ರಾಮನಗರ: ‘ರೈತರು ಉಳಿಯಬೇಕು ಎನ್ನುವುದೇ ನನ್ನ ಆಶಯ. ಇದಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದೇನೆ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಭವನದ ಆವರಣದಲ್ಲಿ ಸೋಮವಾರ ನಡೆದ ಸಾರ್ವಜನಿಕರ ಕುಂದುಕೊರತೆಗಳ ಆಲಿಕೆ, ಅಹವಾಲು ಸ್ವೀಕಾರ ಮತ್ತು ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ‘ರೈತ ಸಮುದಾಯ ತಾಳ್ಮೆಯಿಂದ ವರ್ತಿಸಬೇಕು. ನಿಮ್ಮ ಎಲ್ಲಾ ಸಮಸ್ಯೆಗಳು ನನಗೆ ಗೊತ್ತಿದೆ, ಸಮಸ್ಯೆಗಳನ್ನು ಬಗೆಹರಿಸಲು ನನಗೆ ಕಾಲಾವಕಾಶ ನೀಡಿ’ ಎಂದರು.

‘ರೈತರ ₹40 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೇನೆ. ಇದರಿಂದ 22 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ. ಸಹಕಾರ ಸಂಘ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಲು ಸ್ವಲ್ಪ ಪೆಟ್ರೋಲ್‌ ಬೆಲೆ ಹೆಚ್ಚು ಮಾಡಿದ್ದಕ್ಕೆ ನನ್ನ ವಿರುದ್ಧ ಮಾಧ್ಯಮಗಳು ಅಪಪ್ರಚಾರ ನಡೆಸುತ್ತಿವೆ’ ಎಂದು ಕಿಡಿಕಾರಿದರು.

‘ನಿಮ್ಮೆಲ್ಲರನ್ನು ಖುದ್ದು ಭೇಟಿ ಮಾಡಿ ಅರ್ಜಿ ಸ್ವೀಕರಿಸಬೇಕೆಂದಿದ್ದೆ, ಆದರೆ ಸಮಯದ ಅಭಾವದಿಂದ ಸಾಧ್ಯವಾಗಲಿಲ್ಲ. ಇಲ್ಲಿರುವ ಅಧಿಕಾರಿಗಳಿಗೆ ನಿಮ್ಮ ಅಹವಾಲಿನ ಅರ್ಜಿಗಳನ್ನು ಕೊಡಿ. ಎರಡು ತಿಂಗಳಲ್ಲಿ ಸಮಸ್ಯೆ ಬಗೆಹರಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ನೀರಿನ ಸಮಸ್ಯೆಯನ್ನು ಬಗೆಹರಿಸಲು ನದಿ ಮೂಲಗಳ ಶಾಶ್ವತವಾದ ಯೋಜನೆಯನ್ನು ರೂಪಿಸಲಾಗುವುದು. ರಾಮನಗರದಲ್ಲಿ ಈಗ ಆರು ದಿನಕ್ಕೆ ಒಮ್ಮೆ ನೀರು ಬಿಡಲಾಗುತ್ತಿದೆ. ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ₹1 ಸಾವಿರ ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಿ ಪ್ರತಿ ಗ್ರಾಮಕ್ಕೂ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗುವುದು’ ಎಂದರು.

‘ಬೈರಮಂಗಲದ ವೃಷಭಾವತಿ ಕೆರೆಯ ನೀರನ್ನು ಶುದ್ಧೀಕರಣಗೊಳಿಸಿ, ಆ ಭಾಗದ ಎಲ್ಲಾ ಕೆರೆಗಳನ್ನು ತುಂಬಿಸಲಾಗುವುದು. ಶಿಂಷಾ ನದಿಯಿಂದ ಮಾಗಡಿ, ರಾಮನಗರ, ಚನ್ನಪಟ್ಟಣ ಪ್ರದೇಶಗಳಿಗೆ ನೀರನ್ನು ತರಲಾಗುವುದು’ ಎಂದು ಮಾಹಿತಿ ನೀಡಿದರು.

‘ಸಮಸ್ಯೆಗಳನ್ನು ಬಗೆಹರಿಸಲು ಸಮಯಾವಕಾಶ ಬೇಕು. ನನಗೆ ಕಾಲಾವಕಾಶ ನೀಡಿ. ಕಂದಾಯ ಇಲಾಖೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಕ್ರಮಕೈಗೊಳ್ಳುವ ಜತೆಗೆ ಖಾಲಿ ಇರುವ ಹುದ್ದೆಗಳನ್ನು ನೇಮಕ ಮಾಡುತ್ತೇನೆ’ ಎಂದು ತಿಳಿಸಿದರು.

‘ಮರಳವಾಡಿ, ಹಾರೋಹಳ್ಳಿ ಹೋಬಳಿಗಳಲ್ಲಿ 300 ಕುಟುಂಬಗಳಿಗೆ ನೀಡುವ ಸಾಗುವಳಿ ಚೀಟಿ ಸಿದ್ದವಾಗಿದೆ. ಮುಂದಿನ ದಿನಗಲ್ಲಿ ದೊಡ್ಡಮಣ್ಣುಗುಡ್ಡೆ ಸೇರಿದಂತೆ ಬಾಕಿ ಇರುವ ಸಾಗುವಳಿ ಚೀಟಿಗಳನ್ನು ನೀಡಲಾಗುವುದು. ಅಂಗನವಾಡಿ ಕಾರ್ಯಕರ್ತೆಯರು, ಹಿರಿಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಎಲ್ಲರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ನಾನು ಮುಖ್ಯಮಂತ್ರಿಯಾಗಿ ಎರಡು ತಿಂಗಳಾಗಿದೆ ಅಷ್ಟೇ. ನನ್ನ ಮೇಲೆ ಒತ್ತಡ ಹೇರದೆ ಉಸಿರಾಡಲು ಬಿಡಿ’ ಎಂದರು.

By R

You missed