ಮಂಡ್ಯ: ಕಾಂಗ್ರೆಸ್ ಸರಕಾರ ಬಿಡುಗಡೆ ಮಾಡಿರುವ ಪ್ರಣಾಳಿಕೆ ಸಂಪೂರ್ಣ ಸುಳ್ಳಿನಿಂದ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕಲ್ಲಹಳ್ಳಿಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಶ್ರೀನಿವಾಸ್ ಪರ ರೋಡ್ ಶೋ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಐದು ವರ್ಷದಿಂದ ಅಧಿಕಾರ ಪೂರೈಸಿದ ಕಾಂಗ್ರೆಸ್ ಸರಕಾರ ಈಗ ಕೈಲಾಗದ ಕಾರ್ಯಗಳನ್ನು ಮಾಡುತ್ತೇವೆ ಎಂದು ಜನರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿರುವುದು ಸರಿಯಲ್ಲ ಎಂದರು.

ಪ್ರತಿವರ್ಷ ಇಪ್ಪತ್ತು ಲಕ್ಷ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದೆ. ಐದು ವರ್ಷ ಆಡಳಿತ ನಡೆಸಿ ಕಾಂಗ್ರೆಸ್ ಸರಕಾರ ಖಾಲಿ ಇರುವ 2.50 ಲಕ್ಷ ಸರಕಾರಿ ನೌಕರ ಹುದ್ದೆಗಳನ್ನು ತುಂಬಲಿಲ್ಲ. ತುಂಬಿದ್ದರೆ 2.50ಲಕ್ಷ ಜನತೆಗೆ ಉದ್ಯೋಗ ನೀಡಬಹುದಿತ್ತು. ಅದನ್ನು ಮಾಡದ ಸರಕಾರ ಈಗ ಐದು ವರ್ಷದಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎನ್ನುವುದು ಸಂಪೂರ್ಣ ಸುಳ್ಳು. ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುತ್ತೇನೆ ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಆದರೆ ಲೋಕಾಯುಕ್ತ ಸಂಸ್ಥೆಯನ್ನು ನಿಷ್ಕ್ರಿಯಗೊಳಿಸಿದ ಸಿದ್ದರಾಮಯ್ಯ ಈಗ ಬಲತುಂಬುವುದಾಗಿ ಹೇಳುತ್ತಿರುವುದ ಹಾಸ್ಯಾಸ್ಪದವಾಗಿದೆ ಎಂದರು.

ಸಾಲಮನ್ನಾ, ಪ್ರತಿ ಕುಟುಂಬಕ್ಕೆ ಉದ್ಯೋಗ ನೀಡುವುದು ಹೇಗೆಂದು ನಾನು ತೀರ್ಮಾನಿಸಿದ್ದೇನೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರೈತ ಮತ್ತು ಜನಸಾಮಾನ್ಯರ ಸಂಕಷ್ಟ ಬಗೆಹರಿಸುತ್ತೇನೆ. ಮಂಡ್ಯ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ರಾಜ್ಯಾದ್ಯಂತ 3800ಕ್ಕು ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರು. ರೈತರ ಕುಟುಂಬ ಉಳಿಸಲು ನಾನು ಹೋರಾಟ ಮಾಡುತ್ತಿದ್ದೇನೆ ಎಂದರು.