ್ನಾ, ಚಾಲ್ತಿ ಸಾಲದ ₹9 ಸಾವಿರ ಕೋಟಿ, ಮಾವಿಗೆ ಬೆಂಬಲ ಬೆಲೆ ಸೇರಿದಂತೆ ಎಲ್ಲಾ ವಿಚಾರಗಳಿಂದ ಆರ್ಥಿಕ ಇಲಾಖೆ ಅಧಿಕಾರಿಗಳು ಈಗಾಗಲೇ ಸುಸ್ತಾಗಿ ಹೋಗಿದ್ದಾರೆ. ಈಗ ಒಂದು ಪೈಸೆ ಖರ್ಚು ಮಾಡಬೇಕಾದರೆ ಲೆಕ್ಕಾಚಾರ ಹಾಕಬೇಕಿದೆ, ಹೊಸ ಯೋಜನೆ ಘೋಷಣೆ ಮಾಡಬೇಕಾದರೆ ಹಲವಾರು ಬಾರಿ ಚಿಂತಿಸಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ಕುಮಾರಸ್ವಾಮಿ ಅಸಹಾಯಕತೆ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನಾ ಸಭೆಯಲ್ಲಿ ಮಾತನಾಡಿದ ರೇಷ್ಮೆ ಬೆಳಗಾರರಾದ ಗೌತಮ್ ಗೌಡ ಮತ್ತು ರವಿ ‘ಕಳೆದ ಎರಡು ವರ್ಷಗಳಿಂದ ರೇಷ್ಮೆ ಗೂಡಿಗೆ ನಷ್ಟವಲ್ಲದ ಬೆಲೆಯನ್ನು ರೈತರು ಪಡೆಯುತ್ತಿದ್ದರು, ಆದರೆ ಕಳೆದ ಕೆಲವು ತಿಂಗಳಿಂದ ಬೆಲೆ ಕುಸಿತವಾಗಿದೆ. ಹಿಂದೆ ಬೆಲೆ ಕುಸಿದು ಹೋರಾಟ ನಡೆದ ಸಂದರ್ಭದಲ್ಲಿ ಡಾ.ಬಸವರಾಜು ಅವರ ನೇತೃತ್ವದ ಸಮಿತಿ ನೇಮಕ ಮಾಡಿ ಸರ್ಕಾರ ವರದಿಯನ್ನು ಪಡೆದಿತ್ತು. ಆದರೆ ಆ ವರದಿ ಈವರೆವಿಗೂ ರೈತರಿಗೆ ತಲುಪಿಲ್ಲ’ಎಂದು ದೂರಿದರು.

‘ಮಿಶ್ರ ತಳಿಗೆ ₹75 ಮತ್ತು ದ್ವಿತಳಿ ಗೂಡಿಗೆ ₹100 ಪ್ರೋತ್ಸಾಹಧನ ನೀಡಬೇಕು’ ಎಂದು ಕೋರಿದರು. ಈ ಸಂದರ್ಭ ಮಾತನಾಡಿದ ಮಂಡ್ಯ ರೈತರೊಬ್ಬರು ‘ಸಾವಿರಾರು ಕೋಟಿ ರೂಪಾಯಿ ಸಾಲ ಮನ್ನಾ ಮಾಡಿರುವ ಕುಮಾರಸ್ವಾಮಿ ಅವರಿಗೆ ₹80 ಕೋಟಿ ರೂ ಹೆಚ್ಚೇನು ಅಲ್ಲ. ಬೆಂಬಲ ಬೆಲೆ ನೀಡುವುದರಿಂದ 50 ಸಾವಿರ ಕುಟುಂಬಗಳು ಬದುಕಿಕೊಳ್ಳುತ್ತವೆ’ ಎಂದು ಮನವಿ ಮಾಡಿದರು.

ರೈತರಿಗೆ ಬೆಂಬಲ ಬೆಲೆ ನೀಡಲೇಬೇಕು ಹಾಗೂ ಬಸವರಾಜು ಸಮಿತಿ ವರದಿಯನ್ನು ಅನುಷ್ಟಾನಕ್ಕೆ ತರಬೇಕು ಎಂದು ಶಾಸಕ ಎ.ಮಂಜುನಾಥ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ಎಸ್. ರವಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಸಚಿವರಾದ ಡಿ.ಕೆ. ಶಿವಕುಮಾರ್, ಎಚ್‌.ಡಿ. ರೇವಣ್ಣ, ಸಾ.ರಾ. ಮಹೇಶ್, ಸಿ.ಎಸ್. ಪುಟ್ಟರಾಜು. ಜಿ.ಪಂ. ಅಧ್ಯಕ್ಷ ಸಿ.ಪಿ. ರಾಜೇಶ್‌, ಉಪಾಧ್ಯಕ್ಷೆ ದಿವ್ಯಾ ಗಂಗಾಧರ್‌, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.