ಪಾಂಡವಪುರ: ‘ಹಸಿರು ಟವಲ್ ಹಾಕಿಕೊಂಡ ಮಾತ್ರಕ್ಕೆ ಅವರು ರೈತ ನಾಯಕರಲ್ಲ. ರೈತರ ಬಗ್ಗೆ ನಿಜವಾದ ಕಾಳಜಿ ಇಟ್ಟುಕೊಂಡಿರುವ ಸಿ.ಎಸ್.ಪುಟ್ಟರಾಜು ಅವರಿಗೆ ಆಶೀರ್ವಾದ ಮಾಡುವ ಮೂಲಕ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಶಕ್ತಿ ತುಂಬಿ’ ಎಂದು ಜೆಡಿಎಸ್‌ ನಾಯಕಿ ಅನಿತಾ ಕುಮಾರಸ್ವಾಮಿ ಮನವಿ ಮಾಡಿದರು.

ಪಟ್ಟಣದ ಪಾಂಡವ ಕ್ರೀಡಾಂಗಣದ ಬಳಿ ಸೋಮವಾರ ನಡೆದ ಜೆಡಿಎಸ್‌ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಿ.ಎಸ್.ಪುಟ್ಟರಾಜು ಅವರು ಎಚ್‌.ಡಿ.ದೇವೇಗೌಡರ ಕುಟುಂಬಕ್ಕೆ ಮತ್ತು ಪಕ್ಷಕ್ಕೆ ನಿಷ್ಠರಾಗಿದ್ದಾರೆ. ಅಲ್ಲದೆ ದೇವೇಗೌಡರ ಮಾನಸ ಪುತ್ರರಾಗಿದ್ದಾರೆ. ಈ ಕ್ಷೇತ್ರದ ಜನರ ಕಷ್ಟಗಳಿಗೆ ಸದಾ ಸ್ಫಂದಿಸುತ್ತಿದ್ದಾರೆ. ಇಂತಹ ವ್ಯಕ್ತಿಯನ್ನು ಗೆಲ್ಲಿಸಿ ಕ್ಷೇತ್ರದ ಅಭಿವೃದ್ಧಿಗೆ ಅವಕಾಶ ಮಾಡಿಕೊಡಬೇಕು ಎಂದರು.

ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗಳಿಂದ ರಾಜ್ಯದ ಹಿತಕಾಯಲು ಸಾಧ್ಯವಿಲ್ಲ. ನಾಡಿನ ನೆಲ, ಜಲ, ಭಾಷೆಯ ಉಳಿವು ಜೆಡಿಎಸ್‌ನಂತಹ ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಸಾಧ್ಯ. ಕಾವೇರಿ ನೀರಿನ ವಿವಾದ ಮತ್ತು ಮಹದಾಯಿ ನೀರಿನ ವಿವಾದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ನಡೆದುಕೊಂಡಿರುವ ನೀತಿಯ ಬಗ್ಗೆ ನೋಡಿದ್ದೀರಿ. ಎಚ್.ಡಿ.ಕುಮಾರಸ್ವಾಮಿ ಅವರು 20 ತಿಂಗಳು ನೀಡಿದ ಆಡಳಿತವನ್ನು ನೋಡಿದ್ದೀರಿ. ಆಯ್ಕೆ ನಿಮ್ಮದು ಎಂದು ಹೇಳಿದರು.

ಕನಿಕರ ಬೇಡ: ‘ಸ್ವಯಂ ಘೋಷಿತ ರೈತ ನಾಯಕರಾಗಿರುವವರ ಬಗ್ಗೆ ಕನಿಕರ ಬೇಡ. ಇಂದು ಕನಿಕರ ಪಟ್ಟರೆ ನಾಳೆ ನೀವೇ ತಿರಸ್ಕಾರಕ್ಕೆ ಒಳಗಾಗುತ್ತೀರಿ. ನಿಮ್ಮ ಮತ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರಿಗೆ ಶಕ್ತಿತುಂಬಿದಂತೆ ಆಗುತ್ತದೆ’ ಎಂದರು.

ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಮಾತನಾಡಿ, ಕಳೆದ 5 ವರ್ಷಗಳಿಂದ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಂಡಿಲ್ಲ. ಒಳಚರಂಡಿ ಯೋಜನೆ ಪೂರ್ಣಗೊಳ್ಳದೆ ಪಟ್ಟಣ ಅಶುಚಿತ್ವದಿಂದ ಕೂಡಿದೆ. ರೈತರ ಜೀವನಾಡಿ ಪಿಎಸ್‌ಎಸ್‌ಕೆ ಕಬ್ಬು ಅರೆಯದೆ ಬಾಗಿಲು ಮುಚ್ಚಿದೆ. ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದಾರೆ. ನೀರಿಲ್ಲದೆ ಬೇಸಿಗೆ ಬೆಳೆ ಒಣಗುತ್ತಿವೆ. ತಕ್ಷಣ ನಾಲೆಗಳಿಗೆ ನೀರು ಹರಿಸದಿದ್ದರೆ ಮುಖ್ಯಮಂ‌ತ್ರಿ ಸಿದ್ದರಾಮಯ್ಯನವರು ಜಿಲ್ಲೆಗೆ ಪ್ರವೇಶ ಮಾಡದಂತೆ ನಿರ್ಬಂಧಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು. ಶಾಸಕ ಕೆ.ಟಿ.ಶ್ರೀಕಂಠೇಗೌಡ ಮನವಿ ಮಾಡಿದರು.

ಮಾಜಿ ಶಾಸಕ ಎಲ್‌.ಆರ್.ಶಿವರಾಮೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಅಣ್ಣೇಗೌಡ, ಡಿ.ರಮೆಶ್‌, ಲಕ್ಷ್ಮಿ ಅಶ್ವನ್‌ಗೌಡ, ಶೇಖ್‌ ಆಲಿ ಅಹಮದ್‌, ಅಮರನಾಥ್, ಎಂ‌.ಸಂತೋಷ್, ನಾಸರ್‌, ಏಜಾಜ್‌ ಆಲಿಖಾನ್‌, ಸಗಾಯ್‌, ಎಂ.ಬಿ.ಶ್ರೀನಿವಾಸ್‌, ತಿಮ್ಮೇಗೌಡ, ಸಿ.ಅಶೋಕ, ಅನುಸೂಯಾ, ಶಾಂತಲಾ ಇದ್ದರು.

By R

You missed